ಲೋಕಾಯುಕ್ತ ತನಿಖೆಗೆ ತಡೆ ನೀಡಲು​ ನಕಾರ| ಮಾಪನ ಶಾಸ್ತ್ರ ಇಲಾಖೆಯ ಅತ್ತರ್​ ಅಲಿ ವಿರುದ್ಧದ ಪ್ರಕರಣ| High court

High court
High court
Published on

ಬೆಂಗಳೂರು: 

ಆದಾಯಕ್ಕಿಂತ ಅಧಿಕ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿದ್ದ ಆರೋಪದಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಬೆಂಗಳೂರು ವಿಭಾಗದ ಉಪ ನಿಯಂತ್ರಕ ಅತ್ತರ್​ ಅಲಿ ವಿರುದ್ಧ ಲೋಕಾಯುಕ್ತ ದಾಖಲಿಸಿರುವ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್​ ನಿರಾಕರಿಸಿದೆ.

ಪ್ರಕರಣ ರದ್ದುಕೋರಿ ಸಲ್ಲಿಸಲಾಗಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ಅರ್ಜಿದಾರರ ಮೇಲೆ ಅವರ ಆದಾಯಕ್ಕಿಂತ ಶೇ. 155ರಷ್ಟು ಅಧಿಕ ಅಕ್ರಮ ಆಸ್ತಿ ಸಂಪಾದಿಸಿದ ಆರೋಪವಿದೆ. ಪ್ರಾಥಮಿಕ ತನಿಖೆ, ಎಫ್​ಐಆರ್​ ಮತ್ತು ಶೋಧದ ವೇಳೆ ಪತ್ತೆಯಾದ ಆಸ್ತಿ ವಿರಗಳನ್ನು ಗಮನಿಸಿದರೆ ಇದು ತನಿಖೆ ನಡೆಸಲು ಸೂಕ್ತ ಪ್ರಕರಣವಾಗಿದೆ ಎಂದು ಹೇಳಿದೆ.
ಅತ್ತರ್​ ಅಲಿ ವಿರುದ್ಧ 2024ರ ಜು.18ರಂದು ಎ್​ಐಆರ್​ ದಾಖಲಿಸಿದ್ದ ಲೋಕಾಯುಕ್ತ, ಜು.19ರಂದು ಶೋಧ ಕಾರ್ಯ ನಡೆಸಿತ್ತು. ವಾರ್ಷಿಕ ಆಸ್ತಿ ವಿವರಗಳಲ್ಲಿ ಘೋಷಿಸಿದ್ದಕ್ಕಿಂತ ಅಧಿಕ ಮೌಲ್ಯದ ಸಂಪತ್ತು ಪತ್ತೆಯಾಗಿತ್ತು. 4.1 ಕೆ.ಜಿ ಚಿನ್ನ, 303 ಗ್ರಾಂ ವಜ್ರಾಭರಣಗಳು ಮತ್ತು 4.6 ಕೆ.ಜಿ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿತ್ತು. ಒಟ್ಟರೆ ಘೋಷಿತ ಆಸ್ತಿ ವಿವರ ಮತ್ತು ಶೋಧದಲ್ಲಿ ದೊರೆತ ಆಸ್ತಿ ಮೌಲ್ಯದಲ್ಲಿ ಸುಮಾರು 3 ಕೋಟಿ ರೂಪಾಯಿಗೂ ಅಧಿಕ ವ್ಯತ್ಯಾಸವಿತ್ತು. ಅಲ್ಲದೆ, ಘೋಷಿತ ನಗದಿನ ಹೊರತಾಗಿ ಹೆಚ್ಚುವರಿ 25.13 ಲಕ್ಷ ರೂ. ನಗದು ಪತ್ತೆಯಾಗಿತ್ತು. ಈ ಅಂಕಿ&ಅಂಶಗಳನ್ನು ನ್ಯಾಯಪೀಠ ಗಂಭೀರವಾಗಿ ಪರಿಗಣಿಸಿದೆ. 

ಬೇನಾಮಿ ಆಸ್ತಿ ಸಂಶಯ:

ಅರ್ಜಿದಾರರ ಪತ್ನಿ ಗೃಹಿಣಿಯಾಗಿದ್ದು ಸ್ವಂತ ಆದಾಯವಿಲ್ಲದಿದ್ದರೂ ದೊಡ್ಡ ಪ್ರಮಾಣದ ಸ್ಥಿರಾಸ್ತಿಗಳನ್ನು ಹೊಂದಿದ್ದಾರೆ. ಅಲ್ಲದೆ, ಬೇರೆಯವರ ಹೆಸರಿನಲ್ಲಿರುವ ನಾಲ್ಕು ಅಪಾರ್ಟ್​ಮೆಂಟ್​ಗಳ ಬಾಡಿಗೆಯನ್ನು ಅರ್ಜಿದಾರರ ಪುತ್ರಿಯರೇ ಪಡೆಯುತ್ತಿದ್ದಾರೆ ಎಂಬ ಗಂಭೀರ ಆರೋಪವಿದ್ದು, ಇವುಗಳ ಹಿಂದಿನ ನಿಜಾಂಶವನ್ನು ಪತ್ತೆಹಚ್ಚಲು ಸಮಗ್ರ ತನಿಖೆ ಅನಿವಾರ್ಯ ಎಂದು ನ್ಯಾಯಪೀಠ ತಿಳಿಸಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net