ಬಿಸಿಲ ಕಾಲದಲ್ಲಿ ಬಾಧಿಸದು ಜಲಾತಂಕ | summer

ಜಲ ಸಂರಕ್ಷಣೆ
ಜಲ ಸಂರಕ್ಷಣೆ
Published on

ಪ್ರಮುಖ ಮುಖ್ಯಾಂಶಗಳು

  • ಸಮಸ್ಯೆ ನಿರ್ವಹಿಸಲು ಸಜ್ಜಾದ ಜಲಮಂಡಳಿ
  • ತಂತ್ರಜ್ಞಾನ ಆಧಾರಿತ ಸೇವೆಗೆ ಒತ್ತು
ಪವನ್​ ಆಚಾರ್ಯ ನೀರ್ಚಾಲು ಬೆಂಗಳೂರು 
ಬೇಸಿಗೆ ಎಂದಾಕ್ಷಣ ರಾಜಧಾನಿ ನಿವಾಸಿಗಳಿಗೆ ನೀರಿನ ಅಭಾವದ್ದೇ ಭೀತಿ. ಟ್ಯಾಂಕರ್​ ನೀರಿನ ದರ ಏರಿಕೆ, ಅಂತರ್ಜಲ ಮಟ್ಟ ಕುಸಿತ ಇವೆಲ್ಲ ಸಾಮಾನ್ಯ ಸಮಸ್ಯೆಗಳು. ಆದರೆ, ಈ ಬಾರಿ ಚಿತ್ರಣ ಬದಲಾಗಲಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಳೆದ ಎರಡು ವರ್ಷಗಳಲ್ಲಿ ಕೈಗೊಂಡ ಸಮಗ್ರ ಸುಧಾರಣೆಗಳಿಂದಾಗಿ, ಮುಂಬರುವ ಬೇಸಿಗೆಯಲ್ಲಿ ಜಲಾತಂಕದಿಂದ ಮುಕ್ತವಾಗುವ ಲಕ್ಷಣಗಳು ಕಾಣಿಸಿವೆ.
ನೀರು ಪೂರೈಕೆಯಷ್ಟೇ ಅಲ್ಲ, ನೀರಿನ ಆಡಳಿತ, ಸಂರಕ್ಷಣೆ ಮತ್ತು ತಂತ್ರಜ್ಞಾನ ಬಳಕೆಯಲ್ಲಿಯೂ ಮಹತ್ವದ ಬದಲಾವಣೆಗಳು ಕಂಡುಬಂದಿವೆ. ಪರಂಪರಿಕ ನೀರು ಪೂರೈಕೆ ವ್ಯವಸ್ಥೆಯಿಂದ ಹೊರಬಂದು, ತಂತ್ರಜ್ಞಾನ ಆಧಾರಿತ ಹಾಗೂ ನಾಗರಿಕ ಕೇಂದ್ರಿತ ಮಾದರಿಯತ್ತ ಸಂಸ್ಥೆ ಮಂಡಳಿ ಹೆಜ್ಜೆ ಇಟ್ಟಿದೆ.
ಟ್ಯಾಂಕರ್​ ನೀರು ದಂಧೆಗೆ ಬ್ರೇಕ್​: ಈ ಹಿಂದೆ ಟ್ಯಾಂಕರ್​ ನೀರಿನ ದರ ಏರಿಕೆ, ಅಸಮರ್ಪಕ ಪೂರೈಕೆ ಹಾಗೂ ದಂಧೆ ದೊಡ್ಡ ಸಮಸ್ಯೆಯಾಗಿತ್ತು. ಇದಕ್ಕೆ ಕಡಿವಾಣ ಹಾಕಲು ಜಲಮಂಡಳಿ "ಸಂಚಾರಿ ಕಾವೇರಿ' ಎಂಬ ಡಿಜಿಟಲ್​ ಟ್ಯಾಂಕರ್​ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಜಿಪಿಎಸ್​ ಟ್ರ್ಯಾಕಿಂಗ್​, ಒಟಿಪಿ ಆಧಾರಿತ ವಿತರಣೆ, ದೃಢೀಕರಣ ಮತ್ತು ದರ ನಿಗದಿ ಮೂಲಕ ನೀರು ಪೂರೈಸಲಾಗುವುದು. ಸಣ್ಣ ರಸ್ತೆ, ವಸತಿ ಪ್ರದೇಶ ಮತ್ತು ಅಸಂಘಟಿತ ಬಡಾವಣೆಗಳಿಗೆ ನೀರು ತಲುಪಿಸಲು ಸುಮಾರು 1,700 ಮಿನಿ ಟ್ಯಾಂಕರ್​ ಬಳಸುವ ವಿಶೇಷ ಯೋಜನೆಯೂ ಪರಿಣಾಮಕಾರಿಯಾಗಿದೆ. ಇದರಿಂದ ನೀರು ತಲುಪದ ಪ್ರದೇಶಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.
