ಬಿಡಿಎ ಮೂಲೆ ನಿವೇಶನ ಪರಿಷ್ಕರಣೆ: ಸೈಟ್‌ದಾರರಿಗೆ ಸಂಕಷ್ಟ

site-owners
site-owners
Published on

ಪ್ರಮುಖ ಮುಖ್ಯಾಂಶಗಳು

  • ಲೋಪ ಮುಚ್ಚಲು ಬಿಡಿಎ ಇಂಜಿನಿಯರ್‌ಗಳ ಉತ್ಸುಕತೆ
  • ಹರಾಜುದಾರನಿಗೆ ಅನುಕೂಲ ಮಾಡಿಕೊಡಲು ನಕ್ಷೆ ಬದಲು
ಬೆಂಗಳೂರು: ಬಿಡಿಎ ಮೂಲೆ ನಿವೇಶನದ ಹರಾಜು ಪ್ರಕ್ರಿಯೆಯಲ್ಲಿ ಆಗಿರುವ ಲೋಪ ಮುಚ್ಚಿಕೊಳ್ಳಲು, ಈಗಾಗಲೇ ಹಂಚಿಕೆದಾರರಿಗೆ ನೋಂದಣಿ ಆಗಿರುವ ಸೈಟ್‌ಗಳ ಮೂಲ ಅಳತೆಯನ್ನೇ ಬದಲಿಸಲು ಇಂಜಿನಿಯರ್‌ಗಳು ಮುಂದಾಗಿರುವ ಪ್ರಕರಣ ತಡವಾಗಿ ಬೆಳೆಕಿಗೆ ಬಂದಿದೆ.
ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆಯ 5ನೇ ಹಂತದ ಬಡಾವಣೆಯಲ್ಲಿ ಮೂಲೆ ನಿವೇಶನಗಳನ್ನು ವಿಲೇವಾರಿ ಮಾಡಲು ಹರಾಜ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಇತ್ತೀಚಿಗೆ ಈ ಬಡಾವಣೆಯ 559/ಎ ಹಾಗೂ 559/ಬಿ ಸಂಖ್ಯೆಯ ಕಾರ್ನರ್ ಸೈಟ್‌ಅನ್ನು ಹರಾಜಿಗೆ ಬಿಡ್ ಆಹ್ವಾನಿಸಲಾಗಿತ್ತು. ಈ ಪೈಕಿ 559/ಎ ಸಂಖ್ಯೆಯ ಮೂಲೆ ನಿವೇಶನ ಒಟ್ಟು 367.20 ಚದರ ಮೀ. ಅಳತೆ ಹೊಂದಿತ್ತು. ಇದನ್ನಾಧರಿಸಿ ಬಿಡ್‌ದಾರರೊಬ್ಬರು ಹರಾಜು ಕೂಗಿ ಮೂಲೆ ಸೈಟ್‌ಅನ್ನು ತನ್ನದಾಗಿಸಿಕೊಂಡಿದ್ದರು. ಆದರೆ, ಸೈಟ್ ಜಾಗಕ್ಕೆ ತೆರಳಿ ವೀಕ್ಷಣೆ ಮಾಡಿದಾಗ ಅಳತೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಈಗಾಗಲೇ ಬಿಡ್ ಹಣ ಪಾವತಿಸಿರುವುದರಿಂದ ಮೌಲ್ಯಕ್ಕೆ ತಕ್ಕಂತೆ ಸೈಟ್ ವಿಸ್ತೀರ್ಣವನ್ನು ನೋಂದಣಿ ಮಾಡಿಕೊಡುವಂತೆ ಬಿಡ್‌ದಾರರು ಪಟ್ಟು ಹಿಡಿದಿದ್ದಾರೆ.
ಪ್ರಕರಣ ಸಂಬಂಧ ಬಿಡ್‌ದಾರರು ಇಂಜಿನಿಯರ್‌ಗಳ ಮೇಲೆ ಒತ್ತಡ ಹೇರಿದ್ದು, ಸೈಟ್ ವಿಸ್ತೀರ್ಣ ಹಿಗ್ಗಿಸಿಕೊಡುವಂತೆ ಇಂಜಿನಿಯರ್‌ಗಳಿಗೆ ದುಂಬಾಲು ಬಿದ್ದಿದ್ದಾರೆ. ನಿವೇಶನದ ಪೂರ್ಣ ಮಾಹಿತಿ ಒಳಗೊಂಡಿರುವ ಖಚಿತ ಅಳತೆ ವರದಿ (ಸಿ.ಡಿ. ರಿಪೋರ್ಟ್) ಸಿದ್ಧಪಡಿಸಿ ಅದಕ್ಕೆ ಹಿರಿಯ ಅಧಿಕಾರಿಗಳಿಂದ ಒಪ್ಪಿಗೆ ಪಡೆಯಲಾಗಿದೆ. ಸಿ.ಡಿ. ರಿಪೋರ್ಟ್‌ನಲ್ಲಿರುವ ಬಿಡ್‌ದಾರನಿಗೆ ಮೂಲೆ ಸೈಟ್ ನೋಂದಣಿ ಮಾಡಿಕೊಡಬೇಕಿದೆ. ಆದರೆ, ಹೆಚ್ಚಿನ ವಿಸ್ತೀರ್ಣದ ಜಾಗವನ್ನು ಪಕ್ಕದ ಸೈಟ್‌ನಿಂದ ಕತ್ತರಿಸಿ ಕೊಡಲು ಅವಕಾಶ ಇಲ್ಲದಿದ್ದರೂ, ಇಂಜಿನಿಯರ್‌ಗಳು ಪ್ರಭಾವಕ್ಕೆ ಒಳಗಾಗಿ ಮೂಲೆ ಸೈಟ್‌ನ ಸಾಲಿನಲ್ಲಿರುವ 10 ನಿವೇಶನಗಳ ಮೂಲ ಅಳತೆಯನ್ನು ಬದಲಿಸಲು ಹೊರಟಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

