ಪಾಲಿಕೆಗೆ ಚುನಾವಣೆ ಇಲ್ಲದೆ ಇಂದಿಗೆ 6 ವರ್ಷ ಪೂರ್ಣ

municipal-corporation-election
municipal-corporation-election
Published on

ಪ್ರಮುಖ ಮುಖ್ಯಾಂಶಗಳು

  • ನಾಗರಿಕರಿಗೆ ಕಾರ್ಪೋರೇಷನ್‌ನಿಂದ ಸೌಲಭ್ಯ ಸಿಗದೆ ಸಮಸ್ಯೆ
  • ಈ ವರ್ಷಾಂತ್ಯದ ವೇಳೆಗೆ ಎಲೆಕ್ಷನ್ ನಡೆಯುವುದು ಅನುಮಾನ
  • ಅನುದಾನ ಕೊರತೆಯಿಂದ ಕಾಮಗಾರಿಗಳ ಪೂರ್ಣಕ್ಕೆ ವಿಳಂಬ
ಬೆಂಗಳೂರು: ದೇಶದಲ್ಲೇ ಕ್ಷಿಪ್ರ ಪ್ರಗತಿಯನ್ನು ಹೊಂದಿ ವಿಶ್ವದ ಗಮನ ಸೆಳೆದಿರುವ ಬೆಂಗಳೂರು ಮಹಾನಗರದಲ್ಲಿ ಸ್ಥಳಿಯ ಆಡಳಿತ ವ್ಯವಸ್ಥೆ ಇಲ್ಲದೆ ಬರೋಬರಿ ಆರು ವರ್ಷವನ್ನು ಪೂರೈಸಿದೆ. ಐಟಿ-ಬಿಟಿ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಉದ್ಯಾನ ನಗರವು ಚುನಾಯಿತ ಜನಪ್ರತಿನಿಧಿಗಳಿಲ್ಲದೆ ಸೊರಗುತ್ತಿದ್ದರೂ, ಚುನಾವಣೆಯನ್ನು ನಡೆಸಲು ಸಂಬಂಧಪಟ್ಟ ಪ್ರಾಧಿಕಾರ ಸಬೂಬು ಹೇಳಿಕೊಂಡೇ ದಿನದೂಡುತ್ತಿರುವುದಕ್ಕೆ ಸಾರ್ವಜನಿಕರಲ್ಲಿ ಸಿಟ್ಟು ಹೆಚ್ಚಿದೆ.
ನಿಕಟಪೂರ್ವ ಬಿಬಿಎಂಪಿಯ ಆಡಳಿತ 2020ರ ಸೆ.10ಕ್ಕೆ ಕೊನೆಗೊಂಡಿದೆ. ಅವಧಿ ಪೂರ್ಣಗೊಂಡ ಬಳಿಕ ಕಾಲಮಿತಿಯಲ್ಲಿ ಎಲೆಕ್ಷನ್ ನಡೆಸಲು ರಾಜ್ಯ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸದ ಕಾರಣ 6 ವರ್ಷವಾದರೂ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ. ಬಾಯಿಮಾತಿನಲ್ಲಿ ಎಲೆಕ್ಷನ್‌ಗೆ ಸಿದ್ಧ ಎಂದು ಹೇಳಿ ಅದನ್ನು ಕೃತಿರೂಪಕ್ಕೆ ಇಳಿಸುವಲ್ಲಿ ವಿಫಲವಾಗಿದೆ. ಇದರ ಪರಿಣಾಮ ಆಡಳಿತ, ಮೂಲಸೌಕರ್ಯ, ಜನಪರ ಯೋಜನೆಗಳ ಜಾರಿಗೆ ಮುತುವರ್ಜಿ ಸಹಿತ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ದಾಖಲಿಸಬೇಕಿದ್ದ ಬೆಂಗಳೂರು ಕಾರ್ಪೋರೇಷನ್ ಈಗ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ.
ಬಿಬಿಎಂಪಿ ಅಸ್ತಿತ್ವದಲ್ಲಿದ್ದಾಗ ಕಾರ್ಪೋರೇಟರ್‌ಗಳು ಜನರ ಕಷ್ಟ-ಸುಖಕ್ಕೆ ಸ್ಪಂದಿಸುತ್ತಿದ್ದರು. ಕೆಲವೆಡೆ ಕೆಲಸ ಆಗದಿದ್ದರೂ, ಜನರಿಗೆ ಭರವಸೆ ನೀಡಿ ತಡವಾಗಿಯಾದರೂ ಸೌಲಭ್ಯ ಒದಗಿಸುತ್ತಿದ್ದರು. ಆದರೆ, ಆಡಳಿತಾಧಿಕಾರಿಗಳ ಅವಧಿಯಲ್ಲಿ ಜನರ ಆಶಯದಂತೆ ಸೌಲಭ್ಯವನ್ನು ತಲುಪಿಸದ ಕಾರಣ ಸ್ಥಳೀಯ ಆಡಳಿತ ವ್ಯವಸ್ಥೆ ಶಿಥಿಲಗೊಂಡಿದೆ. ಇದನ್ನು ಸುಧಾರಿಸುವ ನೆಪದಲ್ಲಿ ಅಸ್ತಿತ್ವಕ್ಕೆ ತರಲಾದ ಪಂಚ ಪಾಲಿಕೆಗಳ ಆಡಳಿತ ಒಂದಿಷ್ಟು ಬದಲಾವಣೆಯ ಸಂಕೇತ ನೀಡಿತ್ತಾದರೂ, ವರ್ಷ ಕಳೆಯುವುದರೊಳಗೆ ಜನರಿಗೆ ನಿರಾಶೆ ಮೂಡಿಸಿದೆ.