ಇಎಂಐ ಯೋಜನೆ
ಮನೆ& ಮನೆಗೂ ನೇರ ಕಾವೇರಿ ನೀರು ಸಂಪರ್ಕ ಲಭಿಸಿದರೆ, ಬೇಸಿಗೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ. ಇದಕ್ಕಾಗಿಯೇ ಮಂಡಳಿಯು "ಸರಳ ಕಾವೇರಿ ಇಎಂಐ' ಯೋಜನೆ ಜಾರಿಗೆ ತಂದಿದೆ. ಕಂತುಗಳಲ್ಲಿ ಪಾವತಿ ಸೌಲಭ್ಯ ನೀಡುವ ಮೂಲಕ, ಅನೇಕ ಕುಟುಂಬಗಳು ಮತ್ತು ಅಪಾರ್ಟ್​ಮೆಂಟ್​ಗಳು ಈಗ ಅಧಿಕೃತ ನೀರು ಸಂಪರ್ಕ ಪಡೆಯಲು ಮುಂದಾಗಿವೆ. ಇದರಿಂದ ಟ್ಯಾಂಕರ್​ ಅವಲಂಬನೆಯೂ ಕಡಿಮೆಯಾಗುವ ಜತೆಗೆ, ನೀರಿನ ಸರಬರಾಜು ಸುಲಲಿತವಾಗಿದೆ. ಹೊಸ ಸಂಪರ್ಕ ಪ್ರಕ್ರಿಯೆಯನ್ನೂ "ಜಲಧಾರೆ' ಆನ್​ಲೈನ್​ ಪೋರ್ಟಲ್​ ಮೂಲಕ ನಿರ್ವಹಿಸಿ ನಾಗರಿಕರ ಸಮಯ ಮತ್ತು ಶ್ರಮ ಉಳಿಸುತ್ತಿದೆ.
ಭೂಗರ್ಭ ಜಲದ ಮೇಲೆ ನಿಗಾ
ಮುಂದಿನ ಬೇಸಿಗೆಯಲ್ಲಿ ಭೂಗರ್ಭ ಜಲದ ಮೇಲೆ ಹೆಚ್ಚುವ ಒತ್ತಡವನ್ನು ತಡೆಯಲು, ನಗರಾದ್ಯಂತ ಸುಮಾರು 4,000 ಲಾಟ್​ ಸಕ್ರಿಯಗೊಳಿಸಿದ ಬೋರ್​ವೆಲ್​ ಆಟೊಮೇಷನ್​ ಅಳವಡಿಸಲಾಗಿದೆ. ಇವು ಭೂಗರ್ಭ ಜಲಮಟ್ಟ, ನೀರು ಎತ್ತುವ ಪ್ರಮಾಣ ಮತ್ತು ಋತುಮಾನಕ್ಕೆ ಅನುಗುಣವಾಗಿ ಬದಲಾವಣೆಗಳ ಕುರಿತು ರಿಯಲ್​-ಟೈಂ ಮಾಹಿತಿ ನೀಡುತ್ತಿವೆ. ಸಂಕಷ್ಟ ಬಂದ ಬಳಿಕ ಕ್ರಮ ಕೈಗೊಳ್ಳುವ ಬದಲು, ಮುನ್ನೆಚ್ಚರಿಕೆಯ ನೀರು ನಿರ್ವಹಣೆಗೆ ಇದು ನೆರವಾಗುತ್ತಿದೆ. ಸಾರ್ವಜನಿಕ ಬೋರ್​ವೆಲ್​ಗಳಲ್ಲಿ ಸ್ವಯಂಚಾಲಿತ ನಿಯಂತ್ರಣ ವ್ಯವಸ್ಥೆ ಅಳವಡಿಸಲಾಗುತ್ತಿದೆ.
