ನಾಳೆಯಿಂದ 3 ದಿನ ಮನೆ ಮನೆಗೆ ಭೇಟಿ ನೀಡಿ ಲಸಿಕೆ ಹಾಕಲಿರುವ ಆರೋಗ್ಯ ಕಾರ್ಯಕರ್ತರು
ಬೆಂಗಳೂರು: ರಾಜ್ಯದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನದಲ್ಲಿ ಮೊದಲ ದಿನ ನಿಗದಿತ ಗುರಿಯಲ್ಲಿ ಶೇ.93 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ರಾಜ್ಯಾದ್ಯಂತ ಒಟ್ಟು 64.84 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಈ ಪೈಕಿ ಭಾನುವಾರ 60.36 ಲಕ್ಷ ಮಕ್ಕಳಿಗೆ ಪೋಲಿಯೊ ಲಸಿಕೆ ನೀಡಲಾಗಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ನಿಗದಿಪಡಿಸಲಾಗಿದ್ದ 2,03,053 ಮಕ್ಕಳಲ್ಲಿ 2,02,700 ಲಸಿಕೆ ಹಾಕಲಾಗಿದೆ. ಜಿಬಿಎ ವ್ಯಾಪ್ತಿಯಲ್ಲಿ 11,47,872 ಮಕ್ಕಳಿಗೆ (ಶೇ.97) ಲಸಿಕೆ ನೀಡಲಾಗಿದೆ.
ನಂತರದ ಸ್ಥಾನದಲ್ಲಿ ಕೋಲಾರ (ಶೇ.98), ಬಳ್ಳಾರಿ (ಶೇ.97), ಕಲಬುರಗಿ (ಶೇ.97), ಶಿವಮೊಗ್ಗ (ಶೇ.97) ಹಾಗೂ ಚಿಕ್ಕಬಳ್ಳಾಪುರ, ಧಾರವಾಡ ಮತ್ತು ರಾಯಚೂರು ಜಿಲ್ಲೆಗಳಲ್ಲಿ ತಲಾ ಶೇ.96 ಲಸಿಕಾಕರಣ ಆಗಿದೆ. ಕೊಡಗು ಜಿಲ್ಲೆಯಲ್ಲಿ ಶೇ.82 ಹಾಗೂ ಗದಗದಲ್ಲಿ ಶೇ.83 ಲಸಿಕೆ ಹಾಕಲಾಗಿದೆ.
ಅಭಿಯಾನದ ಮೊದಲ ದಿನ (ಬೂತ್ ಮಟ್ಟದಲ್ಲಿ) ತಪ್ಪಿಸಿಕೊಂಡ ಮಕ್ಕಳನ್ನು ಗುರುತಿಸಿ ಲಸಿಕೆ ಹಾಕಲು ಜು.1ರವರೆಗೆ ಆರೋಗ್ಯ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಲಸಿಕೆ ಹಾಕಲಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.