ಫುಟ್‌ಪಾತ್‌ನಲ್ಲಿರುವ ಟ್ರಾನ್ಸ್‌ಫಾರ್ಮರ್‌ಗಳ ತೆರವಿಗೆ ಪಟ್ಟಿ ಸಿದ್ಧಪಡಿಸಿ
transformers
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬೆಸ್ಕಾಂ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ
ಟ್ರಾನ್ಸ್‌ಫಾರ್ಮರ್‌ಗಳು ಜನರ ಓಡಾಟಕ್ಕೆ ಅಡ್ಡಿಯಾಗದಂತೆ ವಿನ್ಯಾಸಗೊಳಿಸಿ
ಬೆಂಗಳೂರು: ಜಿಬಿಎ ವ್ಯಾಪ್ತಿಯ ಪಾದಚಾರಿ ಮಾರ್ಗಗಳಲ್ಲಿರುವ ಬೆಸ್ಕಾಂಗೆ ಸಂಬಂಧಿಸಿದ ಎಲ್ಲ ಅಡೆತಡೆಗಳ ಸಮಗ್ರ ಪಟ್ಟಿಯನ್ನು ಸಿದ್ಧಪಡಿಸಿ, ಆ.1ರಿಂದ ಪ್ರಾರಂಭವಾಗುವ ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನದಲ್ಲಿ ತೆರವು ಕಾರ್ಯಾಚರಣೆಯನ್ನು ಆರಂಭಿಸುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಗರದ ಫುಟ್‌ಪಾತ್‌ಗಳಲ್ಲಿರುವ ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್‌ಫಾರ್ಮರ್‌ಗಳ ಸ್ಥಳಾಂತರಕ್ಕೆ ಸಂಬಂಧಿಸಿ ಮಂಗಳವಾರ ನಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಅಭಿಯಾನದಡಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬೃಹತ್ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಬೆಸ್ಕಾಂಗೆ ಸಂಬಂಧಿಸಿದ ಅಡೆತಡೆಗಳನ್ನು ಇದೇ ಅವಧಿಯಲ್ಲಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ನಗರದಾದ್ಯಂತ ಬಳಕೆಯಲ್ಲಿಲ್ಲದ, ಹಳೆಯ ಹಾಗೂ ಮುರಿದ ವಿದ್ಯುತ್ ಕಂಬಗಳು, ತಂತಿಗಳು ಹಾಗೂ ಟ್ರಾನ್ಸ್‌ಫಾರ್ಮರ್‌ಗಳಿಗೆ ಅಳವಡಿಸಿರುವ ರಾಡ್‌ಗಳು ನಾಗರಿಕರ ತಲೆಗೆ ತಾಗುವ ರೀತಿಯಲ್ಲಿವೆ. ಇಂತಹವುಗಳನ್ನು ಕೂಡಲೇ ತೆರವುಗೊಳಿಸಬೇಕು. ಟ್ರಾನ್ಸ್‌ಫಾರ್ಮರ್‌ಗಳನ್ನು ಸ್ಥಳಾಂತರಿಸಲು ಅಲ್ಪಾವಧಿ/ದೀರ್ಘಾವಧಿ ಯೋಜನೆ ರೂಪಿಸಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಸಚಿವರು ಸೂಚನೆ ನೀಡಿದರು.
ಫುಟ್‌ಪಾತ್‌ಗಳ ಮಧ್ಯಭಾಗದಲ್ಲಿರುವ ವಿದ್ಯುತ್ ಕಂಬಗಳನ್ನು ಬಳಸಿಕೊಂಡು ಕೆಲವರು ಸಂಪೂರ್ಣ ಮಾರ್ಗವನ್ನು ಅತಿಕ್ರಮಿಸಿರುವ ಪ್ರಕರಣಗಳು ಕಂಡುಬರುತ್ತಿವೆ. ಖಾಸಗಿ ಅಪಾರ್ಟ್‌ಮೆಂಟ್‌ಗಳು ಅಳವಡಿಸಿಕೊಂಡಿರುವ ಟ್ರಾನ್ಸ್‌ಫಾರ್ಮರ್‌ಗಳು ಪಾದಚಾರಿ ಮಾರ್ಗ/ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿದ್ದು, ಅಂತಹವುಗಳನ್ನು ಪಟ್ಟಿ ಮಾಡಿ ಅವರದ್ದೇ ಜಾಗದಲ್ಲಿಯೇ ಅಳವಡಿಸಿಕೊಳ್ಳಲು ಸೂಚಿಸಬೇಕು. ನಗರದಾದ್ಯಂತ ಒಂದೇ ಮಾದರಿಯ ವಿನ್ಯಾಸವನ್ನು ರೂಪಿಸಿ ಅನುಷ್ಠಾನಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶಿದರು.
ಸಿಂಗಲ್ ಪೋಲ್ಗೆ ಟ್ರಾನ್ಸ್‌ಫಾರ್ಮರ್ ಬದಲಿಸಿ:
ಫುಟ್‌ಪಾತ್‌ಗಳಲ್ಲಿರುವ ಹಳೆಯ ಟ್ರಾನ್ಸ್‌ಫಾರ್ಮರ್‌ಗಳ ಸುತ್ತ ಅಳವಡಿಸಿರುವ ಫೆನ್ಸಿಂಗ್‌ನಿಂದ ಪಾದಚಾರಿಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ಅಲ್ಲದೆ, ಫೆನ್ಸಿಂಗ್ ಒಳಭಾಗದಲ್ಲಿ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಅದನ್ನು ತೆರವುಗೊಳಿಸಬೇಕು. ಹಳೆಯ ಪರಿವರ್ತಕಗಳನ್ನು ಸಿಂಗಲ್ ಪೋಲ್ ಟ್ರಾನ್ಸ್‌ಫಾರ್ಮರ್‌ಗಳಾಗಿ ಬದಲಾಯಿಸುವುದರ ಜತೆಗೆ ಅಗತ್ಯವಿರುವೆಡೆಗೆ ಸ್ಥಳಾಂತರಿಸುವಂತೆ ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಭೆಯಲ್ಲಿ ನಗರ ಪಾಲಿಕೆಗಳ ಆಯುಕ್ತರಾದ ಡಿ.ಎಸ್. ರಮೇಶ್, ಪಿ.ಸುನೀಲ್ ಕುಮಾರ್, ಕೆ.ಎನ್. ರಮೇಶ್, ಜಿ.ಜಗದೀಶ್, ಕೆ.ವಿ. ರಾಜೇಂದ್ರ ಹಾಗೂ ಮುಖ್ಯ ಅಭಿಯಂತರರು ಉಪಸ್ಥಿತರಿದ್ದರು.
"
ನಗರದಲ್ಲಿ ಫುಟ್‌ಪಾತ್‌ಗಳಲ್ಲಿದ್ದ ಅಂದಾಜು 7,000 ಹಳೆಯ ಪರಿವತೃಕಗಳನ್ನು ಈಗಾಗಲೇ ಬದಲಿಸಲಾಗಿದೆ. ಇನ್ನೂ ಎಲ್ಲೆಲ್ಲಿ ಹಳೆಯ ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ಅಡೆತಡೆಗಳಿವೆಯೋ ಅವುಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಂದೇ ಮಾದರಿಯ ವಿನ್ಯಾಸವನ್ನು ರೂಪಿಸಿ ವಿಶೇಷ ಅಭಿಯಾನದ ಮೂಲಕ ಸಮಸ್ಯೆಯನ್ನು ಪರಿಹರಿಸಲಾಗುವುದು.