ಶೂನ್ಯ ಬ್ಯಾಕ್ಟೀರಿಯಾ
ಬೆಂಗಳೂರು ಪ್ರತಿದಿನ ಉತ್ಪಾದಿಸುವ ಒಳಚರಂಡಿ ನೀರಿನ ದೊಡ್ಡ ಪ್ರಮಾಣವನ್ನು ಈಗ ಪರಿಣಾಮಕಾರಿಯಾಗಿ ಶುದ್ಧೀಕರಿಸಲಾಗುತ್ತಿದೆ. ಶುದ್ಧೀಕರಿಸಿದ ನೀರನ್ನು ಕೈಗಾರಿಕೆ, ಐಟಿ ಪಾರ್ಕ್​ ಹಾಗೂ ದೊಡ್ಡ ಕ್ಯಾಂಪಸ್​ಗಳಿಗೆ ಪೂರೈಕೆ ಮಾಡಲಾಗುತ್ತಿದೆ. "ಶೂನ್ಯ ಬ್ಯಾಕ್ಟೀರಿಯಾ' ತಂತ್ರಜ್ಞಾನದಿಂದ ಶುದ್ಧೀಕರಿಸಿದ ನೀರಿನ ಮೇಲೆ ಜನರ ವಿಶ್ವಾಸವೂ ಹೆಚ್ಚಾಗಿದೆ.
ನೀರಿನ ಸಂರಕ್ಷಣೆ, ಜನರ ಸಹಭಾಗಿತ್ವ
15 ಲಕ್ಷ ಏರಿಯೇಟರ್​ ವಿತರಣೆ, ಗ್ರೀನ್​ ಸ್ಟಾರ್​ ಚಾಲೆಂಜ್​ ಮೂಲಕ ನೀರು ಉಳಿಸುವ ಅಭ್ಯಾಸ ಹಾಗೂ 3 ಸಾವಿರ ಮಳೆನೀರು ರೀಚಾರ್ಜ್​ ಗುಂಡಿಗಳ ನಿಮಾರ್ಣ ಇತ್ಯಾದಿ ಕ್ರಮಗಳು ಕೇವಲ ಯೋಜನೆಗಳಲ್ಲ, ಫಲಿತಾಂಶ ನೀಡುತ್ತಿರುವ ಉಪಕ್ರಮಗಳಾಗಿವೆ. ಇದರ ಜತೆಗೆ, ಲಕ್ಷಾಂತರ ನಾಗರಿಕರನ್ನು ಒಳಗೊಂಡ ಜಲ ಸಂರಕ್ಷಣಾ ಅಭಿಯಾನಗಳು ಜನರಲ್ಲಿ ಜವಾಬ್ದಾರಿಯ ಭಾವ ಬೆಳೆಸುತ್ತಿದೆ.

ರೋಬಾಟಿಕ್​ ಪೈಪ್​ಲೈನ್​ ಪರಿಶೀಲನಾ ವ್ಯವಸ್ಥೆಗಳ ಬಳಕೆಯಿಂದ ಒಳಚರಂಡಿ ಮಾರ್ಗಗಳಲ್ಲಿ ಉಂಟಾಗಿರುವ ತಾಂತ್ರಿಕ ದೋಷಗಳನ್ನು ನಿಖರವಾಗಿ ಪತ್ತೆಹಚ್ಚಲು ಸಾಧ್ಯವಾಗಿದೆ. ಇದರಿಂದ ನಗರದ 38 ಸ್ಥಳಗಳಲ್ಲಿ ಅಗೆತ ಕಾರ್ಯಗಳ ಅವಶ್ಯಕತೆಯನ್ನು ಕಡಿಮೆ ಮಾಡಲಾಗಿದೆ. ಅಕ್ರಮ ಸಂಪರ್ಕ, ಮೀಟರ್​ ತೊಂದರೆ, ನೀರಿನ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಲು ಬ್ಲೂ ಫೋರ್ಸ್​ ತಂಡಗಳನ್ನು ಸಜ್ಜುಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net