ವೈದ್ಯರು, ಸಿಬ್ಬಂದಿ ಹಾಜರಾತಿಗೆ ‘ಕರ್ತವ್ಯ ಆ್ಯಪ್’

* ತಾಲೂಕು ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅನ್ವಯ
ವೈದ್ಯರು, ಸಿಬ್ಬಂದಿ ಹಾಜರಾತಿಗೆ ‘ಕರ್ತವ್ಯ ಆ್ಯಪ್’
Published on: 

ಬೆಂಗಳೂರು: ತಾಲೂಕು ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ಹಾಗೂ ಇತರ ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿಯೇ ಇರುವುದನ್ನು ಖಾತ್ರಿಪಡಿಸಲು ‘ಕರ್ತವ್ಯ ಆ್ಯಪ್’ ಮೂಲಕ ರಾತ್ರಿ ವೇಳೆಯ ಹಾಜರಾತಿಯನ್ನು ಕಟ್ಟುನಿಟ್ಟಾಗಿ ದಾಖಲಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ. ಈ ಕುರಿತು ಇಲಾಖೆ ಸುತ್ತೋಲೆ ಹೊರಡಿಸಿದ್ದು, ವೈದ್ಯರು ಪ್ರತಿದಿನ ರಾತ್ರಿ 9 ಗಂಟೆ ಬಳಿಕ ತಮ್ಮ ಕೇಂದ್ರ ಸ್ಥಾನವಿರುವ ನಗರ, ಪಟ್ಟಣ ಅಥವಾ ಗ್ರಾಮದ ಭೌಗೋಳಿಕ ಮಿತಿಯೊಳಗೆ ಕರ್ತವ್ಯ ಆ್ಯಪ್ ಮೂಲಕ ರಾತ್ರಿ ಹಾಜರಾತಿ ದಾಖಲಿಸಬೇಕು. ರಜೆ ಮಂಜೂರಾಗಿದ್ದಾಗ, ಸೂಕ್ತ ಅನುಮತಿಯೊಂದಿಗೆ ಕೇಂದ್ರ ಸ್ಥಾನದ ಹೊರಗೆ ಕರ್ತವ್ಯದಲ್ಲಿದ್ದಾಗ ಅಥವಾ ಕೇಂದ್ರ ಸ್ಥಾನ ಬಿಡಲು ಅನುಮತಿ ಪಡೆದಿದ್ದಾಗ ಹಾಜರಾತಿಯಿಂದ ವಿನಾಯಿತಿ ಇರುತ್ತದೆ ಎಂದು ತಿಳಿಸಲಾಗಿದೆ. ಶುಶ್ರೂಷಾಧಿಕಾರಿಗಳು, ಫಾರ್ಮಸಿ ಅಧಿಕಾರಿಗಳು, ಪ್ರಯೋಗಶಾಲಾ ತಂತ್ರಜ್ಞರು ಹಾಗೂ ಇತರ ಸಿಬ್ಬಂದಿಯೂ ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿಯೇ ವಾಸವಿದ್ದು, 9 ಗಂ ನಂತರ ಕರ್ತವ್ಯ ಆ್ಯಪ್ ಮೂಲಕ ಹಾಜರಾತಿ ಹಾಕಬೇಕು. ಬಟವಾಡೆ ಮತ್ತು ವಿತರಣಾ ಅಧಿಕಾರಿಗಳು (ಡಿಡಿಒ), ತಾಲೂಕು ಆರೋಗ್ಯಾಧಿಕಾರಿಗಳು ಈ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.