ಮುಜರಾಯಿ ದೇವಸ್ಥಾನ ಹುಂಡಿಗಳಿಗೆ ಸರ್ಪಗಾವಲು

ದೇವಸ್ಥಾನ
ದೇವಸ್ಥಾನ
Published on
ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳ ಹುಂಡಿ ಹಣ ಮತ್ತು ಚಿನ್ನ, ಬೆಳ್ಳಿ ಸಂರಕ್ಷಣೆ ಸಲುವಾಗಿ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಡಿಜಿಟಲ್ ಪಾವತಿ ಹಾಗೂ ವೆಬ್ ಸಿಸಿ ಕ್ಯಾಮರಾ ಅಳವಡಿಕೆ ಜತೆಗೆ ಹಲವು ಕಠಿಣ ನಿರ್ಧಾರಗಳನ್ನು ಸರ್ಕಾರ ತೆಗೆದುಕೊಂಡಿದೆ.
ಇತ್ತೀಚೆಗೆ ದೇವಸ್ಥಾನ ಹುಂಡಿ ಹಣ ಮತ್ತು ಚಿನ್ನಾಭರಣ ಕಳ್ಳತನ, ದುರ್ಬಳಕೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ. ಪ್ರಮುಖವಾಗಿ ದೇವಸ್ಥಾನಗಳಲ್ಲಿ ಹುಂಡಿಗೆ ಹಣ ಹಾಕುವ ಭಕ್ತರಿಗೆ ಡಿಜಿಟಲ್ ಪಾವತಿಗೆ ಹೆಚ್ಚಿನ ಅವಕಾಶ ಮಾಡಿಕೊಡುವುದು, ಹುಂಡಿ ಹಣ ಎಣಿಸುವಾಗ ನಿಗದಿತ ಅಧಿಕಾರಿ, ಸಿಬ್ಬಂದಿಗೆ ಮಾತ್ರ ಅವಕಾಶ ಕಲ್ಪಿಸಬೇಕು, ಎಲ್ಲ ಪ್ರಕ್ರಿಯೆಗಳು ಸಿಸಿ ಕ್ಯಾಮರಾದಲ್ಲಿ ಚಿತ್ರೀಕರಣವಾಗಬೇಕು ಎಂದು ರಾಜ್ಯ ಸರ್ಕಾರ ಸ್ಪಷ್ಟವಾಗಿ ಸೂಚನೆ ನೀಡಿದೆ.
ದೇವಸ್ಥಾನಗಳ ಸೂಕ್ತ ಜಾಗಗಳನ್ನು ಗುರುತಿಸಿ ಎಲ್ಲರಿಗೂ ಕಾಣುವಂತೆ ಹುಂಡಿಗಳನ್ನು ಅಳವಡಿಸಿ, ಭದ್ರತೆ ಒದಗಿಸಬೇಕು. 4 ದಿಕ್ಕಿನಿಂದ ಕಾಣುವಂತೆ ಸಿಸಿ ವೆಬ್ ಕ್ಯಾಮರಾ ಕಡ್ಡಾಯವಾಗಿ ಅಳವಡಿಸಿ ಜಿಲ್ಲಾಧಿಕಾರಿಗಳ ಅಥವಾ ಉಪ ವಿಭಾಗಾಧಿಕಾರಿಗಳ ಕಚೇರಿ, ಮುಜರಾಯಿ ವಿಭಾಗದಲ್ಲಿ ಕ್ಯಾಮರಾ ನಿರ್ವಹಣೆ ಮಾಡುವಂತೆ ಇರಬೇಕು. ಹಾಲಿ ಇರುವ ಕ್ಯಾಮರಾಗಳನ್ನು ಕಳ್ಳತನ, ನಿಷ್ಕಿ ್ರಯ, ಕರ್ಪೂರದ ಕಾರ್ಬೋನ್‌ನಿಂದ ಲೆನ್ಸ್ ಗ್ಲಾಸ್ ಕಾಣದಂತೆ ಮಾಡಿ ಕಳ್ಳತನ ಮಾಡುವುದನ್ನು ತಡೆಗಟ್ಟಲು ವೆಬ್ ಕ್ಯಾಮರಾ ಅಳವಡಿಸಬೇಕು. ಇವುಗಳನ್ನು ಧಾರ್ಮಿಕ ದತ್ತಿ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಸರ್ವರ್ ಅಳವಡಿಸಿ ಮೇಲ್ವಿಚಾರಣೆ ಮಾಡಬೇಕು. ಭದ್ರತೆ ಸಲುವಾಗಿ ಜಿಲ್ಲಾಧಿಕಾರಿ, ಎಸ್‌ಪಿ ಮತ್ತು ಪೊಲೀಸ್ ಠಾಣೆಗೆ ಸಂಪರ್ಕ ಕಲ್ಪಿಸಿ ವೀಕ್ಷಣೆಗೆ ಡ್ಯಾಶ್‌ಬೋರ್ಡ್‌ಗಳ ವ್ಯವಸ್ಥೆ ಕಲ್ಪಿಸಬೇಕು. ಭಕ್ತರು ಜನಸಂದಣಿಯಲ್ಲಿ ಬಂದಾಗ ಜೇಬು ಕಳ್ಳತನ ಆಗುವ ಸಾಧ್ಯತೆ ಇದೆ. ಆದರಿಂದ ಅವರಿಗೆ ಡಿಜಿಟಲ್ ಪಾವತಿ ವ್ಯವಸ್ಥೆ ಮಾಡಿಕೊಟ್ಟು ಎಲ್ಲೆಡೆ ಕ್ಯೂಆರ್ ಕೋಡ್ ಅಳವಡಿಸಿ ಅದರಡಿ ಸಂಬಂಧಪಟ್ಟ ಬ್ಯಾಂಕ್‌ನ ಐಎ್ಎಸ್‌ಸಿ ಸಂಖ್ಯೆ ಇತ್ಯಾದಿ ವಿವರ ಬರೆಯಬೇಕು ಎಂದು ಸೂಚನೆ ನೀಡಲಾಗಿದೆ.

