‘ನಮಸ್ತೆ ಆ್ಯಪ್’ನಲ್ಲಿ ಪೌರಕಾರ್ಮಿಕರ ನೋಂದಣಿ ಕಡ್ಡಾಯ

namaste-app
namaste-app
Published on

ಪ್ರಮುಖ ಮುಖ್ಯಾಂಶಗಳು

  • ಎನ್‌ಎಸ್‌ಕೆಸಿ ಸದಸ್ಯ ಹರ್ದೀಪ್ ಸಿಂಗ್ ಗಿಲ್ ಮನವಿ
  • ಜಿಬಿಎ ಕಚೇರಿಯಲ್ಲಿ ಮ್ಯಾನುಯಲ್ ಸ್ಕ್ಯಾವೆಂಜರ್ ಸಮಸ್ಯೆ ಬಗ್ಗೆ ಸಭೆ
ಬೆಂಗಳೂರು: ಮಹಾನಗರದಲ್ಲಿರುವ ಎಲ್ಲ ಪೌರಕಾಮಿಕರು ತಮ್ಮ ಹೆಸರುಗಳನ್ನು ‘ನಮಸ್ತೆ ಆ್ಯಪ್’ನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ (ಎನ್‌ಎಸ್‌ಕೆಸಿ) ಸದಸ್ಯ ಹರ್ದೀಪ್ ಸಿಂಗ್ ಗಿಲ್ ತಿಳಿಸಿದ್ದಾರೆ.
ಜಿಬಿಎ ಕಚೇರಿಯಲ್ಲಿ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್ ಸಮ್ಮುಖ ಪೌರಕಾರ್ಮಿಕರು ಹಾಗೂ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳ ವಿವಿಧ ಬೇಡಿಕೆಗಳು ಮತ್ತು ಸಮಸ್ಯೆಗಳ ಕುರಿತು ಸಭೆಯಲ್ಲಿ ಪಾಲ್ಗೊಂಡು ಅವರು ಈ ನಿರ್ದೇಶನವನ್ನು ನೀಡಿದರು.
ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವುದರಿಂದ ಕೇಂದ್ರ ಸರ್ಕಾರದಿಂದ ಲಭ್ಯವಾಗುವ ಸುರಕ್ಷತಾ ಕಿಟ್ ಸೇರಿ ವಿವಿಧ ಕಲ್ಯಾಣ ಹಾಗೂ ಸುರಕ್ಷತಾ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಲಿದೆ. ಜತೆಗೆ ಅರ್ಹ ಪೌರಕಾರ್ಮಿಕರ ನೋಂದಣಿ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಅವರಿಗೆ ಲಭ್ಯವಿರುವ ಸೌಲಭ್ಯಗಳನ್ನು ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪೌರಕಾರ್ಮಿಕರನ್ನು ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಸಂಬಂಧಿತ ಯೋಜನೆಗಳಿಗೆ ನೋಂದಾಯಿಸಿ, ವೈದ್ಯಕೀಯ ವಿಮೆ ಸೇರಿ ವಿವಿಧ ಸೌಲಭ್ಯಗಳನ್ನು ಒದಗಿಸುವ ಕುರಿತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪೌರಕಾರ್ಮಿಕರ ಸುರಕ್ಷತೆ ಪರಿಶೀಲನೆ:

ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್ ಮಾತನಾಡಿ, ನಗರದಾದ್ಯಂತ ಪೌರಕಾರ್ಮಿಕರ ಸುರಕ್ಷತೆ, ಕೆಲಸದ ಪರಿಸ್ಥಿತಿ ಹಾಗೂ ಸಂಬಂಧಿತ ಘಟನೆಗಳ ಕುರಿತು ನಿರಂತರವಾಗಿ ಪರಿಶೀಲನೆ ಮತ್ತು ದಾಖಲೀಕರಣ ಕೈಗೊಳ್ಳಲಾಗುತ್ತಿದೆ. ಮ್ಯಾನುಯಲ್ ಸ್ಕಾೃವೆಂಜಿಂಗ್‌ಗೆ ಸಂಬಂಧಿಸಿದ ಸಾವು ಹಾಗೂ ಅಪಘಾತ ಕುರಿತು ಪ್ರಕರಣವಾರು ಮಾಹಿತಿ ಸಂಗ್ರಹಿಸಿ, ಪರಿಹಾರ ಹಾಗೂ ಇತರ ಸೌಲಭ್ಯ ಒದಗಿಸುವ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಪೌರಕಾರ್ಮಿಕರು ಹಾಗೂ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳ ಕಲ್ಯಾಣ, ಸುರಕ್ಷತೆ, ಆರೋಗ್ಯ, ವಸತಿ, ಶಿಕ್ಷಣ, ಪರಿಹಾರ, ಪಿಂಚಣಿ ಹಾಗೂ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಸೇರಿ ಹಲವು ಪ್ರಮುಖ ವಿಷಯಗಳ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ಜಿಬಿಎ ವಿಶೇಷ ಆಯುಕ್ತರಾದ ಸುಷಮಾ ಗೋಡಬೊಲೆ, ವೆಂಕಟಾಚಲಪತಿ, ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್, ಕೆ.ಎನ್. ರಮೇಶ್, ಪಿ.ಸುನೀಲ್ ಕುಮಾರ್ ಹಾಗೂ ಪೌರಕಾರ್ಮಿಕರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ಪೌರಕಾರ್ಮಿಕರ ಸಂಖ್ಯೆ ಹೆಚ್ಚಿಸಲು ಮನವಿ:

ಸದ್ಯ ನಗರದಲ್ಲಿ 12,924 ಕಾಯಂ ಪೌರಕಾರ್ಮಿಕರು ಹಾಗೂ 2,368 ದಿನಗೂಲಿ/ದೈನಂದಿನ ವೇತನದ ಆಧಾರದ ಕಾರ್ಮಿಕರು ಸೇರಿ ಒಟ್ಟು 15,292 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಿಂದೆ 35,000ಕ್ಕೂ ಹೆಚ್ಚು ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಹಾಲಿ ಕಡಿಮೆ ಸಂಖ್ಯೆಯ ಕಾರ್ಮಿಕರು ಇರುವುದರಿಂದ ಕೆಲಸದ ಹೊರೆ ಬೀಳುತ್ತಿದೆ. ವೈಜ್ಞಾನಿಕ ಮಾನದಂಡ ಆಧರಿಸಿ ಪೌರಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಪೌರಕಾರ್ಮಿಕರ ಸಂಘಟನೆಗಳ ಪ್ರತಿನಿಧಿಗಳು ಮನವಿ ಮಾಡಿದರು.

ಮ್ಯಾನುಯಲ್ ಸ್ಕ್ಯಾವೆಂಜರ್‌ಗಳ ಪ್ರಮುಖ ಬೇಡಿಕೆ:

* ಮೃತಪಟ್ಟವರ ಕುಟುಂಬಕ್ಕೆ ನಿಯಮದಂತೆ ತಕ್ಷಣ ಪರಿಹಾರ
* ಅರ್ಹ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು, ಪಿಂಚಣಿ ಸೌಲಭ್ಯ, ಆರೋಗ್ಯ ಕಾರ್ಡ್ ಸೌಲಭ್ಯ ಒದಗಿಸಬೇಕು
* ಮಕ್ಕಳಿಗೆ ಕಾಲೇಜು ಶಿಕ್ಷಣ ಸೇರಿ ಶೈಕ್ಷಣಿಕ ನೆರವು, ಸಾಲ/ಆರ್ಥಿಕ ನೆರವು
* ಸ್ವಯಂ ಉದ್ಯೋಗಕ್ಕಾಗಿ ವಾಹನ ಹಾಗೂ ಉಪಕರಣ ಆಧಾರಿತ ನೆರವು
* ಸೈಟ್/ಜಮೀನು ಒದಗಿಸುವ ಯೋಜನೆಗಳ ಪರಿಣಾಮಕಾರಿಯಾಗಿ ಜಾರಿಗೊಳಿಸುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net