ಕಡಿಮೆ ಆಟೋ ನಿಯೋಜಿಸಿದರೆ ಬಿಲ್ ಕಡಿತಗೊಳಿಸಿ

reduce-the-bill
reduce-the-bill
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ಶಾಸಕ ಆರ್. ಅಶೋಕ್ ಸೂಚನೆ
  • ಪದ್ಮನಾಭನಗರದಲ್ಲಿ ಕಸ ಸಮಸ್ಯೆ ಬಗ್ಗೆ ಅಹವಾಲು ಆಲಿಕೆ
ಬೆಂಗಳೂರು: ಘನತ್ಯಾಜ್ಯ ನಿರ್ವಹಣಾ ಗುತ್ತಿಗೆದಾರರು ತಮ್ಮ ವ್ಯಾಪ್ತಿಯ ವಾರ್ಡ್‌ಗಳಲ್ಲಿ ನಿಗದಿಪಡಿಸಿರುವ ಆಟೋಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಬೇಕು. ನಿಗದಿಗಿಂತ ಕಡಿಮೆ ಆಟೋಗಳು ಕಾರ್ಯ ನಿರ್ವಹಿಸುತ್ತಿರುವುದು ಕಂಡುಬಂದಲ್ಲಿ ಅಂತಹ ಗುತ್ತಿಗೆ ಕಂಪನಿಗೆ ಬಿಲ್ ಕಡಿತಗೊಳಿಸುವಂತೆ ಶಾಸಕ ಆರ್. ಅಶೋಕ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಸ ನಿರ್ವಹಣೆ ಕುರಿತು ದಕ್ಷಿಣ ನಗರ ಪಾಲಿಕೆ, ಬಿಎಸ್‌ಡಬ್ಲ್ಯುಎಂಎಲ್ ಅಧಿಕಾರಿಗಳು, ಗುತ್ತಿಗೆದಾರರು, ಕಸ ಸಂಗ್ರಹಣಾ ಆಟೋಗಳ ಚಾಲಕರು ಹಾಗೂ ಸಾರ್ವಜನಿಕರೊಂದಿಗೆ ಪದ್ಮನಾಭನಗರ ಆಟದ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ನಾಗರಿಕರ ಅಹವಾಲು ಸಭೆಯನ್ನು ಅವರು ಈ ನಿರ್ದೇಶನವನ್ನು ನೀಡಿದರು.
ಪದ್ಮನಾಭನಗರ ಮತಕ್ಷೇತ್ರದ ಕುಮಾರಸ್ವಾಮಿ ಲೇಔಟ್, ಪದ್ಮನಾಭನಗರ, ಬನಶಂಕರಿ ಹಾಗೂ ಇತರ ವಾರ್ಡ್‌ಗಳಲ್ಲಿನ ನಾಗರಿಕರು ತಮ್ಮ ಮನೆಗಳಿಂದ ಅಸಮರ್ಪಕವಾಗಿ ಕಸ ಸಂಗ್ರಹಿಸುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಜತೆಗೆ ಬ್ಲ್ಯಾಕ್ ಸ್ಪಾಟ್ ಕೂಡ ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಿ ಸಮರ್ಪಕವಾಗಿ ಕೆಲಸ ನಿರ್ವಹಿಸುವಂತೆ ಶಾಸಕರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಮನೆ ಮುಂದೆ ಆಟೋ ಹಾಜರಾತಿ ಕಡ್ಡಾಯ:

ಪ್ರತಿ ವಾರ್ಡ್‌ಗೂ ಕಡ್ಡಾಯವಾಗಿ ಕಸದ ಆಟೋಗಳನ್ನು ನೇಮಿಸಬೇಕು. ಪ್ರತಿ ದಿನ ಬೆಳಗ್ಗೆ 6ರಿಂದ 9 ಗಂಟೆ ಒಳಗೆ ಕಸ ತೆಗೆಯಬೇಕು. ಆಟೋಗಳು ಪ್ರತಿದಿನ ಸಾರ್ವಜನಿಕರ ಮನೆ ಮನೆ ಮುಂದೆ ಹೋಗಿ ಕಸ ಸಂಗ್ರಹಿಸಬೇಕು ಮತ್ತು ಮನೆಗಳ ಮುಂದೆ ಹಾಜರಾತಿ ಹಾಕಬೇಕು. ಒಂದು ವೇಳೆ ಆಟೋ ಬಾರದಿದ್ದರೆ ನಾಗರಿಕರು ನೇರವಾಗಿ ಕಂಟ್ರಾಕ್ಟರ್‌ಗೆ ಫೋನ್ ಮಾಡಬಹುದು. ಇದಕ್ಕಾಗಿ ಆಟೋಗಳ ಮೇಲೆ ಕಡ್ಡಾಯವಾಗಿ ಆಟೋ ಟೆಲಿಫೋನ್ ನಂಬರ್ ಹಾಗೂ ಕಂಟ್ರಾಕ್ಟರ್ ನಂಬರ್ ಹಾಕಬೇಕು ಎಂದು ಆರ್.ಅಶೋಕ್ ಸೂಚಿಸಿದರು.
ದಕ್ಷಿಣ ಪಾಲಿಕೆ ಅಭಿಯಂತರ ಬಸವರಾಜ್ ಕಬಾಡೆ, ಡಿಜಿಎಂ ತನುಜಾ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಸ್ವಯಂಸೇವಕರ ನಿಯೋಜನೆ

ಸಾರ್ವಜನಿಕರ ಅಹವಾಲು ಆಲಿಸಿದ ಶಾಸಕರು, ಆಟೋಗಳ ಸಂಚಾರದ ಮೇಲೆ ನಿಗಾ ಇಡಲು ಸ್ಥಳೀಯರಿಂದ ಸ್ವಯಂಸೇವಕರನ್ನು ನಿಯೋಜನೆ ಮಾಡಲಾಗುವುದು. ಆಟೋಗಳ ಹಾಜರಾತಿಯನ್ನು ಪ್ರತಿನಿತ್ಯ ಶಾಸಕರ ಕಚೇರಿಗೆ ಪಡೆದು ಪರಿಶೀಲಿಸಲಾಗುವುದು ಎಂದು ಆರ್.ಅಶೋಕ್ ಭರವಸೆ ನೀಡಿದರು.
"

ಘನತ್ಯಾಜ್ಯ ನಿರ್ವಹಣಾ ಗುತ್ತಿಗೆದಾರರಿಗೆ ಒಂದು ವಾರದ ಗಡುವು ನೀಡುತ್ತಿದ್ದು, ಈ ಅವಧಿಯಲ್ಲಿ ವಾರ್ಡ್‌ಗಳಲ್ಲಿನ ಕಸದ ಸಮಸ್ಯೆ ಸಂಪೂರ್ಣವಾಗಿ ಪರಿಹಾರ ನೀಡಬೇಕು. ವಾರದ ನಂತರವೂ ಸಾರ್ವಜನಿಕರಿಂದ ದೂರು ಕೇಳಿ ಬಂದಲ್ಲಿ ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು.

- ಕೆ.ಎನ್. ರಮೇಶ್, ದಕ್ಷಿಣ ಪಾಲಿಕೆ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net