ನಕ್ಷೆ ಬದಲಿಸಲು ಅವಕಾಶ ಇಲ್ಲ:

ಯಾವುದೇ ಲೇಔಟ್ ರಚನೆ ವೇಳೆ ಅನುಮೋದನೆಗೊಂಡ ಯೋಜನಾ ನಕ್ಷೆಯಂತೆ ಮುಂದುವರಿಯಬೇಕು. ವಿನ್ಯಾಸ ಸೇರಿದಂತೆ ಅದನ್ನು ಮತ್ತೆ ಬದಲಾಯಿಸಲು ಅವಕಾಶ ಇಲ್ಲ. 2019ರ ಆ.26ರಂದು ಸುಪ್ರೀಂ ಆದೇಶದಂತೆ ಯೋಜನಾ/ಅಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಅನುಮೋದನೆಗೊಂಡ ಯೋಜನೆ/ಬಡಾವಣೆಗಳಲ್ಲಿ ನಿರ್ದಿಷ್ಟ ಉದ್ದೇಶಕ್ಕೆ ಮೀಸಲಿಟ್ಟ ಜಮೀನನ್ನು ಅನ್ಯ ಉದ್ದೇಶಕ್ಕೆ ಭೂ ಉಪಯೋಗ ಬದಲಾವಣೆಗೆ ಅನುಮತಿಸುವಂತಿಲ್ಲ ಎಂದು ನಿರ್ದೇಶಿಸಿದೆ. ಇದನ್ನಾಧರಿಸಿ ಅದೇ ವರ್ಷ ಸರ್ಕಾರದ ನಗರಾಭಿವೃಧ್ಧಿ ಇಲಾಖೆಯು ಇಡೀ ರಾಜ್ಯಕ್ಕೆ ಅನ್ವಯಿಸುವಂತೆ ಸುಪ್ರೀಂಕೋರ್ಟ್ ಆದೇಶವನ್ನು ಯಥಾವತ್ ಅನುಸರಿಸುವಂತೆ ಸುತ್ತೋಲೆ ಹೊರಡಿಸಿದೆ. ಜತೆಗೆ ಭೂ ಬದಲಾವಣೆಗೆ ಯಾವ ಪ್ರಾಧಿಕಾರವೂ ಪ್ರಸ್ತಾವನೆ ಸಲ್ಲಿಸದಂತೆ ಸೂಚಿಸಿತ್ತು. ವಸ್ತುಸ್ಥಿತಿ ಹೀಗಿದ್ದರೂ, ಬಿಡಿಎ ಇಂಜಿನಿಯರ್‌ಗಳು ಸಣ್ಣ ತಪ್ಪನ್ನು ಸರಿಪಡಿಸಲು ದೊಡ್ಡ ಸಮಸ್ಯೆಯನ್ನು ಸೃಷ್ಟಿಸಲು ಹೊರಟಿರುವುದು ಏಕೆ ಎಂಬ ಪ್ರಶ್ನೆ ಮೂಡಿಸಿದೆ.

