ಎನ್​ಐಎ ಚಾರ್ಜ್​ಶೀಟ್​ ರದ್ದುಪಡಿಸಲು ನಕಾರ| ಕೆ.ಜಿ. ಹಳ್ಳಿ ಪೊಲೀಸ್ ಠಾಣೆ ಮೇಲಿನ ದಾಳಿ ಪ್ರಕರಣ| High court

High court
High court
Published on
ಬೆಂಗಳೂರು: ಬೆಂಗಳೂರಿನ ಕೆ.ಜಿ. ಹಳ್ಳಿ ಪೊಲೀಸ್​ ಠಾಣೆಗೆ ದಾಳಿ ಮಾಡಿ, ವಾಹನಗಳಿಗೆ ಬೆಂಕಿ ಹಚ್ಚಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್​ಐಎ) ಸಲ್ಲಿಸಿರುವ ಚಾರ್ಜ್​ಶೀಟ್​ ರದ್ದುಪಡಿಸಲು ಹೈಕೋರ್ಟ್​ ನಿರಾಕರಿಸಿದೆ.
ಚಾರ್ಜ್​ಶೀಟ್​ ರದ್ದುಪಡಿಸಲು ನಿರಾಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಗೋವಿಂದಪುರದ ಸೈಯದ್​ ಅಬ್ಬಾಸ್​ ಸೇರಿ 15 ಮಂದಿ ಆರೋಪಿಗಳು ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ವಜಾಗೊಳಿಸಿರುವ ನ್ಯಾಯಮೂರ್ತಿಗಳಾದ ಎಚ್​.ಪಿ. ಸಂದೇಶ್​ ಮತ್ತು ಬಿ. ಪ್ರಮೋದ್​ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲರು, ಈ ಪ್ರಕರಣದಲ್ಲಿ ಯುಎಪಿಎ ಅಡಿಯಲ್ಲಿ ಆರೋಪ ಹೊರಿಸಲು ಅಗತ್ಯವಾದ ಅಂಶಗಳು ಇಲ್ಲ. ರಾಜ್ಯ ಪೊಲೀಸರು ಮತ್ತು ಎನ್​ಐಎ ತನಿಖೆಯಲ್ಲಿ ಗುರುತಿಸಲಾದ ಆರೋಪಿಗಳಲ್ಲಿ ವ್ಯತ್ಯಾಸವಿದೆ. ಆರೋಪಿಗಳು ಗಲಭೆಯಲ್ಲಿ ಮತ್ತು ವಾಹನಕ್ಕೆ ಬೆಂಕಿ ಹಚ್ಚುವ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂಬ ವಿಡಿಯೋ ದಾಖಲೆಗಳು ಸ್ಪಷ್ಟವಾಗಿದೆ. ಪೊಲೀಸರು ದಾಖಲಿಸಿದ್ದ ನಾಲ್ಕು ಪ್ರತ್ಯೇಕ ಎಫ್​​ಐಆರ್​ಗಳ ಆರೋಪಿಗಳನ್ನು ಒಂದು ಸೇರಿಸಿ ಎನ್​ಐಎ ಚಾರ್ಜ್​ಶೀಟ್​ ಸಲ್ಲಿಸಿದೆ. ಅರ್ಜಿದಾರರ ವಿರುದ್ಧ ಭಯೋತ್ಪಾದನೆಯ ಆರೋಪ ಹೊರಿಸಲಾಗಿದೆ. ಆದರೆ, ಅದಕ್ಕೆ ಪೂರಕ ಸಾಕ್ಷ್ಯಗಳಿಲ್ಲ ಎಂದು ಚಾರ್ಜ್​ಶೀಟ್​ ರದ್ದುಮಾಡುವಂತೆ ಕೋರಿದ್ದರು.

