ಮರ ಕಡಿಯುವ ಮುನ್ನ ಅನುಮತಿ ಕಡ್ಡಾಯ

ಮರಗಳನ್ನು ಕಟಾವು ಮಾಡುತ್ತಿರುವುದು. (ಎಐ ಚಿತ್ರ)
ಮರಗಳನ್ನು ಕಟಾವು ಮಾಡುತ್ತಿರುವುದು. (ಎಐ ಚಿತ್ರ)
Published on
ಕಿರುವಾರ ಎಸ್​. ಸುದರ್ಶನ್​ ಬೆಂಗಳೂರು
ಜಮೀನಿನಲ್ಲಿ ಬೆಳೆಸಿದ ಮರಗಳನ್ನು ಕಟಾವು ಮಾಡಲು ಕಡ್ಡಾಯವಾಗಿ ಅನುಮತಿ ಪಡೆಯಲು ಅರಣ್ಯ ಇಲಾಖೆಯು "ಇ- ಫಿಲ್ಲಿಂಗ್​ ಆ್ಯಂಡ್​ ಟ್ರಾನ್ಸಿಟ್​ ಪಮೀರ್ಷನ್​ ತಂತ್ರಾಂಶ' ಅಭಿವೃದ್ಧಿಪಡಿಸಿದ್ದರೂ ಕಟಾವುದಾರರು ನಿಯಮ ಪಾಲನೆ ಮಾಡುತ್ತಿಲ್ಲ.
ಕೆಲವರು ಆರ್ಥಿಕ ಲಾಭ ಅಥವಾ ಇನ್ಯಾವುದೋ ಉದ್ದೇಶಕ್ಕೆ ಮರ ಕಟಾವು ಮಾಡುತ್ತಿದ್ದಾರೆ. ಆದರೆ ಯಾರು, ಎಲ್ಲಿ, ಯಾವ ಉದ್ದೇಶಕ್ಕೆ ಮರಕ್ಕೆ ಕೊಡಲಿ ಪೆಟ್ಟು ನೀಡುತ್ತಿದ್ದಾರೆ ಎಂಬ ಮಾಹಿತಿ ಇಲಾಖೆಗೆ ಲಭ್ಯವಾಗುತ್ತಿರಲಿಲ್ಲ. ಇದನ್ನು ತಡೆಯುವ ಉದ್ದೇಶದಿಂದ ಆನ್​ಲೈನ್​ ಅನುಮತಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಹೀಗಿದ್ದರೂ ಕಟಾವುದಾರರು ಇದ್ಕಕೆ ಉದಾಸೀನ ತೋರುತ್ತಿದ್ದಾರೆ ಎಂಬ ಅಪಾದನೆಯಿದೆ.
ಮಿತಿಯಲ್ಲದೆ ಮರಗಳ ಕಟಾವು ಪರಿಣಾಮ ಶೇ.30 ಇರಬೇಕಾದ ಅರಣ್ಯ ಪ್ರದೇಶವು ದಿನೇದಿನೇ ಕುಸಿಯುತ್ತಿದೆ. ಇದರಿಂದ ಪರಿಸರ ಅಸಮತೋಲನ ಆಗುತ್ತಿದೆ. ಪ್ರತಿ ವರ್ಷ ಅರಣ್ಯ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂ.ಗಳನ್ನು ಸರ್ಕಾರ ವೆಚ್ಚ ಮಾಡುತ್ತಿದೆ. ಆದರೆ ಅರಣ್ಯ ಪ್ರಗತಿ ಎಲ್ಲಾಗುತ್ತಿದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.