10 ಸೈಟ್‌ದಾರರಿಗೆ ಸಂಕಷ್ಟ:

ಸದರಿ ಪ್ರಕರಣದಲ್ಲಿ 559/ಎ ಮೂಲೆ ನಿವೇಶನವನ್ನು ಹಿಗ್ಗಿಸಲು ಕಳೆದೆರಡು ದಿನಗಳ ಹಿಂದೆ ಬಿಡಿಎ ಇಂಜಿನಿಯರ್‌ಗಳು ಸ್ಥಳಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸೈಟ್‌ದಾರರು ಆಕ್ಷೇಪ ವ್ಯಕ್ತಪಡಿಸಿದ್ದರೂ, ಇಂಜಿನಿಯರ್‌ಗಳು ಕ್ಯಾರೇ ಎಂದಿಲ್ಲ. ಹೊಸದಾಗಿ ಅಳತೆಯನ್ನು ಬದಲಿಸಲು ಹೊರಟರೆ ಸೈಟ್‌ಗಳ ವಿಸ್ತೀರ್ಣ ಹಾಗೂ ಚಕ್ಕುಬಂದಿಯೂ ಪಲ್ಲಟವಾಗುತ್ತದೆ. ಇದರಿಂದ ನಿವೇಶನದ ಮೂಲ ಸ್ವರೂಪವೇ ಬದಲಾಗಿ ಇ-ಖಾತಾ ಸಹಿತ ಸೈಟ್ ಮಾಲೀಕತ್ವದ ಪತ್ರಗಳಲ್ಲಿ ಅಂಕಿ-ಅಂಶಗಳು ತಪ್ಪಾಗಿ ನಮೂದಾಗಲು ಕಾರಣವಾಗುತ್ತದೆ. ಹಾಗಾಗಿ ಸೈಟ್‌ದಾರರಿಗೆ ತೊಂದರೆ ಕೊಡದೆ ಮೂಲೆ ನಿವೇಶನದ ಹಾಲಿ ಅಳತೆಯಷ್ಟೇ ಬಿಡ್‌ದಾರರಿಗೆ ನೋಂದಣಿ ಮಾಡಿಕೊಟ್ಟಲ್ಲಿ ಸಮಸ್ಯೆಯು ಪರಿಹಾರವಾಗಲಿದೆ ಎನ್ನುತ್ತಾರೆ ಸೈಟ್‌ದಾರ ಕಾಂತರಾಜು.