ಚುನಾವಣೆ ನಡೆಸಲು ವಿಘ್ನಗಳ ಸರಮಾಲೆ:

ಬಿಬಿಎಂಪಿಯ ಅವಧಿ ಪೂರ್ಣಗೊಂಡ ಬಳಿಕ ಚುನಾವಣೆ ನಡೆಸುವ ಬದಲು ಹೊಸ ವ್ಯವಸ್ಥೆ ತಂದು ಆಡಳಿತವನ್ನು ಗಟ್ಟಿ ಮಾಡುವುದಾಗಿ ಆಗಿನ ಸರ್ಕಾರ ಹೇಳಿತ್ತು. ಇದಕ್ಕಾಗಿ 198 ವಾರ್ಡ್‌ಗಳನ್ನು 227ಕ್ಕೆ ಹೆಚ್ಚಿಸಿ ಎಲೆಕ್ಷನ್‌ಗೆ ವೇದಿಕೆಯನ್ನು ಅಣಿಗೊಳಿಸಿತ್ತಾದರೂ, ಅಷ್ಟರಲ್ಲೇ 2 ವರ್ಷ ಸಮಯ ವ್ಯರ್ಥವಾಯಿತು. ಹಾಲಿ ಸರ್ಕಾರ ಮೂರು ವರ್ಷದ ಹಿಂದೆ ಅಧಿಕಾರಕ್ಕೆ ಏರಿದ ಬೆನ್ನಲ್ಲೇ ಎಲೆಕ್ಷನ್‌ಗೆ ಸಿದ್ಧ ಎಂದು ಹೇಳಿ ಬಿಬಿಎಂಪಿ ವಿಭಜನೆಗೆ ನಾಂದಿ ಹಾಡಿತು. ಇದಕ್ಕಾಗಿ ರಚಿಸಲಾದ ಸಮಿತಿ ತನ್ನ ವರದಿ ಸಲ್ಲಿಸಲು ವಿಳಂಬ ಮಾಡಿತು. ಹೊಸ ವ್ಯವಸ್ಥೆ ಹೆಸರಿನಲ್ಲಿ ಪಂಚ ಪಾಲಿಕೆಗಳನ್ನಾಗಿ ರಚಿಸಿ ಅಧಿಸೂಚನೆ ಹೊರಡಿಸಿತು. ಹೊಸ ಪಾಲಿಕೆಗಳ ವಿಸ್ತೀರ್ಣ, ಜನಸಂಖ್ಯೆ, ವಾರ್ಡ್, ಮೀಸಲು ನಿಗದಿಗೆ ಮತ್ತೊಂದು ವರ್ಷ ಕಳೆದುಹೋಯಿತು.
ಈ ಮಧ್ಯೆ ಹಾಲಿ ಅಥವಾ ಹೊಸ ವ್ಯವಸ್ಥೆಗೆ ತಕ್ಷಣವೇ ಚುನಾವಣೆ ನಡೆಸುವಂತೆ ನ್ಯಾಯಾಲಯದ ಮೊರೆ ಹೋಗಲಾಯಿತು. ಎಲೆಕ್ಷನ್ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದರೂ, ಸರ್ಕಾರ ನಾಲ್ಕಾರು ಬಾರಿ ಗಡುವು ವಿಸ್ತರಣೆ ಪಡೆದು ಕದತದಲ್ಲಷ್ಟೇ ಎಲೆಕ್ಷನ್ ಸಿದ್ಧತೆಗೆ ಸೀಮಿತವಾಯಿತು. ಚುನಾವಣಾ ಆಯೋಗ ಕೂಡ ಪ್ರಾಮಾಣಿಕವಾಗಿ ಪ್ರಯತ್ನ ಹಾಕದೆ ಜನಗಣತಿಯ ಮನೆ ಮನೆ ಸಮೀಕ್ಷೆ, ಎಸ್‌ಐಆರ್ ನೆಪ ಮಾಡಿ ಎಲೆಕ್ಷನ್ ಮುಂದೂಡಲು ನ್ಯಾಯಾಲಯಕ್ಕೆ ಪ್ರಮಾಣಪತ್ರವನ್ನು ಹಾಕುವ ಮೂಲಕ ಜನರ ವಿಶ್ವಾಸಕ್ಕೆ ಧಕ್ಕೆ ತಂದೊಡ್ಡುವ ಕೆಲಸ ಮಾಡಿದೆ ಎಂಬ ಆಕ್ಷೇಪ ಕೇಳಿಬಂದಿದೆ.