ಡಿಜಿಟಲ್ ದೇಣಿಗೆ

ಭಕ್ತರು ಮತ್ತು ಸಂದರ್ಶಕರು ದೇಣಿಗೆ ನೀಡಲು, ಪ್ರಸಾದ, ಸೇವಾ ಟಿಕೆಟ್‌ಗಳು, ಇತರೆ ದೇವಸ್ಥಾನದ ಸೇವೆಗಳನ್ನು ನಗದು ರಹಿತ ವಿಧಾನಗಳ ಮೂಲಕ ಖರೀದಿಸಲು ಯುಪಿಎ, ಭೀಮ್, ಕ್ಯೂಆರ್ ಕೋಡ್ ಮತ್ತು ಇತರೆ ಡಿಜಿಟಲ್ ಪಾವತಿ ಸೌಲಭ್ಯ ಒದಗಿಸಬೇಕು. ಲೆಕ್ಕಪರಿಶೋಧನಾ ಹಾದಿ ಮತ್ತು ಸುಧಾರಿತ ಹಣಕಾಸು ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ದೇವಸ್ಥಾನದ ಲೆಕ್ಕಪತ್ರದಲ್ಲಿ ಅಳವಡಿಸಬೇಕು. ಕ್ಯೂಆರ್ ಕೋಡ್ ದುರ್ಬಳಕೆ ತಪ್ಪಿಸಲು ಸುರಕ್ಷಿತ ಸ್ಥಳದಲ್ಲಿ ಅಳವಡಿಸಿ ಕಾಲಕಾಲಕ್ಕೆ ಪರಿಶೀಲನೆ ನಡೆಸಬೇಕೆಂದು ಸರ್ಕಾರ ಕಟ್ಟಾಜ್ಞೆ ಮಾಡಲಾಗಿದೆ.
"

ರಾಜ್ಯ ಮುಜರಾಯಿ ಇಲಾಖೆಗೆ ಒಳಪಡುವ ದೇವಾಲಯಗಳಲ್ಲಿ ಹುಂಡಿ ಎಣಿಕೆಯಲ್ಲಿ ಪಾರದರ್ಶಕತೆ, ಭಕ್ತರ ಸುರಕ್ಷತೆ ಕೈಗೊಳ್ಳುವ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಅನುಷ್ಠಾನದ ಜವಾಬ್ದಾರಿ ಜಿಲ್ಲಾಧಿಕಾರಿಗೆ ವಹಿಸಲಾಗಿದೆ