ಸಕಲೇಶಪುರ, ಕೋಲಾರ, ಹೊಸಕೋಟೆ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಸೇರಿ ವಿವಿಧೆಡೆ ಮರಗಳ ಅಕ್ರಮ ಕಟಾವು ನಡೆದಿದೆ. ಇದನ್ನು ತಡೆಯಲು ಇಲಾಖೆಯು ಕ್ರಮವಹಿಸಿದೆ. ಖಾಸಗಿ ಜಾಗದಲ್ಲಿ ಬೆಳೆಸಿದ ಕೆಲ ಜಾತಿಯ ಮರಗಳನ್ನು ಕಡಿದು ಸಾಗಾಟ ಮಾಡಬೇಕಿದ್ದರೆ ಅರಣ್ಯ ಇಲಾಖೆ ಅನುಮತಿ ಪಡೆದುಕೊಳ್ಳಬೇಕು ಎಂಬ ನಿಯಮವಿದೆ. ಮಾಲೀಕರು ಕಚೇರಿಗೆ ಬಂದು ಅನುಮತಿ ಪಡೆದುಕೊಳ್ಳಲು ವಿಳಂಬ ಆಗುತ್ತಿತ್ತು, ಇದನ್ನು ತಡೆಯಲು ಆನ್​ಲೈನ್​ ಮೂಲಕ ಅನುಮತಿ ಕಡ್ಡಾಯಗೊಳಿಸಲಾಗಿದೆ. 
ಪೋರ್ಟಲ್​ ಕೆಲಸವೇನು?
ಅರಣ್ಯ ಇಲಾಖೆಯು ಕೆಲವೊಂದು ಮರಗಳನ್ನು ಕಡಿಯುವುದು ಹಾಗೂ ಸಾಗಾಟಕ್ಕೆ ವಿನಾಯಿತಿ ನೀಡಿದೆ. ಟೀಕು, ಶ್ರೀಗಂಧ, ರಕ್ತ ಚಂದನ ಸೇರಿ ಹಲವು ಜಾತಿಯ ಮರಗಳನ್ನು ಕಡಿಯಲಿಚ್ಛಿಸುವವರು ಫೋಟೋ, ಸ್ಥಳದ ಮಾಹಿತಿ, ಜಮೀನಿನ ದಾಖಲೆ, ಮರ ಕಡಿಯಲು ಕಾರಣ ನಮೂದಿಸಿ ಅರ್ಜಿ ಸಲ್ಲಿಸಬೇಕು. ಈ ಸಂದರ್ಭ ಅರ್ಜಿದಾರರಿಗೆ ಸಂಬಂಧಪಟ್ಟ ಅಧಿಕಾರಿಯ ವಿವರ ಹಾಗೂ ಅರ್ಜಿ ಸಂಖ್ಯೆ ಲಭ್ಯವಾಗುತ್ತದೆ. ಈ ಅರ್ಜಿ ಸಂಖ್ಯೆ ಆಧಾರದಲ್ಲಿ ಅಧಿಕಾರಿಗಳು ಜಮೀನಿಗೆ ತೆರಳಿ ಮೂಲ ದಾಖಲೆ ಹಾಗೂ ಸ್ಥಳ ಪರಿಶೀಲನೆ ನಡೆಸಿ ವಲಯ ಅರಣ್ಯಾಧಿಕಾರಿಗಳಿಗೆ ವರದಿ ಸಲ್ಲಿಸುತ್ತಾರೆ. ಬಳಿಕ ಅರಣ್ಯಾಧಿಕಾರಿಗೆ ಸೂಕ್ತವೆನಿಸಿದರೆ ಮರ ಕಡಿಯಲು ಹಾಗೂ ಸಾಗಾಟಕ್ಕೆ ಅನುಮತಿ ನೀಡುತ್ತಾರೆ. ಮರ ವಿನಾಶದ ಅಂಚಿನಲ್ಲಿರುವ ಪ್ರಭೇದಕ್ಕೆ ಸೇರಿದ್ದರೆ ಆಯ್ಕೆ ಸಂದರ್ಭದಲ್ಲೇ, ಅದರ ತೆರವು ಸಾಧ್ಯವಿಲ್ಲ ಎಂಬ ಸಂದೇಶವನ್ನು ತಂತ್ರಾಂಶ ತೋರಿಸಬೇಕು. ಈ ಎಲ್ಲ ಪ್ರಕ್ರಿಯೆಯನ್ನು ಅರಣ್ಯ ಇಲಾಖೆಯ ಮಾಹಿತಿ ಸಂವಹನ ಮತ್ತು ತಂತ್ರಜ್ಞಾನ ಕೇಂದ್ರದ (ಐಸಿಟಿ) ಅಧಿಕಾರಿ, ಸಿಬ್ಬಂದಿ ನಿರ್ವಹಿಸಲಿದ್ದಾರೆ. 
