ಪುಟ್ಟೇನಹಳ್ಳಿ ಕೆರೆಗೆ ತ್ಯಾಜ್ಯನೀರು ಹರಿಯುವಿಕೆಗೆ ತಡೆ

puttenahalli-lake
puttenahalli-lake
Published on

ಪ್ರಮುಖ ಮುಖ್ಯಾಂಶಗಳು

  • ಈ ತಿಂಗಳಾಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವ ಅಭಯ
  • ಹಾಲಿ ಮಳೆಗಾಲದಲ್ಲಿ ಕರೆಯಲ್ಲಿ ಪೂರ್ಣ ನೀರು ಸಂಗ್ರಹಕ್ಕೆ ಕ್ರಮ
ಬೆಂಗಳೂರು: ಯಲಹಂಕ-ದೊಡ್ಡಬಳ್ಳಾಪುರ ಹೆದ್ದಾರಿಗೆ ಹೊಂದಿಕೊಂಡಿರುವ ಪುಟ್ಟೇನಹಳ್ಳಿ ಕರೆಗೆ ತ್ಯಾಜ್ಯನೀರು ಹರಿಯುವಿಕೆಗೆ ಸಂಪೂರ್ಣ ತಡೆ ಹಾಕುವ ನಿಟ್ಟಿನಲ್ಲಿ ಪ್ರತ್ಯೇಕ ಕೊಳವೆ ಮಾರ್ಗ ಅಳವಡಿಸುವ ಕಾರ್ಯ ಈ ತಿಂಗಳಾಂತ್ಯದೊಳಗೆ ಪೂರ್ನಗೊಳ್ಳಲಿದೆ. ಈ ಪ್ರಕ್ರಿಯೆ ಪೂರ್ಣಗೊಂಡಲ್ಲಿ ಕಲುಷಿತಗೊಂಡಿದ್ದ ಕರೆಯಲ್ಲಿ ಮತ್ತೆ ಮಳೆನೀರು ಸಂಗ್ರಹಗೊಂಡು ಸ್ಥಳೀಯ ಪರಿಸರ ರಕ್ಷಿಸಿಕೊಳ್ಳಲು ಸಾಧ್ಯವಾಗಲಿದೆ.
2024ರಲ್ಲಿ ಸುರಿದ ಭಾರಿ ಮಳೆಯಿಂದ ಕೆರೆಯ ಸುತ್ತಮತ್ತಲಿನ ಪ್ರದೇಶದಲ್ಲಿ ಪ್ರವಾಹ ಸ್ಥಿತಿ ಉಂಟಾಗಿತ್ತು. ಮಳೆನೀರು ರಾಜಕಾಲುವೆ ಮೂಲಕ ಸರಾಗವಾಗಿ ಹರಿಯದೆ ಸಮಸ್ಯೆ ಉಂಟಾಗಿತ್ತು. ಮುಖ್ಯವಾಗಿ ಕರೆ ಮೇಲ್ಭಾಗದಲ್ಲಿರುವ ಹಲವು ಅಪಾರ್ಟ್‌ಮೆಂಟ್‌ಗಳಿಂದ ಹೊರಹೋಗುವ ಕೊಳಚೆನೀರು ನೇರವಾಗಿ ಕೆರೆ ಒಡಲು ಸೇರಿ ಇಲ್ಲಿನ ಪರಿಸರ ಕಲುಷಿತಗೊಂಡಿತ್ತು. ಈ ಬಗ್ಗೆ ಸ್ಥಳಿಯರು ದೂರು ನೀಡಿದ್ದರೂ, ಪಾಲಿಕೆ ಸಮರ್ಪಕವಾಗಿ ಸ್ಪಂದಿಸಿರಲಿಲ್ಲ. ಹಾಗಾಗಿ ಹಿಂದಿನ ಎರಡು ವರ್ಷವೂ ಕೆರೆಯಲ್ಲಿ ಕಲುಷಿತ ನೀರು ನಿಂತು ದುರ್ವಾಸನೆ ಬೀರುತ್ತಿತ್ತು. ಹೆದ್ದಾರಿಯಲ್ಲಿ ಸಾಗುವ ವಾಹನ ಸವಾರರು ಹಾಗೂ ಸಾರ್ವಜನಿಕರು ಮೂಗು ಮುಚ್ಚಿ ನಡೆದುಹೋಗುವ ಸ್ಥಿತಿ ನಿರ್ಮಾಣವಾಗಿತ್ತು.

