ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತ, ಹಿಂದೂ ಧರ್ಮ: ನಿವೃತ್ತ ಜಡ್ಜ್​​​​ ಕೃಷ್ಣ ದೀಕ್ಷಿತ್ ಹೇಳಿದ್ದೇಕೆ?

india-and-hinduism
india-and-hinduism
Published on

ಪ್ರಮುಖ ಮುಖ್ಯಾಂಶಗಳು

  • ಬನ್ನಂಜೆ ಗೋವಿಂದಾಚಾರ್ಯ-90 ‘ವಿಶ್ವನಮನ’ ಸಂಪನ್ನ
  • ಅಧ್ಯಾತ್ಮದ ದಾರ್ಶನಿಕ ಬನ್ನಂಜೆ ಎಂದು ಗಣ್ಯರ ಸ್ಮರಣೆ

ಬೆಂಗಳೂರು: ಭಾರತ ಮತ್ತು ಹಿಂದೂ ಧರ್ಮ ಬಹಳ ಸಂದಿಗ್ಧ ಪರಿಸ್ಥಿತಿಯಲ್ಲಿದ್ದು, ನಾವು ಹಿಂದೂ ಎಂಬುದಾಗಿ ಹೇಳಿಕೊಳ್ಳಲು ಭಯಪಡುವ ಸ್ಥಿತಿ ಇದೆ ಎಂದು ನಿವೃತ್ತ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಹೇಳಿದ್ದಾರೆ.

ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ಆಶ್ರಯದಲ್ಲಿ ಅವರ 90ನೇ ಜನ್ಮದಿನದ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ‘ವಿಶ್ವನಮನ’ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ದೇಶದಲ್ಲಿ ಸಂಘರ್ಷ ಮತ್ತು ಮತಾಂಧ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದು ಬಹಳ ಅಪಾಯಕಾರಿಯಾದ ಬೆಳವಣಿಗೆಯಾಗಿದೆ. ಇಂತಹ ವೇಳೆ ಬನ್ನಂಜೆಯವರು ಮತ್ತೆ ಹುಟ್ಟಿ ಬರಬೇಕಿದೆ ಎಂದು ಆಶಿಸಿದರು.
ಸಾನ್ನಿಧ್ಯ ವಹಿಸಿದ್ದ ಉಡುಪಿ ಕಾಣಿಯೂರು ಮಠದ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಮಾತನಾಡಿ, ಬನ್ನಂಜೆಯವರು ಜ್ಞಾನ ಪರಂಪರೆಯ ದೊಡ್ಡ ವಜ್ರ. ಬನ್ನಂಜೆಯವರು ಬದುಕಿದ್ದಾಗ ಅವರ ಮಹತ್ವ ನಮಗೆ ಗೊತ್ತಾಗಲಿಲ್ಲ. ಹಿಂದೂ ಸಮಾಜಕ್ಕೆ ಅವರ ಕೊಡುಗೆ ಮರೆಯಲಾಗದು. ಬನ್ನಂಜೆ ಅವರ ಕಾರ್ಯವನ್ನು ಅವರ ಪುತ್ರಿ ವೀಣಾ ಬನ್ನಂಜೆಯವರು ಮುಂದುವರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.

ಅಧ್ಯಾತ್ಮದ ದಾರ್ಶನಿಕ ಬನ್ನಂಜೆ:

