ಮದ್ಯ ನಿಷೇಧಕ್ಕಾಗಿ ಸಾವಿರಾರು ಮಹಿಳೆಯರ ಪ್ರತಿಭಟನೆ-liquor ban

ಪ್ರತಿಭಟನೆ
ಪ್ರತಿಭಟನೆ
Published on

ಪ್ರಮುಖ ಮುಖ್ಯಾಂಶಗಳು

  • ಮದ್ಯ ನಿಷೇಧಿಸುವಂತೆ ಸಾವಿರಾರು ಮಹಿಳೆಯರು ಪ್ರತಿಭಟನೆ
  • ಮದ್ಯದಂಗಡಿಗಳಿಗೆ ಅನುಮತಿ ನೀಡುವ ಅಧಿಕಾರವನ್ನು ಗ್ರಾಮ ಸಭೆಗಳಿಗೆ ವಹಿಸಿ
  • ಸ್ವಾತಂತ್ರ್ಯ ಉದ್ಯಾನದಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ
ಬೆಂಗಳೂರು:ರಾಜ್ಯದಲ್ಲಿ ಮದ್ಯ ನಿಷೇಧಿಸುವಂತೆ ಒತ್ತಾಯಿಸಿ ಮಂಗಳವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಸಾವಿರಾರು ಮಹಿಳೆಯರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ, ಕೆಲ ಬೇಡಿಕೆಗಳ ಹಕ್ಕೊತ್ತಾಯ ಮಂಡಿಸಿದರು.
ಮದ್ಯ ನಿಯಂತ್ರಣ ಸಂಬಂಧಿಸಿದಂತೆ ಹರಿಯಾಣ, ರಾಜಸ್ಥಾನ, ಮಹಾರಾಷ್ಟ್ರ ಮಾದರಿಯನ್ನು ಕರ್ನಾಟಕದಲ್ಲಿ ಜಾರಿಗೆ ತರಬೇಕು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮದ್ಯದಂಗಡಿಗಳಿಗೆ ಅನುಮತಿ ನೀಡುವ ಅಧಿಕಾರವನ್ನು ಗ್ರಾಮ ಸಭೆಗಳಿಗೆ ವಹಿಸುವ ಕಾನೂನು ರಚಿಸಬೇಕು. ದಿನದಿಂದ ದಿನಕ್ಕೆ ಬಾರ್‌ಗಳಿಗೆ ಹೆಚ್ಚಳವಾಗುತ್ತಿದ್ದು, ಇದಕ್ಕೆ ಕಡಿವಾಣ ಆಗಬೇಕು. ಆನ್‌ಲೈನ್‌ನಲ್ಲಿ ಮದ್ಯ ಮಾರಾಟವನ್ನು ನಿಲ್ಲಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.
ಪರವಾನಗಿ ಪಡೆದ ಅಂಗಡಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಪ್ರತಿ ಹಳ್ಳಿ, ಕಿರಾಣಿ ಅಂಗಡಿ ಮತ್ತು ಮಾಂಸಾಹಾರಿ ಹೋಟೆಲ್ ಸೇರಿ ಇತರ ಕಡೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದನ್ನು ತಡೆಯಲು ಪ್ರತಿ ಹಳ್ಳಿಯಲ್ಲಿ ಮಹಿಳೆಯರ ನೇತೃತ್ವದಲ್ಲಿ ಜಾಗ್ರತ ಸಮಿತಿ ರಚಿಸಬೇಕು. ಈ ಸಮಿತಿಗೆ ಅರೆ ನ್ಯಾಯಿಕ ಅಧಿಕಾರ ನೀಡಬೇಕು. ಸಾಮಾಜಿಕ ನ್ಯಾಯಕ್ಕಾಗಿ ಹೆಚ್ಚುವರಿ ಸಮಿತಿ ಮಾಡುವ ಅವಕಾಶವೂ ಇದೆ ಎಂದು ಪ್ರತಿಭಟನಕಾರರು ಹೇಳಿದರು.
ಮದ್ಯ ನಿಷೇಧ ಅಂದೋಲನ ಸಂಘಟನೆಯ ಸ್ವರ್ಣಾಭಟ್ ಮಾತನಾಡಿ, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ(ನಿಮ್ಹಾನ್ಸ್), ರಾಷ್ಟ್ರೀಯ ಅಪರಾಧಗಳ ದಾಖಲೆಗಳ ಬ್ಯೂರೋ(ಎನ್‌ಸಿಆರ್‌ಬಿ) ಹಾಗೂ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎ್ಎಚ್‌ಎಸ್) ಸೇರಿ ಇತರ ಸಂಸ್ಥೆಗಳು, ಕುಟುಂಬ,ಆರೋಗ್ಯ, ಸಮಾಜದ ಮೇಲೆ ಮದ್ಯದಿಂದಾಗಿ ಆಗುವ ವ್ಯತಿರಿಕ್ತ ಪರಿಣಾಮ ಕುರಿತು ನಡೆಸಿದ್ದ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದ್ದೇವೆ. 10 ವರ್ಷಗಳಿಂದ ಗ್ರಾಮ ಮಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಕುರಿತು ಗ್ರಾಪಂ, ಪೊಲೀಸ್ ಠಾಣೆಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಕೆಯಾಗಿದ್ದರೂ ಪರಿಣಾಮಕಾರಿಯಾಗಿ ಕ್ರಮವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮದ್ಯ ಆದಾಯ ನೆಚ್ಚಿಕೊಂಡ ಸರ್ಕಾರ:
ರಾಜ್ಯದಲ್ಲಿ 10 ವರ್ಷದಿಂದ ಮದ್ಯ ನಿಯಂತ್ರಣಕ್ಕಾಗಿ ವಿಭಿನ್ನ ರೀತಿಯಲ್ಲಿ ಹೋರಾಟ ನಡೆಸಿಕೊಂಡು ಬರುತ್ತಿದ್ದೇವೆ. ಆದರೂ, ಮದ್ಯ ಮಾರಾಟಕ್ಕೆ ಕಡಿವಾಣವೇ ಬೀಳುತ್ತಿಲ್ಲ. ಬರೀ ಮದ್ಯ ಮಾರಾಟದ ಆದಾಯವನ್ನೇ ಸರ್ಕಾರ ಹೆಚ್ಚು ನಂಬಿಕೊಂಡಿರುವುದು ವಿಷಾಧನೀಯ ಸಂಗತಿ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಹದಿಹರೆಯದವರು ಮದ್ಯ ಚಟಕ್ಕೆ ಅಂಟಿಕೊಂಡು ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕುಟುಂಬ ನಡೆಸಲು ಮಹಿಳೆಯರಿಗೆ ಕಷ್ಟವಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಪಂಜಾಬ್‌ನಂತೆ, ನಮ್ಮ ರಾಜ್ಯವು ಮದ್ಯ ವ್ಯಸನಕ್ಕೆ ಸಿಲುಕಲಿದೆ ಎಂದು ಮದ್ಯ ನಿಷೇಧ ಅಂದೋಲನ ಸಂಘಟನೆಯ ಸ್ವರ್ಣಾಭಟ್ ಕಳವಳ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net