ಎನ್‌ಜಿಟಿ ಚಾಟಿ ಬಳಿಕೆ ಎಚ್ಚೆತ್ತ ಪಾಲಿಕೆ:

ಪುಟ್ಟೇನಹಳ್ಳಿ ಕೆರೆಗೆ ಐದು ವರ್ಷದ ಹಿಂದಿನಿಂದಲೂ ಕಲುಷಿತ ನೀರು ಸೇರ್ಪಡೆಯಾಗುತ್ತಿತ್ತು. ಮಳೆನೀರು ಜತೆ ವಸತಿ ಪ್ರದೇಶದ ತ್ಯಾಜ್ಯನೀರು ನೇರವಾಗಿ ಕೆರೆಗೆ ಹರಿದುಬರುತ್ತಿತ್ತು. ಕೆರೆ ಬದಿ ಹಾದುಹೋಗಿರುವ ರಾಜಕಾಲುವೆ ಸಮರ್ಪಕವಾಗಿ ನಿರ್ಮಾಣವಾಗದೆ ಹಾಗೂ ಅಪೂರ್ಣತೆಯಿಂದಾಗಿ ಸಮಸ್ಯೆ ಉಂಟಾಗಿತ್ತು. ಇದನ್ನು ಪ್ರಶ್ನಿಸಿ ಸ್ಥಳೀಯರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ನಂತರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಮೊರೆ ಹೋಗಿದ್ದರು.
ಎನ್‌ಜಿಟಿಯಲ್ಲಿ ಪ್ರಕರಣ ವಿಚಾರಣೆಗೆ ಬಂದ ವೇಳೆ ಕೆರೆಗೆ ತ್ಯಾಜ್ಯನೀರು ಹರಿಯದಂತೆ ಪ್ರತ್ಯೇಕ ಕೊಳವೆ ಮಾರ್ಗ ನಿರ್ಮಿಸುವಂತೆ ಸೂಚಿಸಲಾಗಿತ್ತು. ಆ ಬಳಿಕ ಪಾಲಿಕೆ ಹಾಗೂ ಜಲಮಂಡಳಿ ಕಾಮಗಾರಿ ಕೈಗೊಂಡಿದ್ದರೂ, ಕೆರೆ ಒಡೆತನ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿದ್ದ ಕಾರಣ ಕೆಲಸಗಳು ಅಪೂರ್ಣವಾಗಿತ್ತು. ಬಳಿಕ ಕೆರೆ ಸಂರಕ್ಷಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಪೈಪಲ್‌ಲೈನ್ ಅಳವಡಿಸಲು ಅನುಮತಿ ನೀಡಿತು. ಸದ್ಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಬಾಕಿ ಕೆಲಸ ತಿಂಗಳಾಂತ್ಯಕ್ಕೆ ಪೂರ್ಣಗೊಳಿಸುವಂತೆ ಉತ್ತರ ಪಾಲಿಕೆ ಆಯುಕ್ತ ಪಿ.ಸುನೀಲ್‌ಕುಮಾರ್ ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಿದ್ದಾರೆ.

ಬಳ್ಳಿಗಳಿಂದ ಆವೃತ್ತವಾದ ರಾಜಕಾಲುವೆ:

ಪುಟ್ಟೇನಹಳ್ಳಿ ಕೆರೆಯಿಂದ ಹರಿದುಹೋಗುವ ನೀರು ಬೃಹತ್ ರಾಜಕಾಲುವೆ ಮೂಲಕ ಸಾಗಿ ಯಲಹಂಕ ಕೆರೆಗೆ ಸಂಪರ್ಕಿಸುತ್ತದೆ. ಆದರೆ, ಹೆದ್ದಾರಿಯಿಂದ ಪೂರ್ವಕ್ಕೆ ಇರುವ ರಾಜಕಾಲುವೆಯಲ್ಲಿ ಬಳಿಗಳಿಂದ ಸಂಪೂರ್ಣ ಮುಚ್ಚಿಹೋಗಿದೆ. ಕಳೆಸಸ್ಯವನ್ನು ಹೊರಹಾಕುವ ಕೆಲಸವೂ ಆಗಿಲ್ಲ. ಹಾಗಾಗಿ ಮಳೆಗಾಲದಲ್ಲಿ ಮತ್ತೆ ಸಮಸ್ಯೆ ಎದುರಾಗಬಹುದು ಎಂದು ಸ್ಥಳೀಯರು ದೂರಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net