ಬೆಂಗಳೂರು: ನಗರದಲ್ಲಿ ಹಲವು ದಿನಗಳ ಬಳಿಕ ಮಂಗಳವಾರ ಸಣ್ಣ ಪ್ರಮಾಣದ ಮಳೆಯಾಗಿದ್ದು, ಸಂಜೆ ಬಳಿಕ ತಂಪನೆಯ ವಾತಾವರಣ ಕಂಡಿತು. ಬೆಳಗ್ಗೆಯಿಂದಲೂ ಮೋಡ ಮುಸುಕಿದ ವಾತಾವರಣ ಇದ್ದರೂ, ವರ್ಷಧಾರೆ ಆಗಲಿಲ್ಲ. ಸಂಜೆ ಕೆಲ ನಿಮಿಷಗಳಷ್ಟೇ ಮಳೆ ಸುರಿಯಿತು.
ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದರೂ, ರಾಜಧಾನಿಯಲ್ಲಿ ವರುಣನ ದರ್ಶನವೇ ಇಲ್ಲದಂತಾಗಿದೆ. ಕಳೆದೊಂದು ವಾರದಿಂದ ವರ್ಷಧಾರೆ ಕಣ್ಣಾಮುಚ್ಚಾಲೆ ಆಡುತ್ತಿದ್ದರೂ, ಇಳೆಯತ್ತ ಮಳೆ ಮುನಿಸುಕೊಂಡಂತಿದೆ.
ಕಳೆದೆರಡು ದಿನಗಳಿಂದ ಮೋಡ ಮುಸುಕಿದ್ದು, ಮಳೆ ಸುರಿಯಲಿದೆ ಎಂದೇ ಮುನ್ಸೂಚನೆ ನೀಡಲಾಗಿತ್ತು. ಆದರೆ, ಸರಾಸರಿ 4ರಿಂದ 5 ಮಿ.ಮೀ. ಮಾತ್ರ ಹಗುರ ಮಳೆಯಷ್ಟೇ ಆಗಿದ್ದು, ರಾಜಧಾನಿ ಮಳೆ ಕೊರತೆ ಎದುರಿಸುವಂತಾಗಿದೆ. ಇದರ ಹೊರತಾಗಿಯೂ ಕೋಣನಕುಂಟೆಯಲ್ಲಿ 19.5 ಮಿ.ಮೀ., ಚುಂಚನಕುಪ್ಪೆ-18.5, ಕೊಡಿಗೇಹಳ್ಳಿ (ಯಲಹಂಕ)-15, ಆರ್.ಆರ್.ನಗರ-14, ನಾಯಂಡಹಳ್ಳಿ-10 ಮಿ.ಮೀ. ಪ್ರಮಾಣದ ವರ್ಷಧಾರೆ ಆಗಿದೆ.
ಎಚ್.ಗೊಲ್ಲಹಳ್ಳಿಯಲ್ಲಿ ಹೆಚ್ಚು ವರ್ಷಧಾರೆ:
ಹೊರವಲಯದ ಎಚ್.ಗೊಲ್ಲಹಳ್ಳಿಯಲ್ಲಿ ಅತಿ ಹೆಚ್ಚು 41 ಮಿ.ಮೀ. ಪ್ರಮಾಣದ ಮಳೆ ದಾಖಲಾಗಿದೆ. ರಾಮೋಹಳ್ಳಿ-23, ದೊಡ್ಡ ತೋಗೋರು-13, ಬೆಟ್ಟಹಲಸೂರು-15, ಸೊಂಡೇಕೊಪ್ಪದಲ್ಲಿ 13.5 ಮಿ.ಮೀ. ಮಳೆಯಾಗಿದೆ.
ಆನೇಕಲ್ ವಿವಿಧೆಡೆ ಮಳೆ:
ಕಳೆದೊಂದು ತಿಂಗಳಿನಿಂದ ಇಡೀ ರಾಜ್ಯದಲ್ಲೇ ಮಳೆಯನ್ನೇ ಕಾಣದಿದ್ದ ಆನೇಕಲ್ ತಾಲೂಕಿನ ವಿವಿಧೆಡೆ ಮಂಗಳವಾರ ಸಾಧಾರಣ ಪ್ರಮಾಣದ ವರ್ಷಧಾರೆಯಾಗಿದೆ. ಮಂಟಪ-29 ಮಿ.ಮೀ., ಕಲ್ಲುಬಾಳು-21.5, ಹೆನ್ನಾಗರ-15.5 ಹಾಗೂ ಬನ್ನೇರುಘಟ್ಟದಲ್ಲಿ 11 ಮಿ.ಮೀ. ಪ್ರಮಾಣದಷ್ಟು ವರ್ಷಧಾರೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಡಿಎಂಸಿ) ಮಾಹಿತಿ ನೀಡಿದೆ.
2 ದಿನ ಮೋಡದ ವಾತಾವರಣ:
ಬೆಂಗಳೂರು ಮಹಾನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬುಧವಾರ ಹಾಗೂ ಗುರುವಾರ ಮೋಡ ಮುಸುಕಿದ ವಾತಾವರಣ ಇರಲಿದೆ. ಕೆಲ ಪ್ರದೇಶಗಳಲ್ಲಿ ಮಾತ್ರ ಹಗುರ ಅಥವಾ ತುಂತುರು ಮಳೆ ಆಗಬಹುದು ಎಂದು ಮುನ್ಸೂಚನೆ ನೀಡಲಾಗಿದೆ.