ನಾಯಂಡಹಳ್ಳಿ ಜಂಕ್ಷನ್ ಸಮಗ್ರ ಅಭಿವೃದಿಗೆ ಸೂಚನೆ

westcommissionervisit
westcommissionervisit
Published on

ಪ್ರಮುಖ ಮುಖ್ಯಾಂಶಗಳು

  • ಮಾಲಗಾಳದ ಬಳಿ ಸಿಆರ್‌ಸಿಪಿ ಜಾಗ ತಪಾಸಣೆ
  • ಡಾ. ಕೆ.ವಿ. ರಾಜೇಂದ್ರ ಅವರಿಂದ ಸ್ಥಳಪರಿಶೀಲನೆ
ಬೆಂಗಳೂರು: ಮೈಸೂರು ರಸ್ತೆಯ ಪ್ರಮುಖ ಸಂಚಾರ ಸ್ಥಳವಾದ ನಾಯಂಡಹಳ್ಳಿ ಜಂಕ್ಷನ್ ಸಮಗ್ರ ಅಭಿವೃದ್ಧಿ ಕಾರ್ಯವನ್ನು ಚುರುಕುಗೊಳಿಸುವಂತೆ ಪಶ್ಚಿಮ ಪಾಲಿಕೆಯ ಆಯುಕ್ತ ಡಾ. ಕೆ.ವಿ. ರಾಜೇಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯಲ್ಲಿ ಬುಧವಾರ ಅಭಿವೃದ್ಧಿ ಕಾಮಗಾರಿಗಳ ಸ್ಥಳಪರಿಶೀಲನೆ ವೇಳೆ ಮಾತನಾಡಿದ ಅವರು, ಸುರಕ್ಷಾ 75 ಯೋಜನೆಯಡಿ ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಇಲ್ಲಿನ ಸಂಚಾರ ಸಿಕ್ಕು ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಹಾಲಿ ಕಾಮಗಾರಿಗೆ ವೇಗ ನೀಡಿ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಿದರು.

ಹೊಸಕೆರೆಹಳ್ಳಿ ಸರ್ವಿಸ್ ರಸ್ಥೆ ಅಭಿವೃದ್ಧಿಪಡಿಸಿ:

ಹೊಸದಾಗಿ ನಿರ್ಮಾಣಗೊಂಡಿರುವ ಹೊಸಕೆರೆಹಳ್ಳಿ ಮೇಲ್ಸೇತುವೆ ಮತ್ತು ಅದಕ್ಕೆ ಹೊಂದಿಕೊಂಡಿರುವ ಸರ್ವಿಸ್ ರಸ್ತೆಗಳ ಪರಿಶೀಲನೆ ವೇಳೆ ಕೆಲವೊಂದು ಲೋಪಗಳು ಕಂಡುಬಂದವು. ಅವುಗಳಲ್ಲಿ ಸರ್ವಿಸ್ ರಸ್ತೆಯುದ್ದಕ್ಕೂ ಸಂಚಾರ ಸಿಕ್ಕಿನಿಂದ ಸವಾರರು ಬವಣೆಗೆ ಒಳಗಾಗುತ್ತಿದ್ದನ್ನು ಗಮನಿಸಿದರು. ಇದನ್ನಾಧರಿಸಿ ಅಲ್ಲಿನ ಕಾಮಗಾರಿಯನ್ನು ವೈಜ್ಞಾನಿಕವಾಗಿ ಪೂರ್ಣಗೊಳಿಸಿ ಬ್ಲ್ಯಾಕ್ ಸ್ಪಾಟ್‌ಗಳನ್ನು ತಕ್ಷಣವೇ ನಿವಾರಿಸಬೇಕು ಎಂದರು.

ಸಿಆರ್‌ಸಿಪಿ ಜಾಗ ಪರಿಶೀಲನೆ:

ಮಾಲಗಾಳದ ಪಾಲಿಕೆ ಭವನದ ಸಮೀಪದ ಸಿಆರ್‌ಸಿಪಿ ಜಾಗವನ್ನು ಪರಿಶೀಲಿಸಿ, ಭೂ ದಾಖಲೆಗಳನ್ನು ಪರಾಮರ್ಶೆ ನಡೆಸಿ ಅನುಷ್ಠಾನ ಸಾಧ್ಯತೆಯ ವಿವರಗಳನ್ನು ಸಲ್ಲಿಸಲು ಸೂಚಿಸಲಾಯಿತು. ಪರಿಶೀಲನೆ ನಡೆಸಿದ ಬಳಿಕ ಅಭಿವೃದ್ಧಿ ಕಾಮಗಾರಿಗಳ ಪರಿಣಾಮಕಾರಿ ಜಾರಿಗಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು. ಜತೆಗೆ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿಕೊಂಡು ಸಮರ್ಪಕವಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಆಯುಕ್ತರು ನಿದೇರ್ಶಿಸಿದರು.

ಟ್ರಾನ್ಸಫರ್ ಸ್ಟೇಷನ್‌ಗೆ ಜಾಗ ಪರಿಶೀಲನೆ:

ದೀಪಾಂಜಲಿನಗರದ ಇಂದಿರಾ ಕ್ಯಾಂಟೀನ್ ಬಳಿ ಖಾಲಿಯಿರುವ ಜಾಗದಲ್ಲಿ ಕಸ ಟ್ರಾನ್ಸಫರ್ ಸ್ಟೇಷನ್ ನಿರ್ಮಾಣ ಮಾಡಲು ಆ ಜಾಗವನ್ನು ಪರಿಶೀಲಿಸಲಾಯಿತು. ಈ ಸ್ಥಳವನ್ನು ಸದ್ಬಳಕೆ ಮಾಡಿಕೊಳ್ಳಲು ವಲಯ ಜಂಟಿ ಆಯುಕ್ತರು ಹಾಗೂ ಎಡಿಎಲ್‌ಆರ್ ಅಧಿಕಾರಿಗಳಿಗೆ ವಿವರವಾದ ಸಮೀಕ್ಷೆ ನಡೆಸಿ 2 ದಿನಗಳಲ್ಲಿ ವರದಿ ಸಲ್ಲಿಸಲು ಆಯುಕ್ತರು ಸೂಚಿಸಿದರು.
ಸ್ಥಳ ಪರಿಶೀಲನೆ ವೇಳೆ ಅಭಿವೃದ್ಧಿ ಅಪರ ಆಯುಕ್ತ ದಿಗ್ವಿಜಯ್ ಬೋಡ್ಕೆ, ಜಂಟಿ ಆಯುಕ್ತೆ ಆರತಿ ಆನಂದ್, ಮುಖ್ಯ ಅಭಿಯಂತರರಾದ ಸ್ವಯಂಪ್ರಭ, ವಿಶ್ವನಾಥ್ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net