ಪ್ರಮುಖ ವಾಣಿಜ್ಯ ಪ್ರದೇಶ ಹಾಗೂ ಹೆಚ್ಚು ಜನಸಂದಣಿ ಇರುವ ಸ್ಥಳಗಳಲ್ಲಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗುವುದು. ನಮ್ಮ ಮೆಟ್ರೋ ಜತೆ ಒಡಂಬಡಿಕೆ ಮಾಡಿಕೊಂಡು ಈ ಸೌಲಭ್ಯ ಜಾರಿಗೆ ನಿರ್ಧರಿಸಲಾಗಿದೆ. ಜಯನಗರ ಕಾಂಪ್ಲೆಕ್ಸ್‌ನಲ್ಲಿ ವಾಹನ ನಿಲುಗಡೆಗೆ ಶೀಘ್ರ ಅವಕಾಶ ನೀಡಲಾಗುವುದು. ಜಯನಗರ ಮತಕ್ಷೇತ್ರದಲ್ಲಿ 42 ಪ್ರಮುಖ ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಶೀಘ್ರ ಜಾರಿಗೆ ಬರಲಿದ್ದು, 930 ಕಾರುಗಳು ಹಾಗೂ 3,000 ದ್ವಿಚಕ್ರ ವಾಹನಗಳ ನಿಲುಗಡೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಪದ್ಮನಾಭನಗರ, ಬಿಟಿಎಂ ಬಡಾವಣೆ, ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್, ಬೆಂಗಳೂರು ದಕ್ಷಿಣ ವಿಭಾಗದಲ್ಲೂ ಪಾರ್ಕಿಂಗ್ ವ್ಯವಸ್ಥೆ ಅನುಷ್ಠಾನಕ್ಕೆ ಬರಲಿದೆ. ಈ ಸುಧಾರಣೆಯಿಂದಾಗಿ ವಾರ್ಷಿಕ 30 ಕೋಟಿ ರೂ. ಆದಾಯ ಬರುವ ನಿರೀಕ್ಷೆ ಇದೆ.