ಕರ್ನಾಟಕ-ಗೋವಾ ಎನ್‌ಸಿಸಿ ನಿರ್ದೇಶನಾಲಯಕ್ಕೆ ಆರ್‌ಡಿಸಿ ಟ್ರೋಫಿ

rdctrophy
rdctrophy
Published on

ಪ್ರಮುಖ ಮುಖ್ಯಾಂಶಗಳು

  • ಸತತ 2ನೇ ವರ್ಷವೂ ಪ್ರಧಾನಮಂತ್ರಿಗಳ ಪ್ರಶಸ್ತಿಯ ಗರಿ
ಬೆಂಗಳೂರು: ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಗಣರಾಜ್ಯೋತ್ಸವ ಶಿಬಿರದಲ್ಲಿ (ಆರ್‌ಡಿಸಿ) ಕರ್ನಾಟಕ ಹಾಗೂ ಗೋವಾ ವಿಭಾಗದ ಎನ್‌ಸಿಸಿ ನಿರ್ದೇಶನಾಲಯ ಸತತ 2ನೇ ಬಾರಿಗೆ ಪ್ರತಿಷ್ಠಿತ ಪ್ರಧಾನಮಂತ್ರಿಗಳ ಬ್ಯಾನರ್ ಮತ್ತು ಟ್ರೋಫಿಯನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ.
ದೇಶಾದ್ಯಂತ 17 ನಿರ್ದೇಶನಾಲಯಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಒಟ್ಟಾರೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕರ್ನಾಟಕ ಮತ್ತು ಗೋವಾದ ಕೆಡೆಟ್‌ಗಳು ಅತ್ಯುತ್ತಮ ಪಥಸಂಚಲನ, ಫೈರಿಂಗ್ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಅಸಾಧಾರಣ ಪ್ರದರ್ಶನ ನೀಡಿದ್ದಾರೆ. ಈ ಸಾಧನೆಯು ನಿರ್ದೇಶನಾಲಯದ ಸ್ಥಿರ ಶ್ರೇಷ್ಠತೆ, ಶಿಸ್ತು ಹಾಗೂ ಉನ್ನತ ತರಬೇತಿ ಮಾನದಂಡಗಳ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ನವದೆಹಲಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪರೇಡ್ ಮೈದಾನದಲ್ಲಿ ಬುಧವಾರ (ಜ.28) ನಡೆದ ಆರ್‌ಡಿಸಿ -2026 ಸಮಾರೋಪದಲ್ಲಿ ಪ್ರಧಾನಮಂತ್ರಿಗಳ ಎನ್‌ಸಿಸಿ ಸಮಾರಂಭದಲ್ಲಿ ಕರ್ನಾಟಕ ಮತ್ತು ಗೋವಾ ಎನ್‌ಸಿಸಿ ನಿರ್ದೇಶನಾಲಯದ ಉಪ ಮಹಾನಿರ್ದೇಶಕ ಏರ್ ಕಮಾಂಡರ್ ಎಸ್.ಬಿ. ಅರುಣ್‌ಕುಮಾರ್ ಟ್ರೋಫಿ ಸ್ವೀಕರಿಸಿದರು.

ಸ್ಥಿರ ಕಾರ್ಯಕ್ಷಮತೆಯೇ ಮಾನದಂಡ:

ರಕ್ಷಣಾ ಸಚಿವಾಲಯದ ಪ್ರಕಾರ, ವರ್ಷವಿಡೀ ವ್ಯಾಪಕ ಶ್ರೇಣಿಯ ಎನ್‌ಸಿಸಿ ಚಟುವಟಿಕೆಗಳಲ್ಲಿ ಸ್ಥಿರವಾದ ಕಾರ್ಯಕ್ಷಮತೆಯನ್ನು ಪ್ರದರ್ಶಿಸುವ ನಿರ್ದೇಶನಾಲಯಕ್ಕೆ ಪ್ರಧಾನಮಂತ್ರಿಗಳ ಬ್ಯಾನರ್ ಮತ್ತು ಟ್ರೋಫಿಯನ್ನು ನೀಡಲಾಗುತ್ತದೆ. ಮೌಲ್ಯಮಾಪನ ಮಾನದಂಡಗಳಲ್ಲಿ ಪ್ರಮುಖವಾಗಿ ಸಂಘಟಿತ ಶಿಬಿರಗಳು ಮತ್ತು ಸ್ಪರ್ಧೆಗಳಲ್ಲಿನ ಕಾರ್ಯಕ್ಷಮತೆ, ಎನ್‌ಸಿಸಿ ಪ್ರಮಾಣಪತ್ರ ಪರೀಕ್ಷೆಗಳಲ್ಲಿನ ಫಲಿತಾಂಶ ಮತ್ತು ಸಶಸ್ತ್ರ ಪಡೆಗಳಿಗೆ ಸೇರ್ಪಡೆಗಾಗಿ ಆಯ್ಕೆಯಾದ ಕೆಡೆಟ್‌ಗಳ ಸಂಖ್ಯೆ ಒಳಗೊಂಡಿರುತ್ತದೆ.
"

ಸತತ 2ನೇ ವರ್ಷ ಚಾಂಪಿಯನ್​​ಶಿಫ್​ ನಿರ್ದೇಶನಾಲಯದ ಕಿರೀಟವನ್ನು ಪಡೆದಿರುವುದು ಕೆಡೆಟ್‌ಗಳ ಹಾಗೂ ಸಿಬ್ಬಂದಿಯವರ ವೃತ್ತಿಪರತೆ, ಸ್ಥಿತಿಸ್ಥಾಪಕತ್ವ ಮತ್ತು ಎಲ್ಲದಕ್ಕೂ ಸಿದ್ಧವಾಗಿರುವ ಮನೋಭಾವಕ್ಕೆ ಸಾಕ್ಷಿಯಾಗಿದೆ. ಈ ಯಶಸ್ಸು ಸಾಮೂಹಿಕ ಕಠಿಣ ಪರಿಶ್ರಮ ನಿಖರ ತರಬೇತಿ ಮತ್ತು ಅಚಲ ಬದ್ಧತೆಯ ಫಲಿತಾಂಶವಾಗಿದೆ.

- ಏರ್ ಕಮಾಂಡರ್ ಎಸ್.ಬಿ. ಅರುಣ್‌ಕುಮಾರ್, ಕರ್ನಾಟಕ-ಗೋವಾ ಎನ್‌ಸಿಸಿ ನಿರ್ದೇಶನಾಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net