ಸಿಎಂ ಮಧ್ಯಸ್ಥಿಕೆಯಲ್ಲಿ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಂಧಾನ ತಡರಾತ್ರಿ ಯಶಸ್ವಿ

ಬೆಳಗಾವಿಯ ಸುವರ್ಣ ಸೌಧ ಹಾಗೂ ಸರ್ಕಿಟ್ ಹೌಸ್​ನಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಜತೆಗೆ ಭಾನುವಾರ ಬೆಳಗ್ಗೆಯಿಂದ ಮಧ್ಯರಾತ್ರಿವರೆಗೂ ಸರಣಿ ಸಭೆ ನಡೆಸಿದ ಡಿ.ಕೆ. ಶಿವಕುಮಾರ್, ಬಿಕ್ಕಟ್ಟಿನ ಶಮನಕ್ಕೆ ಪರಿಹಾರ ಸೂತ್ರ ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
dk shivakumar
ಸಿಎಂ ಮಧ್ಯಸ್ಥಿಕೆಯಲ್ಲಿ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಂಧಾನ ತಡರಾತ್ರಿ ಯಶಸ್ವಿ
Published on: 
  • ಕೇಂದ್ರ ಸರ್ಕಾರ ಕಬ್ಬಿನ ಎಂಎಸ್​ಪಿ ನಿಗದಿ ಬಳಿಕ ಕಾರ್ಖಾನೆಗಳು ನೀಡಬೇಕಾದ ದರದ ಬಗ್ಗೆ ನಿರ್ಧಾರ

  • ಎರಡು ದಿನಗಳಲ್ಲಿ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರಿಂದ ಅಂತಿಮ ತೀರ್ಮಾನ ಪ್ರಕಟ

  • ಬೆಳಗ್ಗೆಯಿಂದ ಮಧ್ಯರಾತ್ರಿವರೆಗೂ 10 ತಾಸು, ಐದು ಸುತ್ತುಗಳ ಸುದೀರ್ಘ ಸಭೆ

ಬೆಳಗಾವಿ: ಸಿಎಂ ಡಿಕೆ ಶಿವಕುಮಾರ್​ ಅವರ ಮಧ್ಯಸ್ಥಿಕೆಯಲ್ಲಿ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಂಧಾನ ಕಡೆಗೂ ಯಶಸ್ವಿಯಾಗಿದ್ದು, ಕೇಂದ್ರ ಸರ್ಕಾರ ಸಕ್ಕರೆ ಕನಿಷ್ಟ ಮಾರಾಟ ಬೆಲೆ ನಿಗದಿ ಮಾಡಿದ ಬಳಿಕ ಅದಕ್ಕೆ ಅನುಗುಣವಾಗಿ ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ನೀಡಬೇಕಾಗಿರುವ ದರದ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಈ ನಿರ್ಧಾರದ ಬಗ್ಗೆ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರು ಇನ್ನೆರಡು ದಿನದಲ್ಲಿ ಅಂತಿಮ ತೀರ್ಮಾನ ಪ್ರಕಟಿಸಲಿದ್ದಾರೆ.

ಬೆಳಗಾವಿಯ ಸುವರ್ಣ ಸೌಧ ಹಾಗೂ ಸರ್ಕಿಟ್ ಹೌಸ್​ನಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಜತೆಗೆ ಭಾನುವಾರ ಬೆಳಗ್ಗೆಯಿಂದ ಮಧ್ಯರಾತ್ರಿವರೆಗೂ ಸರಣಿ ಸಭೆ ನಡೆಸಿದ ಡಿ.ಕೆ. ಶಿವಕುಮಾರ್, ಬಿಕ್ಕಟ್ಟಿನ ಶಮನಕ್ಕೆ ಪರಿಹಾರ ಸೂತ್ರ ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