ಎಣಿಕೆಗೆ ಸಾರ್ವಜನಿಕರು ಬೇಡ

ಹುಂಡಿ ಎಣಿಕೆಯಲ್ಲಿ ಕಂದಾಯ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಲು ದಿನ ನಿಗದಿಪಡಿಸಬೇಕು. ಹೆಚ್ಚು ಕಾಣಿಕೆ ಬರುವ ಕಡೆ ವಾರಕ್ಕೆ ಒಮ್ಮೆ, ಸಾಧಾರಣ ದೇಣಿಗೆ, ಕಾಣಿಗೆ ಕಡಿಮೆ ಬರುವ ಕಡೆಗಳಲ್ಲಿ ಎರಡು ವಾರಕ್ಕೆ ಒಮ್ಮೆ ಎಣಿಸಬೇಕು. ತಹಸೀಲ್ದಾರ್ ಇದರ ಮೇಲ್ವಿಚಾರಣೆ ನಡೆಸಬೇಕು. ಸಾರ್ವಜನಿಕರ ಸೇವೆ ಬದಲಿಗೆ ಗೃಹ ರಕ್ಷಕ ದಳ, ಬ್ಯಾಂಕ್ ಸಿಬ್ಬಂದಿ, ಸರ್ಕಾರಿ ನೌಕರರ ಸೇವೆ ಪಡೆಯಬೇಕು. ಎಣಿಕೆಗೆ ಬರುವ ಸಿಬ್ಬಂದಿ, ಅಧಿಕಾರಿಗಳನ್ನು ಖಚಿತಪಡಿಸಿಕೊಳ್ಳಲು ಮುಖ ಗುರುತಿಸುವ ಕ್ಯಾಮರಾ ಅಳವಡಿಸಬೇಕು. ಎಣಿಸಿದ ಹಣವನ್ನು ಅಂದೇ ಜಿಲ್ಲಾಧಿಕಾರಿ ಖಜಾನೆಗೆ ಜಮೆ ಮಾಡಬೇಕು. ಚಿನ್ನಾಭರಣವನ್ನು ಅಂದೇ ಮೌಲ್ಯಮಾಪನ ಮಾಡಿಸುವುದು ಕಡ್ಡಾಯ. ಬ್ಯಾಂಕ್‌ಗೆ ಹಣ ಜಮೆ ಮಾಡುವ ದೃಶ್ಯದ ಚಿತ್ರೀಕರಣ ಕಡ್ಡಾಯ. ದುರ್ಬಳಕೆ ಆದರೆ ದೇವಸ್ಥಾನ ಅಧಿಕಾರಿಗಳು ಮತ್ತು ತಹಸೀಲ್ದಾರ್ ನೇರ ಹೊಣೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಎಸ್‌ಪಿ/ಆಯುಕ್ತ, ಮುಜರಾಯಿ ಇಲಾಖೆ ಸ್ಥಳೀಯ ಅಧಿಕಾರಿ, ಮುಖ್ಯ ಅಗ್ನಿಶಾಮಕ ಅಧಿಕಾರಿ ಒಳಗೊಂಡ ಜಿಲ್ಲಾ ಮಟ್ಟದ ಸಮಿತಿ ರಚನೆ ಮಾಡಬೇಕು. ಪ್ರತಿ ತಿಂಗಳು ಕನಿಷ್ಠೆ ಒಮ್ಮೆ ಸಭೆ ನಡೆಸಿ ಅಗ್ನಿ ಸುರಕ್ಷತಾ ಮಾನದಂಡಗಳ ಅನುಪಾಲನೆ, ಸಿಸಿ ಕ್ಯಾಮರಾ ವ್ಯವಸ್ಥೆ, ನಿರ್ವಹಣೆ, ತುರ್ತು ಪ್ರತಿಕ್ರಿಯೆ ವಿಪತ್ತು ಸಿದ್ದತೆ ಕ್ರಮಗಳ ಕುರಿತು ಪರಿಶೀಲನೆ ನಡೆಸಬೇಕು.

ಅಧಿಕಾರಿಗಳ ಪರಿಶೀಲನಾ ಕ್ರಮಗಳು

* ಸ್ಥಳೀಯ ಪೊಲೀಸರೊಂದಿಗೆ ಸಿಸಿ ಕ್ಯಾಮರಾ ಲೈವ್ ಫೀಡ್ ಹಂಚಿಕೊಳ್ಳಬೇಕು
* ಠಾಣಾಧಿಕಾರಿ, ಧಾರ್ಮಿಕ ದತ್ತಿ ಇಲಾಖೆ, ಡಿಸಿ ಸಮನ್ವಯದಲ್ಲಿ ಭದ್ರತೆ ಪರಿಶೀಲನೆ
* 15 ದಿನಕ್ಕೊಮ್ಮೆ ಕಂದಾಯ, ಪೊಲೀಸ್, ಧಾರ್ಮಿಕ ಇಲಾಖೆ ಅಧಿಕಾರಿಗಳು ಭೇಟಿ ಕೊಡಬೇಕು
* ಡಿಸಿ, ಎಸ್‌ಪಿ/ಆಯುಕ್ತರು, ಸಿಇಒ 3 ತಿಂಗಳಿಗೊಮ್ಮೆ ಭೇಟಿಕೊಟ್ಟು ನ್ಯೂನತೆ ಸರಿಪಡಿಸಬೇಕು
* ಜಿಲ್ಲಾಧಿಕಾರಿ ನ್ಯೂನತೆ ಸರಿಪಡಿಸಲು ಕೈಗೊಂಡ ಕ್ರಮ, ಕ್ರಿಯಾ ಯೋಜನೆ ಸರ್ಕಾರಕ್ಕೆ ಸಲ್ಲಿಸಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net