ಕಮಲೇಶ್ ಬಿಂಡ್ ಎನ್‌ಕೌಂಟರ್: ಯೋಗಿ ಸರ್ಕಾರದ ವಿರುದ್ಧ ವಿಕಾಸ್‌ಶೀಲ್ ಇನ್ಸಾನ್ ಪಾರ್ಟಿ ಕಿಡಿ-Kamlesh Bind encounter

ವಿಐಪಿ ರಾಜ್ಯಾಧ್ಯಕ್ಷ ಬಿ.ಕೆ.ಮೋಹನ್ ಕುಮಾರ್
ವಿಐಪಿ ರಾಜ್ಯಾಧ್ಯಕ್ಷ ಬಿ.ಕೆ.ಮೋಹನ್ ಕುಮಾರ್
Published on
ಬೆಂಗಳೂರು: ವಿಕಾಸ್‌ಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ರಾಷ್ಟ್ರೀಯ ಸಂಸ್ಥಾಪಕ ಹಾಗೂ ಬಿಹಾರದ ಮಾಜಿ ಸಚಿವ ಮುಕೇಶ್ ಸಾಹ್ನಿ ಬಂಧನ, ಉತ್ತರ ಪ್ರದೇಶದಲ್ಲಿ ಕಮಲೇಶ್ ಬಿಂಡ್ ಎನ್‌ಕೌಂಟರ್ ಖಂಡಿಸಿರುವ ವಿಐಪಿ ಕರ್ನಾಟಕ ಘಟಕ,ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಯುಪಿ ಬಿಜೆಪಿ ಸರ್ಕಾರದ ಗೂಂಡಾಗಿರಿ, ನ್ಯಾಯಾಂಗ ವ್ಯವಸ್ಥೆಯ ವೈಫಲ್ಯದ ವಿರುದ್ಧ ಸುದ್ದಿಗೋಷ್ಠಿಯಲ್ಲಿ ವಿಐಪಿ ರಾಜ್ಯಾಧ್ಯಕ್ಷ ಬಿ.ಕೆ.ಮೋಹನ್ ಕುಮಾರ್ ವಾಗ್ದಾಳಿ ನಡೆಸಿ, ಉತ್ತರ ಪ್ರದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ರಾಷ್ಟ್ರೀಯ ನಾಯಕರನ್ನು ನಡುರಸ್ತೆಯಲ್ಲಿಯೇ ಅಕ್ರಮವಾಗಿ ಬಂಧಿಸಲಾಗಿದೆ. ಕಮಲೇಶ್ ಬಿಂಡ್ ಅವರನ್ನು ಎನ್‌ಕೌಂಟರ್ ಮಾಡಿದ್ದಲ್ಲದೆ, ಅವರ ದೇಹ ನೋಡಲು ಕುಟುಂಬದವರಿಗೆ ಅವಕಾಶ ನೀಡಿಲ್ಲ. ಯಾರಾದರೂ ತಪ್ಪು ಮಾಡಿದ್ದರೆ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ಆದರೆ, ಅಲ್ಲಿ ಪೊಲೀಸರ ಮೂಲಕವೇ ಗುಂಡಿಕ್ಕಿ ಕೊಲ್ಲುವ ಸರ್ವಾಧಿಕಾರ ನಡೆಯುತ್ತಿದೆ. ಸಾಮಾನ್ಯ ನಾಗರಿಕರು ಬಿಜೆಪಿಯನ್ನು ಪ್ರಶ್ನಿಸಿದರೆ ಇಂತಹ ಬೆದರಿಕೆ ಒಡ್ಡಲಾಗುತ್ತಿದ್ದು, ಪ್ರಧಾನಿ ಮೋದಿ,ಸಿಎಂ ಯೋಗಿ ಆದಿತ್ಯನಾಥ್ ಇದಕ್ಕೆ ನೇರ ಹೊಣೆ ಎಂದು ಆರೋಪಿಸಿದರು.
ನಮ್ಮದೇ ಸಮಾಜದವರಾಗಿರುವ ಸಚಿವ ಸಂಜಯ್ ನಿಶಾದ್, ಅಧಿಕಾರದ ಆಸೆಗೆ ಬಿದ್ದು ಬಿಜೆಪಿ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಸಮಾಜದ ಮೇಲೆ ಇಷ್ಟೊಂದು ದೌರ್ಜನ್ಯ ನಡೆಯುತ್ತಿದ್ದರೂ ಮೌನವಾಗಿರುವ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರಬೇಕು. ನರೇಂದ್ರ ಮೋದಿಯವರು ಈ ಹಿಂದೆ ಕರ್ನಾಟಕಕ್ಕೆ ಬಂದಾಗ ಕೋಲಿ ಮತ್ತು ನಿಶಾಶ್ ಸಮುದಾಯಕ್ಕೆ ದೊಡ್ಡ ಭರವಸೆ ನೀಡಿದ್ದರು.ಇಂದಿಗೂ ಆ ಭರವಸೆಗಳು ಈಡೇರಿಲ್ಲ. ಬದಲಾಗಿ ನಮ್ಮವರನ್ನೇ ಗುರಿಯಾಗಿಸಿ ಹತ್ತಿಕ್ಕುವ ಯತ್ನ ನಡೆಯುತ್ತಿದೆ ಎಂದು ಅವರು ಕಿಡಿಕಾರಿದರು.
ದೇಶಾದ್ಯಂತ ನಿಶಾದ್, ಕೋಲಿ ಸೇರಿ 39 ಒಳಪಂಗಡಗಳಿಂದ ಅಂದಾಜು 23 ಕೋಟಿ ಮತದಾರರಿದ್ದಾರೆ. ನಮ್ಮ ಸಮಾಜವನ್ನು ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ವರ್ಗಗಳಿಗೆ ಸೇರಿಸಿ ವಿಭಜಿಸುವ ಕುತಂತ್ರ ನಡೆಯುತ್ತಿದೆ. ಒಗ್ಗಟ್ಟಾಗಿ ನಿಂತರೆ ನಮ್ಮನ್ನು ಬಂಧಿಸಲು ಯಾವುದೇ ಸರ್ಕಾರದಿಂದ ಸಾಧ್ಯವಿಲ್ಲ.ದೌರ್ಜನ್ಯಗಳನ್ನು ನಿಲ್ಲಿಸದಿದ್ದರೆ ಬರುವ ಚುನಾವಣೆಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಾಗುವುದು. ಸದ್ಯದಲ್ಲೇ ಬೃಹತ್ ಹೋರಾಟ ಹಮ್ಮಿಕೊಳ್ಳುವುದಾಗಿ ಪ್ರಧಾನ ಕಾರ್ಯದರ್ಶಿ ಎ.ಎಚ್. ಪ್ರಶಾಂತ್ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net