ಇ-ಖಾತಾ ತಿದ್ದುಪಡಿ ಹೊಣೆ ಉಪ ಆಯುಕ್ತರ ಹೆಗಲಿಗೆ

e-account-correction
e-account-correction
Published on

ಪ್ರಮುಖ ಮುಖ್ಯಾಂಶಗಳು

  • ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್ ನಿರ್ದೇಶನ
  • ಪಾಲಿಕೆಗಳ ಕಂದಾಯ ವಿಭಾಗದ ಪ್ರಗತಿ ಪರಿಶೀಲನಾ ಸಭೆ
ಬೆಂಗಳೂರು: ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಇ-ಖಾತಾ ತಿದ್ದುಪಡಿಯ ಜವಾಬ್ದಾರಿಯನ್ನು ಉಪ ಆಯುಕ್ತರಿಗೆ ನೀಡಲು ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಬಿಎ ವ್ಯಾಪ್ತಿಯಲ್ಲಿ ಕಂದಾಯ ವಿಭಾಗಕ್ಕೆ ಸಂಬಂಧಿಸಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ವಲಯ ಜಂಟಿ ಆಯುಕ್ತರಿಗೆ ಇ-ಖಾತಾದಲ್ಲಿ ತಿದ್ದುಪಡಿ ಮಾಡುವ ಜವಾಬ್ದಾರಿಯನ್ನು ನೀಡಲಾಗಿತ್ತು. ಅವರ ಕಾರ್ಯವ್ಯಾಪ್ತಿ ಹೆಚ್ಚಿರುವ ಕಾರಣ, ಆ ಜವಾಬ್ದಾರಿಯನ್ನು ಆಯಾ ವಲಯದ ಉಪ ಆಯುಕ್ತರಿಗೆ ವಹಿಸಲು ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಪ್ರತಿ ಪಾಲಿಕೆಯಿಂದ ಬಂದಿರುವ ಸಲಹೆಗಳ ಆಧಾರದ ಮೇಲೆ ಕಂದಾಯ ವಿಭಾಗದ ಉಪ ಆಯುಕ್ತರಿಗೆ ಹೆಚ್ಚಿನ ಜವಾಬ್ದಾರಿ ವಹಿಸಿ, ವಿಶೇಷ ಅಭಿಯಾನದ ರೂಪದಲ್ಲಿ ಬಾಕಿಯಿರುವ ಎಲ್ಲ ತಿದ್ದುಪಡಿ ಹಾಗೂ ದೂರುಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕು. ಇದರಿಂದ ನಾಗರಿಕರಿಗೆ ಇ-ಖಾತಾ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹಾಗೂ ತ್ವರಿತವಾಗಿ ಒದಗಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಕಾಲಮಿತಿಯೊಳಗೆ ಅರ್ಜಿ ವಿಲೇವಾರಿ ಮಾಡಿ:
ಪಾಲಿಕೆಗಳಲ್ಲಿ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿರುವ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಹೊಸ ಖಾತೆಗಾಗಿ ಸಲ್ಲಿಸಿರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಟ್ಯಾಕ್ಸ್ ವ್ಯಾಪ್ತಿಗೆ ತರಬೇಕು. ಜತೆಗೆ ಬಿ-ಖಾತಾದಿಂದ ಎ-ಖಾತಾಗೆ ಬದಲಾವಣೆಗಾಗಿ ಬಂದಿರುವ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವಂತೆ ಮುಖ್ಯ ಆಯುಕ್ತರು ನಿರ್ದೇಶಿಸಿದರು.
ಸಭೆಯಲ್ಲಿ ಜಿಬಿಎ ವಿಶೇಷ ಆಯುಕ್ತ ಡಾ. ಕೆ.ಹರೀಶ್ ಕುಮಾರ್, ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್, ಜಿ. ಜಗದೀಶ್, ಪಿ.ಸುನೀಲ್ ಕುಮಾರ್, ಕೆ.ಎನ್. ರಮೇಶ್, ಡಾ. ಕೆ.ವಿ. ರಾಜೇಂದ್ರ, ಕಂದಾಯ ವಿಭಾಗದ ಅಪರ ಆಯುಕ್ತರು, ಜಂಟಿ ಆಯುಕ್ತರು ಉಪಸ್ಥಿತರಿದ್ದರು.
ನಗರದಲ್ಲಿ ಇ-ಖಾತಾ ಹಾಗೂ ಆಸ್ತಿ ತೆರಿಗೆ ಸಂಗ್ರಹಣೆಗೆ ಸಂಬಂಧಿಸಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಾಲಿ ಜೂನ್ ತಿಂಗಳಲ್ಲಿ ಈವರೆಗೆ 3,000 ಕೋಟಿ ರೂ. ಟ್ಯಾಕ್ಸ್ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2,800 ಕೋಟಿ ರೂ. ಸಂಗ್ರಹಿಸಲಾಗಿತ್ತು. ಇದಕ್ಕೆ ಹೋಲಿಸಿದರೆ ಈ ವರ್ಷ ತೆರಿಗೆ ಸಂಗ್ರಹದಲ್ಲಿ ಏರಿಕೆ ಕಂಡುಬಂದಿದ್ದು, ಇದಕ್ಕಾಗಿ ಶ್ರಮಿಸಿದ ಎಲ್ಲ ಅಧಿಕಾರಿ/ಸಿಬ್ಬಂದಿ ಅಭಿನಂದನೀಯರು ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ.
ಹೆಚ್ಚಿನ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರು ಹಾಗೂ ಪರಿಷ್ಕರಣೆ ಪ್ರಕರಣಗಳಿಂದ ಪಾಲಿಕೆಗೆ ಬರಬೇಕಿರುವ ತೆರಿಗೆಯನ್ನು ಪರಿಣಾಮಕಾರಿಯಾಗಿ ವಸೂಲಿ ಮಾಡುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕು.
- ಮುನೀಶ್ ಮೌದ್ಗಿಲ್, ಜಿಬಿಎ ವಿಶೇಷ ಆಯುಕ್ತ (ಕಂದಾಯ)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net