ಮೂಡುಬಿದಿರೆ ದಿಗಂಬರ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ, 21ನೇ ಶತಮಾನದ ಪೂರ್ವಾರ್ಧದಲ್ಲಿದ್ದ ಬನ್ನಂಜೆಯವರು ಆಧುನಿಕ ವಿವೇಕಾನಂದರಾಗಿದ್ದರು ಎಂದರೆ ತಪ್ಪಾಗಲಾರದು. ಅವರು ಅಧ್ಯಾತ್ಮದ ದಾರ್ಶನಿಕ ಮತ್ತು ರಸಋಷಿ. ದ್ವೈತ, ಅದ್ವೈತ, ಜಿನರನ್ನು ಕೃಷ್ಣನಲ್ಲೇ ಕಾಣುವ ಸಾಧ್ಯತೆಯನ್ನು ಬನ್ನಂಜೆಯವರು ತೋರಿಸಿಕೊಟ್ಟರು ಎಂದು ಸ್ಮರಿಸಿದರು.
ಚಾಮರಾಜಪೇಟೆಯ ಕಲಾವಿದರ ಸಂಘದ ಆವರಣದಿಂದ ಗಾಯನ ಸಮಾಜದವರೆಗೆ ಬನ್ನಂಜೆ ಗೋವಿಂದಾಚಾರ್ಯ ಅವರ ಭಾವಚಿತ್ರದ ರಥಯಾತ್ರೆ ನಡೆಯಿತು.
ಸಮಾರೋಪದಲ್ಲಿ ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ, ಇಸ್ಕಾನ್ ಹಿರಿಯ ಉಪಾಧ್ಯಕ್ಷ ಚಂಚಲಪತಿದಾಸ, ಬಾರ್ಕೂರು ಮಹಾಸಂಸ್ಥಾನ ಮಠದ ಡಾ. ವಿಶ್ವಸಂತೋಷ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶತಾವಧಾನಿ ಆರ್. ಗಣೇಶ್, ಶಿಕ್ಷಣ ತಜ್ಞ ಪ್ರೊ. ಗುರುರಾಜ ಕರಜಗಿ, ಆರ್‌ಎಸ್‌ಎಸ್‌ನ ಸಹ ಸರಕಾರ್ಯವಾಹ ಸಿ.ಆರ್. ಮುಕುಂದ, ನಟ ರಮೇಶ್ ಭಟ್, ರವೀಂದ್ರ ಪುಸ್ತಕಾಲಯದ ವೈ.ಎ. ದಂತಿ, ಪ್ರತಿಷ್ಠಾನದ ಅಧ್ಯಕ್ಷ ಮಲ್ಲೇಪುರಂ ಜಿ. ವೆಂಕಟೇಶ್, ಮುಖ್ಯ ಟ್ರಸ್ಟಿ ವೀಣಾ ಬನ್ನಂಜೆ ಹಾಜರಿದ್ದರು.
ಇಸ್ಕಾನ್ ಒಳಗೆ ಸಾಂಸ್ಥಿಕ ಭಿನ್ನಾಭಿಪ್ರಾಯ ಎದುರಾದಾಗ ಬನ್ನಂಜೆಯವರು ತಾತ್ವಿಕವಾಗಿ ಮತ್ತು ಸೈದ್ಧಾಂತಿಕ ದಾಖಲೆಗಳನ್ನು ಪ್ರಸ್ತುತಪಡಿಸಲು ನೆರವಾಗಿದ್ದರು. ಇಂದು ಆ ಎಲ್ಲ ಭಿನ್ನಾಭಿಪ್ರಾಯ ಬಗೆಹರಿದಿವೆ. ನಮ್ಮ ಸಂಸ್ಥೆಯೊಂದಿಗೆ ಬನ್ನಂಜೆಯವರದ್ದು ಅವಿನಾಭಾವ ಸಂಬಂಧವಿತ್ತು.
- ಚಂಚಲಪತಿದಾಸ, ಹಿರಿಯ ಉಪಾಧ್ಯಕ್ಷರು, ಇಸ್ಕಾನ್ (ಬೆಂಗಳೂರು)
ಬನ್ನಂಜೆಯವರು ನ್ಯಾಯನಿಷ್ಠುರಿ. ಯಾರಿಗೂ ತಲೆಬಾಗಿದವರಲ್ಲ. ಆಚಾರ್ಯರ ಕುರಿತು ಸದ್ಭಾವನೆಗಳು ಇನ್ನಷ್ಟು ಮುಂದುವರಿಯುತ್ತಲೇ ಇರುತ್ತವೆ.
- ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕನ್ಹೇರಿ ಮಠ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net