ಕೆಂಗೇರಿ ಆಸ್ಪತ್ರೆಗೆ ಮುಲಸೌಕರ್ಯ ಕಲ್ಪಿಸಲು ಆದೇಶ

kengerihospital
kengerihospital
Published on

ಪ್ರಮುಖ ಮುಖ್ಯಾಂಶಗಳು

  • ಮಾನವಹಕ್ಕುಗಳ ಆಯೋಗದಿಂದ ಸರ್ಕಾರಕ್ಕೆ ನಿರ್ದೇಶನ
  • ಏ.13ರ ಒಳಗೆ ಅನುಪಾಲನಾ ವರದಿ ಸಲ್ಲಿಸಲು ಗಡುವು
ಬೆಂಗಳೂರು: ಕೆಂಗೇರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರನ್ನು ವರ್ಗಾಯಿಸದೆ ಅಲ್ಲಿನ ಆಸ್ಪತ್ರೆಗೆ ಹೆಚ್ಚಿನ ಮೂಲಸೌಕರ್ಯ ಕಲ್ಪಿಸುವಂತೆ ಕರ್ನಾಟಕ ಮಾನವಹಕ್ಕುಗಳ ಆಯೋಗ (ಕೆಎಸ್‌ಎಚ್‌ಆರ್‌ಸಿ) ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಆದೇಶಿಸಿದೆ.
ಹಾಲಿ ಕೆಲಸ ಮಾಡುತ್ತಿರುವ ವೈದ್ಯರನ್ನು ಬೇರೆಡೆಗೆ ವರ್ಗಾವಣೆ ಮಾಡುವ ಸನ್ನಿವೇಶ ಬಂದಲ್ಲಿ ಈ ಆಸ್ಪತ್ರೆಗೆ ಪರ್ಯಾಯವಾಗಿ ನುರಿತ ವೈದ್ಯಾಧಿಕಾರಿಗಳನ್ನು ನೇಮಿಸಬೇಕು. ಆಸ್ಪತ್ರೆಯನ್ನು ಪ್ರಸ್ತುತ ದರ್ಜೆಯಿಂದ ಕಡಿಮೆಗೊಳಿಸಬಾರದು. ಭವಿಷ್ಯದಲ್ಲಿ ಆಸ್ಪತ್ರೆಯ ಸ್ಥಿತಿಗೆ ಸಂಬಂಧಿಸಿದ ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲ ಸಾರ್ವಜನಿಕ ಹಿತಾಸಕ್ತಿ ಹಾಗೂ ಆರೋಗ್ಯ ಹಕ್ಕಿನ ಪರಿಣಾಮವನ್ನು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಆಯೋಗವು ಆದೇಶದಲ್ಲಿ ಉಲ್ಲೇಖಿಸಿದೆ.
ಈ ಎಲ್ಲ ಶಿಫಾರಸು ಅನ್ವಯ ಸೂಕ್ತ ಕ್ರಮ ಕೈಗೊಳ್ಳಲು ಅಗತ್ಯ ಆದೇಶ ಹೊರಡಿಸಿ ಆಯೋಗಕ್ಕೆ ಮಾ.13ರೊಳಗೆ ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಕೆಎಸ್​ಎಚ್​​​ಆರ್​​ಸಿ ಹಂಗಾಮಿ ಅಧ್ಯಕ್ಷ ಟಿ.ಶ್ಯಾಮ್​​ ಭಟ್​​ ನಿರ್ದೇಶಿಸಿದ್ದಾರೆ.


ದೂರು ಆಧರಿಸಿ ಆದೇಶಿಸಿದ ಆಯೋಗ:

2015ರಲ್ಲಿ ಆರಂಭವಾಗಿರುವ ಕೆಂಗೇರಿ ಸಮುದಾಯ ಆರೋಗ್ಯ ಕೇಂದ್ರವು 30 ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ಆಸ್ಪತ್ರೆಯಾಗಿದೆ. ಈ ಕೇಂದ್ರದಲ್ಲಿ ಪ್ರಸೂತಿ ತಜ್ಞರು ಸೇರಿ ವಿವಿಧ ವಿಭಾಗಗ ವೈದ್ಯರು, ದಾದಿಯರು ಸೇರಿ ಒಟ್ಟು 42 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಜತೆಗೆ ಈ ಕೇಂದ್ರವು ಕೆಂಗೇರಿ ಸುತ್ತಲಿನ 32 ಹಳ್ಳಿಗಳ ಜನರಿಗೆ ಆರೋಗ್ಯ ಸೌಲಭ್ಯವನ್ನು ಒದಗಿಸುತ್ತಿದ್ದು, ಹೆಣ್ಣುಮಕ್ಕಳ ಆರೋಗ್ಯಕ್ಕೆ ಪ್ರಮುಖ ಆಸ್ಪತ್ರೆಯಾಗಿದೆ. ಆದರೆ, ಕಳೆದೆರಡು ತಿಂಗಳ ಹಿಂದೆ ಈ ಕೇಂದ್ರವನ್ನು ಬೇರೊಂದು ಆಸ್ಪತ್ರೆಗೆ ಸ್ಥಳಾಂತರಿಸುವ ಅಥವಾ ಇಲ್ಲಿನ ತಜ್ಞ ವೈದ್ಯರನ್ನು ಬೇರಡೆಗೆ ವರ್ಗಾಯಿಸುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿತ್ತು. ಜನರಿಗೆ ಸಹಕಾರಿಯಾಗಿರುವ ಈ ಕೇಂದ್ರವನ್ನು ಬೇರೆಡೆಗೆ ವಗಾಯಿಸಬಾರದು ಎಂದು ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆಯು ಮಾನವಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿತ್ತು.
ಕೆಂಗೇರಿ ಸಹಿತ ಬೆಂಗಳೂರು ನಗರ ಜಿಲ್ಲೆಯ 9 ಪಿಎಚ್‌ಸಿ/ಸಮುದಾಯ ಆರೋಗ್ಯ ಕೇಂದ್ರಗಳನ್ನು ಕಡಿಮೆ ಸಾಮರ್ಥ್ಯ ಪ್ರದರ್ಶಿಸುತ್ತಿದೆ ಎಂಬ ಕಾರಣವೊಡ್ಡಿ ಅಲ್ಲಿನ ವೈದ್ಯರನ್ನು ಬೇರೆಡೆಗೆ ವರ್ಗಾಯಿಸಲು ಇಲಾಖೆ ಒಪ್ಪಿಗೆ ಸುಚಿಸಿತ್ತು. ಈ ನಡೆಗೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ದೂರು ಆಧರಿಸಿ ವಿಚಾರಣೆ ನಡೆಸಿದ ಆಯೋಗವು ಕೆಂಗೇರಿ ಆಸ್ಪತ್ರೆಯ ವೈದ್ಯರನ್ನು ವರ್ಗಾಯಿಸಬಾರದು ಹಾಗೂ ಆಸ್ಪತ್ರೆಯನ್ನು ಮೇಲದ್ದರ್ಜೆಗೇರಿಸಲು ಅಗತ್ಯ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಆದೇಶ ಮಾಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net