ನವದೆಹಲಿ: ಕಳೆದ ವರ್ಷದಲ್ಲಿ ಸತತವಾಗಿ ಮೂರು ಬಾರಿ ಉದ್ಯೋಗಿಗಳ ವಜಾಗೊಳಿಸುವಿಕೆ ಪ್ರಕ್ರಿಯೆಯಲ್ಲಿ ತೊಡಗುವ ಮೂಲಕ ಹೆಸರಾಂತ ಟೆಕ್ ಸಂಸ್ಥೆ ಮೈಕ್ರೋಸಾಫ್ಟ್, ಅದೆಷ್ಟೋ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಬಿಸಾಡಿತು. ಈ ವರ್ಷವು ಭಾರಿ ಉದ್ಯೋಗ ಕಡಿತಕ್ಕೆ ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿರುವ ಮೈಕ್ರೋಸಾಫ್ಟ್, 60 ಸಾವಿರಕ್ಕೂ ಹೆಚ್ಚು ನೌಕರರಿಗೆ ತಾವೇ ಕೆಲಸ ಬಿಟ್ಟುಹೋಗುವಂತೆ ಕೊಟ್ಟಿರುವ ಆಫರ್ ಸದ್ಯ ಬಹಳ ಶಾಕಿಂಗ್ ಆಗಿದೆ.
ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಭಾರಿ ಪ್ರಮಾಣದ ಹೂಡಿಕೆ ಮಾಡುತ್ತಿರುವ ಮೈಕ್ರೋಸಾಫ್ಟ್, ಎಷ್ಟು ಸಾಧ್ಯವೋ ಅಷ್ಟು ವೆಚ್ಚ ಕಡಿತಗೊಳಿಸುವ ಉದ್ದೇಶದಿಂದ ಸುಮಾರು 60 ಸಾವಿರ ಉದ್ಯೋಗಿಗಳಿಗೆ ಸ್ವಯಂ ವಿದಾಯ ಹೇಳುವ ಆಫರ್ ಅನ್ನು ನೀಡಿದೆ. ಕಂಪನಿಯ ಒಟ್ಟು ಉದ್ಯೋಗಿಗಳಲ್ಲಿ ಸುಮಾರು ಕಾಲು ಭಾಗದಷ್ಟು ಮಂದಿ ಈ ಯೋಜನೆಗೆ ಅರ್ಹರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಅಮೆರಿಕ, ಕೆನಡಾ, ಭಾರತ ಮತ್ತು ಬ್ರಿಟನ್ನ ಆಯ್ದ ತಂಡಗಳಲ್ಲಿ ಉಪಾಧ್ಯಕ್ಷರ ಹಂತದವರೆಗಿನ ಉದ್ಯೋಗಿಗಳು ಈ ಯೋಜನೆಯ ಪ್ರಯೋಜನ ಪಡೆಯಬಹುದು ಎನ್ನಲಾಗಿದೆ. ಆದರೆ, ಡೇಟಾ ಸೆಂಟರ್ಗಳು, ಸೇಲ್ಸ್ ಮತ್ತು ಮಾರುಕಟ್ಟೆ ವಿಭಾಗಗಳ ಕೆಲವು ಉದ್ಯೋಗಿಗಳಿಗೆ ಈ ಆಫರ್ ಅನ್ವಯಿಸುವುದಿಲ್ಲ ಎಂಬುದನ್ನು ಸಂಸ್ಥೆಯು ಒತ್ತಿ ಹೇಳಿದೆ.
ಉದ್ಯೋಗಿಗಳಿಗೆ ತಮ್ಮ ಮುಂದಿನ ವೃತ್ತಿಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೆಚ್ಚಿನ ಅವಕಾಶ ಕಲ್ಪಿಸುವುದು ಈ ಯೋಜನೆಯ ಉದ್ದೇಶ ಎಂದು ಕಂಪನಿಯ ಮುಖ್ಯ ಮಾನವ ಸಂಪನ್ಮೂಲ (ಎಚ್ಆರ್) ಆಮಿ ಕೋಲ್ಮನ್ ಸ್ಪಷ್ಟಪಡಿಸಿದ್ದಾರೆ. ಈ ವರ್ಷ ಮೈಕ್ರೋಸಾಫ್ಟ್ ನೀಡುತ್ತಿರುವ ಎರಡನೇ ಸ್ವಯಂ ಗುಡ್ಬೈ ಆಫರ್ ಇದಾಗಿದೆ. ಏಪ್ರಿಲ್ನಲ್ಲಿ ಅಮೆರಿಕದ ಉದ್ಯೋಗಿಗಳ ಪೈಕಿ ಸುಮಾರು ಶೇ.7ರಷ್ಟು ಮಂದಿಗೆ ಇದೇ ರೀತಿಯ ಅವಕಾಶ ನೀಡಲಾಗಿತ್ತು. ಅವರಲ್ಲಿ ಶೇ. 30ರಷ್ಟು ಮಂದಿ ಇದನ್ನು ಸ್ವೀಕರಿಸಿದ್ದರು ಎಂದು ಸಿಎನ್ಬಿಸಿ ವರದಿ ಮಾಡಿದೆ.
ದಾಖಲೆಗಳ ಪ್ರಕಾರ, 2025ರ ಕೊನೆಯಲ್ಲಿ 2.28 ಲಕ್ಷ ಉದ್ಯೋಗಿಗಳನ್ನು ಹೊಂದಿದ್ದ ಕಂಪನಿಯಲ್ಲಿ, ಈ ವರ್ಷದ ಜೂನ್ ಅಂತ್ಯಕ್ಕೆ ಉದ್ಯೋಗಿಗಳ ಸಂಖ್ಯೆ 2.23 ಲಕ್ಷಕ್ಕೆ ಇಳಿದಿದೆ. ಎಐ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ ವೆಚ್ಚ ನಿರ್ವಹಣೆಗೆ ಕಂಪನಿಯು ಆದ್ಯತೆ ನೀಡುತ್ತಿದೆ. ಇದು ಹೀಗೆ ಮುಂದುವರಿದರೆ, ಮುಂದಿನ ದಿನಗಳಲ್ಲಿ ಉದ್ಯೋಗಿಗಳಿಗೆ ಟೆಕ್ ಸಂಸ್ಥೆಗಳಲ್ಲಿ ಹೆಚ್ಚಿನ ಅವಕಾಶ ಸಿಗುವುದು ಬಹುತೇಕ ಡೌಟ್ ಎಂದೇ ಹೇಳಬಹುದು,(ಏಜೆನ್ಸೀಸ್).