ರಾಜಧಾನಿ ಅಭಿವೃದ್ಧಿಗೆ ಹೊಸ ಘೋಷಣೆ?

ಬೆಂಗಳೂರು ಮಹಾನಗರದಲ್ಲಿ ಚುನಾಯಿತ ಸರ್ಕಾರ ಇಲ್ಲದ ಕಾರಣ ಅಭಿವೃದ್ಧಿಗೆ ಒಂದಿಷ್ಟು ಹಿನ್ನಡೆಯಾಗಿದೆ. ಇದನ್ನು ಎಲ್ಲ ರಾಜಕೀಯ ಪಕ್ಷಗಳು ಒಪ್ಪಿಕೊಂಡಿದೆ. ಆದರೆ, ಸರ್ಕಾರ ಸಮರ್ಥಿಸಿಕೊಳ್ಳಲು ಮೀನಮೇಷ ಎಣಿಸುತ್ತಿದೆ. ಪ್ರಸ್ತುತ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಗುರುವಾರ (ಸೆ.10) 100 ದಿನಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿ ಅಭಿವೃದ್ಧಿಗೆ ಒಂದಿಷ್ಟು ಹೊಸ ಯೋಜನೆಗಳನ್ನು ಘೋಷಿಸಿ ಅನುಷ್ಠಾನಕ್ಕೆ ತರಲು ಅವಕಾಶ ಇದೆ. ಡಿಸಿಎಂ ಆಗಿದ್ದ ವೇಳೆ ಬೆಂಗಳೂರಿಗೆ ಹೊಸ ಚಹರೆ ನೀಡಲಾಗುವುದು ಎಂದು ಪ್ರತಿಪಾದಿಸುತ್ತಿದ್ದ ಡಿ.ಕೆ. ಶಿವಕುಮಾರ್ ಅವರು ಈಗಲಾದರೂ ತಮ್ಮ ಬೆಂಗಳೂರು ಮೇಲಿನ ಮಮತೆಯನ್ನು ವ್ಯಕ್ತಪಡಿಸಬಹುದು ಎಂಬ ಆಶಯವನ್ನು ನಾಗರಿಕರು ವ್ಯಕ್ತಪಡಿಸಿದ್ದಾರೆ.

ಮತ್ತೆ ‘ತ್ರಿ’ವಿಭಜನೆಗೆ ಚಿಂತನೆ:

ಬಿಬಿಎಂಪಿಯನ್ನು ವಿಂಗಡಿಸಿ ಐದು ನಗರ ಪಾಲಿಕೆಗಳನ್ನಾಗಿ ವಿಂಗಡಿಸಿದ ಬಳಿಕ ಒಂದಿಷ್ಟು ಒಳ್ಳೆಯ ಕೆಲಸಗಳಾಗಿವೆ. ಅಷ್ಟೇ ಪ್ರಮಾಣದಲ್ಲಿ ಕೆಲ ಸಮಸ್ಯೆಗಳು ಉದ್ಭವಿಸಿವೆ. ಮುಖ್ಯವಾಗಿ ಹಾಲಿ ನಡೆದಿರುವ ಎಸ್‌ಐಆರ್‌ನಿಂದಾಗಿ ಮಹಾನಗರದ ಮತದಾರರ ಸಂಖ್ಯೆ ಇಳಿಕೆಯಾಗಲಿದೆ. ಇದರಿಂದ ಹೊಸ ವಾರ್ಡ್‌ಗಳಲ್ಲಿ ನಿಗದಿಗಿಂತ ಕಡಿಮೆ ವೋಟರ್ಸ್‌ ಇದ್ದಲ್ಲಿ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಇದನ್ನಾಧರಿಸಿ ಐದು ಪಾಲಿಕೆ ಬದಲು ಮೂರು ಕಾರ್ಪೋರೇಷನ್ ಸಾಕಾಗುತ್ತದೆ ಎಂಬ ಮಾತು ಕೇಳಿಬಂದಿದೆ. ಪಾಲಿಕೆಗಳ ವಿಂಗಡಣಾ ಸಮಿತಿಯು ಈ ಹಿಂದೆಯೇ 3 ಅಥವಾ 5 ಪಾಲಿಕೆಗೆ ಶಿಫಾರಸು ಮಾಡಿತ್ತಾದರೂ, ಸರ್ಕಾರ ಪಂಚ ಪಾಲಿಕೆಗಳಿಗೆ ಮಣೆ ಹಾಕಿತ್ತು. ಈಗ ಬದಲಾದ ಮತದಾರರ ಪಟ್ಟಿಯಿಂದ ಮತ್ತೆ ‘ತ್ರಿ’ವಿಭಜನೆ ಆಗಬಹುದೆ ಎಂಬ ಚಿಂತನೆ ಹೊಸದಾಗಿ ಚಿಗುರೊಡೆದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net