ಗಲಭೆ ನಡೆಸಲು ಸಂಚು:

ಆರೋಪಿಗಳು ಒಟ್ಟು ಸೇರಿ ಗಲಭೆ ನಡೆಸಲು ಸಂಚು ಹೂಡಿದ್ದರು ಎಂಬುದಕ್ಕೆ ಪೂರಕ ಸಾಕ್ಷ್ಯಗಳಿವೆ ಎಂದು ಸಿಡಿಆರ್​ ಕರೆಗಳ ದಾಖಲೆಗಳನ್ನು ನ್ಯಾಯಾಲಯಕ್ಕೆ ಎನ್​ಐಎ ಸಲ್ಲಿಸಿದ್ದರು. ಕಲ್ಲು, ಕಬ್ಬಿಣದ ರಾಡ್​ಗಳು ಮತ್ತು ದೊಣ್ಣೆಯಿಂದ ಪೊಲೀಸ್​ ಠಾಣೆ ಆವರಣದಲ್ಲಿ ದಾಳಿ ನಡೆಸಲಾಗಿದೆ. ಈ ಕೃತ್ಯಗಳಿಂದ ಜನರ ನಡುವ ಭಯ ಸೃಷ್ಟಿಸುವ ಇರಾದೆ ಆರೋಪಿಗಳಿಗಿತ್ತು. ಆರೋಪಿಗಳ ವೈಯಕ್ತಿಕ ಪಾತ್ರದ ಬಗ್ಗಯೂ ಸಾಕಷ್ಟು ಪೂರಕ ಸಾಕ್ಷ$್ಯಗಳಿವೆ. ಸಾಗಳಲ್ಲಿ ವ್ಯತ್ಯಾಸವಿದೆಯೇ ಎಂಬ ಬಗ್ಗೆ ಚಾರ್ಜ್​ಶೀಟ್​ ಅನ್ನು ವಿಚಾರಣೆಗೆ ಅಂಗೀಕರಿಸುವ ಮೊದಲು ಮಿನಿ ಟ್ರಯಲ್​ ನಡೆಸುವ ಅಗತ್ಯವಿಲ್ಲ. ಇದೆಲ್ಲವೂ ಅಂತಿಮ ವಿಚಾರಣೆಯಲ್ಲಿ ತಿಳಿದುಬರಬೇಕಾದ ವಿಷಯಗಳು ಎಂದು ಎನ್​ಐಎ ಪರ ವಕೀಲರು ವಾದಿಸಿದ್ದರು. ಈ ವಾದಗಳನ್ನು ಹೈಕೋರ್ಟ್​ ಪರಿಗಣಿಸಿದೆ.

ಪ್ರಕರಣದ ಹಿನ್ನೆಲೆ

ಫೇಸ್​ಬುಕ್​ನಲ್ಲಿ ಮುಸ್ಲಿಂರ ವಿರುದ್ಧ ವಿವಾದಾತ್ಮಕ ಪೋಸ್ಟ್​ ಮಾಡಿದ ಆರೋಪದ ಹಿನ್ನಲೆಯಲ್ಲಿ ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿ ವ್ಯಾಪ್ತಿಯಲ್ಲಿ 2020ರ ಗಲಭೆ ಉಂಟಾಗಿತ್ತು. ಪೋಸ್ಟ್​ ಮಾಡಿದ್ದ ನವೀನ್​ ಎಂಬಾತನ ಮೇಲೆ ದೂರು ನೀಡಲು ಠಾಣೆಯ ಮುಂದೆ ಗುಂಪು ಜಮಾಯಿಸಿತ್ತು. ನಂತರ ಉದ್ವಿಗ್ನತೆ ಹೆಚ್ಚಾಗಿ ಗುಂಪು ಹಿಂಸಾಚಾರ ನಡೆದಿತ್ತು. ಅಂದಿನ ಪುಲಿಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯೂ ಗಲಭೆಕೋರರ ದಾಳಿಗೆ ಒಳಗಾಗಿತ್ತು. ಆರಂಭದಲ್ಲಿ ರಾಜ್ಯ ಪೊಲೀಸರು ಎಫ್​​ಐಆರ್​ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ನಂತರ ತನಿಖೆಯು ಎನ್​ಐಎಗೆ ವರ್ಗಾವಣೆಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net