ಸಿ.ಡಿ. ತಯಾರಿಸುವಲ್ಲಿ ಲೋಪ:

ಬಿಡಿಎನಲ್ಲಿ ಹಂಚಿಕೆಯಾಗುವ ಎಲ್ಲ ಸೈಟ್‌ಗಳನ್ನು ಸಿ.ಡಿ. ರಿಪೋರ್ಟ್ ಆಧರಿಸಿಯೇ ವಿಲೇವಾರಿ ಮಾಡುವ ಪದ್ಧತಿ ಇದೆ. ಈ ವರದಿಯಲ್ಲಿ ಆಯಾ ಸೈಟ್‌ನ ವಿಸ್ತೀರ್ಣ, ಚಕ್ಕುಬಂದಿ, ಹಿಂದಿನ ಹಂಚಿಕೆ ಮಾಹಿತಿ ಇತರ ಮಾಹಿತಿ ಒಳಗೊಂಡಿರುತ್ತದೆ. ಮುಖ್ಯವಾಗಿ ವರದಿ ಸಿದ್ಧಪಡಿಸುವ ವೇಳೆ ಆ ನಿವೇಶನದ ಸ್ಥಳಕ್ಕೆ ತೆರಳಿ ರಿಪೋರ್ಟ್ ಸಿದ್ಧಪಡಿಸಬೇಕಿದೆ. ಇದರಿಂದ ಯಾವುದೇ ತಪ್ಪುಗಳು ನುಸುಳುವುದಿಲ್ಲ. ಆದರೆ, ಕೆಲ ಇಂಜಿನಿಯರ್‌ಗಳು ಸೈಟ್‌ಗಳಿರುವ ಜಾಗಕ್ಕೆ ತೆರಳದೆ ಕಚೇರಿಯಲ್ಲೇ ಕುಳಿತು ಕಡತದಲ್ಲಿರುವ ಮಾಹಿತಿಯನ್ನು ಸಿ.ಡಿ. ರಿಪೋರ್ಟ್ ತಯಾರಿಸುತ್ತಿರುವ ಕಾರಣ ತಪ್ಪುಗಳು ಮರುಕಳಿಸುತ್ತಿವೆ. ಇದನ್ನು ಮೇಲ್ವಿಚಾರಣೆ ಮಾಡದ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದಲೂ ತಪ್ಪುಗಳು ನುಸುಳುತ್ತಿವೆ.

ಬಿಡಿಎಗೆ ದೂರು:

ಹರಾಜಿಗಿಟ್ಟಿರುವ ಮೂಲೆ ನಿವೇಶನದ ವಿಸ್ತೀರ್ಣವನ್ನು ಬದಲಿಸುವ ಭರದಲ್ಲಿ ತಮಗೆ ಸೇರಿರುವ 559/1 ಸಂಖ್ಯೆಯ ಸೈಟ್‌ಅನ್ನು ಮರು ಅಳತೆ ಮಾಡಲಾಗಿದೆ. ನಮ್ ಸೈಟ್‌ನ ಅಳತೆ ಸೇರಿ ಚಕ್ಕುಬಂದಿ ಸಮರ್ಪಕವಾಗಿದೆ. ಇತ್ತೀಚಿಗಷ್ಟೇ ನೋಂದಣಿ ಮಾಡಿಕೊಂಡಿದ್ದು, ಈಗ ದಿಢೀರ್ ಆಗಿ ಸೈಟ್ ಅಳತೆಯನ್ನು ವ್ಯತ್ಯಾಸ ಮಾಡಿದರೆ ನಮ್ಮ ಕಾಗದಪತ್ರಗಳಿಗೆ ಬೆಲೆಯೇ ಇಲ್ಲದಂತಾಗುತ್ತದೆ. ಇಂಜಿನಿಯರ್‌ಗಳ ಈ ಕಾನೂನುಬಾಹಿರ ಕೆಲಸಕ್ಕೆ ತಕ್ಷಣವೇ ತಡೆ ನೀಡಬೇಕು ಎಂದು ಸೈಟ್‌ದಾರ ಕೆ.ಎಂ.ದೊಡ್ಡಿಯ ಕಾಂತರಾಜು ಬಿಡಿಎಗೆ ದೂರು ದಾಖಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net