ಸ್ಪಷ್ಟೀಕರಣಕ್ಕೆ ವಿಳಂಬ
ಅರಣ್ಯ ಹೊರತುಪಡಿಸಿ ರೈತರು, ಖಾಸಗಿ ವ್ಯಕ್ತಿಗಳು ಗೋಮಾಳ, ಕೆರೆ, ಸರ್ಕಾರಿ ಜಮೀನು ಹೀಗೆ ವಿವಿಧೆಡೆ ಬೆಳೆದಿರುವ ಮರಗಳ ಕಟಾವು ಮಾಡುತ್ತಿರುವ ಮಾಹಿತಿ ಇಲಾಖೆಗೆ ಲಭ್ಯವಾಗುತ್ತಿಲ್ಲ. ಅರಣ್ಯ ಹೊರತುಪಡಿಸಿ ಬೇರೆ ಜಾಗದಲ್ಲಿ ಇರುವ ಮರಗಳನ್ನು ಕಟಾವು ಮಾಡಲು ಅನುಮತಿ ಕಡ್ಡಾಯವಾಗಿದೆ. ಮರಗಳು ಇರುವ ಜಮೀನು ಹಾಗೂ ಕಟಾವುದಾರನಿಗೆ ಇರುವ ಸಂಬಂಧವೇನು ಎಂಬುದರ ಬಗ್ಗೆ ತಹಸೀಲ್ದಾರ್​ ಕಚೇರಿಯಿಂದ ಸ್ಪಷ್ಟೀಕರಣ ನೀಡಬೇಕು. ಇದು ವಿಳಂಬವಾಗುತ್ತಿರುವುದರಿಂದ ಅರಣ್ಯದಿಂದ ಅನುಮತಿ ನೀಡಲು ತಡವಾಗುತ್ತಿದೆ.
ಅರಣ್ಯ ಅಭಿವೃದ್ಧಿಗಾಗಿ ಇಲಾಖೆಯಿಂದ ಸಾವಿರಾರು ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಮರಗಳ ಮಾರಣ ಹೋಮ ನಡೆಯುತ್ತಿದ್ದರೂ ಅಧಿಕಾರಿಗಳು ಕಾಳಜಿ ತೋರುತ್ತಿಲ್ಲ. ಮರಗಳ ಅಕ್ರಮ ಕಟಾವು, ಸಾಗಣೆ ಮಾಡುತ್ತಿರುವುದು ಕಂಡುಬಂದಿದೆ. ಕ್ರಮ ಆಗದೆ ಇರುವುದು ಪ್ರಕರಣಗಳು ಮರುಕಳುಹಿಸುತ್ತಿವೆ.
- ಪಾಪೇಗೌಡ, ಪರಿಸರವಾದಿ
ಮರಗಳ ಕಟಾವಿಗೆ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಲು ಪೋರ್ಟಲ್​ ಅಭಿವೃದ್ಧಿಪಡಿಸಿ ಅಕ್ರಮ ಕಟಾವು, ಸಾಗಣೆಯ ನಿಯಂತ್ರಣಕ್ಕೆ ಕ್ರಮವಹಿಸಲಾಗಿದೆ. ಅಕ್ರಮವಾಗಿ ಮರಗಳನ್ನು ಕಟಾವು ಮಾಡಿ ಸಾಗಣೆ ಮಾಡುತ್ತಿರುವುದು ಕಂಡುಬಂದರೆ ಕ್ರಮವಹಿಸಲಾಗುವುದು. 
- ಹೆಸರು ಹೇಳಲು ಇಚ್ಚಿಸಿದ ಅಧಿಕಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net