10 ತಾಸು, 5 ಸುತ್ತುಗಳ ಸುದೀರ್ಘ ಸಭೆ

ಬೆಳಗ್ಗೆ 11 ಗಂಟೆ ಸುಮಾರಿಗೆ ಬೆಳಗಾವಿಯ ಸುವರ್ಣಸೌಧದಲ್ಲಿ ಸಕ್ಕರೆ ಮಾಲೀಕರೊಂದಿಗೆ ಸಭೆ ಆರಂಭಿಸಿದ ಸಿಎಂ, ಮಧ್ಯರಾತ್ರಿವರೆಗೂ ಸುಮಾರು 10 ತಾಸುಗಳ, ಐದು ಸುತ್ತಿನ ಸಭೆಗಳನ್ನು ನಡೆಸಿದರು. ಈ ಸಭೆಯಲ್ಲಿ 9 ಮಂತ್ರಿಗಳು ಸೇರಿ 70 ಜನ ಶಾಸಕರು ಸುದೀರ್ಘ ಚರ್ಚೆ ನಡೆಸಿದ್ದಾರೆ. 80 ಕಾರ್ಖಾನೆಗಳ ಪೈಕಿ 79 ಕಾರ್ಖಾನೆ ಮಾಲೀಕರು ಭಾಗಿಯಾಗಿದ್ದು, ರೈತರು ಕೂಡ ಬಹಿರಂಗವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಸಿಎಂ, "ರೈತರು ಕೇಂದ್ರ ಸಚಿವರ ಜತೆ ಚರ್ಚೆ ಮಾಡಿದ್ದು, ಸಚಿವರಿಂದ ಭರವಸೆ ದೊರೆತಿದೆ. ಕಬ್ಬಿನ ಎಂಎಸ್​ಪಿ (ಕನಿಷ್ಠ ಮಾರಾಟ ದರ) ನಿಗದಿ ಬಳಿಕ ಕಾರ್ಖಾನೆಗಳು ರೈತರಿಗೆ ಎಷ್ಟು ದರ ನೀಡಬೇಕು ಎಂದು ತೀರ್ಮಾನಕ್ಕೆ ಬರಲಾಗಿದೆ. ಇದಕ್ಕೆ ಕಾರ್ಖಾನೆ ಮಾಲೀಕರು ಒಪ್ಪಿದ್ದಾರೆ. ರೈತರು ಉಳಿಯಬೇಕು, ಕಾರ್ಖಾನೆಯೂ ಉಳಿಯಬೇಕು. ಸರ್ಕಾರಕ್ಕೆ ರೈತರ ಬದುಕು ಮುಖ್ಯ ಎಂದರು.

Also Read
60,000 ಉದ್ಯೋಗಿಗಳಿಗೆ ತಾವೇ ಕೆಲಸಕ್ಕೆ ಗುಡ್​ಬೈ ಹೇಳುವಂತೆ ಟೆಕ್​ ದೈತ್ಯ ಕಂಪನಿ ಆಫರ್‌! ಬುದ್ಧಿವಂತಿಕೆಯ ಮೈಕ್ರೋಸಾಫ್ಟ್​ | Microsoft Offer
dk shivakumar

ರೈತರು ಎರಡು ದಿನ ಕಾಲಾವಕಾಶ ಕೇಳಿದ್ದಾರೆ. ಅವರು ತಮ್ಮಲ್ಲೇ ಚರ್ಚಿಸಿ ನಿರ್ಧಾರಕ್ಕೆ ಬರಲಿದ್ದಾರೆ. ರೈತರು ಹಾಗೂ ಕಾರ್ಖಾನೆ ಮಾಲೀಕರು ಒಪ್ಪಂದದ ಹತ್ತಿರಕ್ಕೆ ಬಂದಿದ್ದಾರೆ. ನಾವು ಅವರಿಗೆ ಬೆಂಬಲವಾಗಿ ನಿಲ್ಲುತ್ತೇವೆ. ಕೇಂದ್ರ ಸರ್ಕಾರದ ಜತೆಗೆ ಅವರೂ ಮಾತನಾಡುತ್ತಾರೆ. ನಾವೂ ಮಾತನಾಡುತ್ತೇವೆ. ಇಂದು ಈ ಹೋರಾಟ ಸುಖಾಂತ್ಯಕ್ಕೆ ಬಂದಿದೆ ಎಂದರು.

ನಾವು ರೈತರಿಗೆ ಪ್ರೋತ್ಸಾಹ ನೀಡಲು ಮುಂದಾಗಿದ್ದು, ಯಾವುದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಜೊತೆ ಮಾತುಕತೆಗೆ ಬದ್ಧನಾಗಿದ್ದೇನೆ. ಕೇಂದ್ರ ಸಚಿವರು ಕೊಟ್ಟ ಮಾತಿಗೆ ನಡೆಯುತ್ತಾರೆ ಎಂಬ ಭರವಸೆ ರೈತರಿಗಿದೆ. ಅದಕ್ಕೆ ನಮ್ಮ ಬೆಂಬಲವೂ ಇದೆ. ರೈತರಿಲ್ಲದೆ ನಾವಿಲ್ಲ. ನಾವಿಲ್ಲದೆ ರೈತರಿಲ್ಲ. ಸರ್ಕಾರದ ಮಧ್ಯಸ್ಥಿಕೆಯಲ್ಲಿ ಇವರಿಬ್ಬರ ಜತೆ ನಿಲ್ಲಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net