ಪಾದಚಾರಿಗಳಿಗೆ ತೊಂದರೆ: ಮದರ್‌ಹುಡ್ ಆಸ್ಪತ್ರೆಗೆ 1 ಲಕ್ಷ ರೂ. ದಂಡ
motherhood-hospital-fined
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅನಧಿಕೃತ ಪಾರ್ಕಿಂಗ್ ಶುಲ್ಕ ವಸೂಲಿ ವಿರುದ್ಧ ಉತ್ತರ ಪಾಲಿಕೆ ಕ್ರಮ
ಕೆಐಎ ರಸ್ತೆಯ ಸಹಕಾರನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ
ಬೆಂಗಳೂರು:
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿದ ಜಾಗದಲ್ಲಿ ಸಾರ್ವಜನಿಕರ ವಾಹನಗಳ ನಿಲುಗಡೆಗೆ ಅವಕಾಶ ಹಾಗೂ ಅನಧಿಕೃತವಾಗಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುತ್ತಿದ್ದ ಸಹಕಾರನಗರದ ಮದರ್‌ಹುಡ್ ಆಸ್ಪತ್ರೆಗೆ ಉತ್ತರ ನಗರ ಪಾಲಿಕೆಯು ಒಂದು ಲಕ್ಷ ರೂ. ದಂಡವನ್ನು ವಿಧಿಸಿದೆ.
ಪಾದಚಾರಿಗಳ ಸುರಕ್ಷತೆ ಹಾಗೂ ಸಾರ್ವಜನಿಕ ಸ್ಥಳಗಳ ಸಂರಕ್ಷಣೆಯ ಉದ್ದೇಶದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ (ಕೆಐಎ) ಕೋಡಿಗೆಹಳ್ಳಿ ಗೇಟ್‌ನಿಂದ ಮಾಲ್ ಆಫ್ ಏಷ್ಯಾದವರೆಗೆ ಹೆದ್ದಾರಿ ಉದ್ದಕ್ಕೂ ಪಾಲಿಕೆಯು ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿತು. ಈ ವೇಳೆ ತೆರವು ಹೊಣೆ ಹೊತ್ತಿದ್ದ ಅಧಿಕಾರಿಗಳು ಆಸ್ಪತ್ರೆಯ ಆಡಳಿತ ಮಂಡಳಿಯ ಗಮನಕ್ಕೆ ತಂದು, ಸಾರ್ವಜನಿಕ ಸ್ಥಳವನ್ನು ಅನಧಿಕೃತವಾಗಿ ಬಳಸಿಕೊಂಡು ಪಾದಚಾರಿಗಳಿಗೆ ತೊಂದರೆ ಉಂಟುಮಾಡುತ್ತಿರುವ ಹಿನ್ನೆಲೆಯಲ್ಲಿ ಹಾಸ್ಪಿಟಲ್‌ಗೆ 1 ಲಕ್ಷ ರೂ. ದಂಡ ವಿಧಿಸಿದರು.
ಇದೇ ವೇಳೆ ಆಸ್ಪತ್ರೆಯ ಆಡಳಿತ ಮಂಡಳಿಗೆ ಅನಧಿಕೃತ ಪಾರ್ಕಿಂಗ್ ಚಟುವಟಿಕೆಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಹಾಗೂ ಮುಂದಿನ ದಿನಗಳಲ್ಲಿ ಉಲ್ಲಂಘನೆ ಮರುಕಳಿಸದಂತೆ ಕಟ್ಟುನಿಟ್ಟಿನ ಸೂಚನೆಯನ್ನು ಅಧಿಕಾರಿಗಳು ನೀಡಿದರು. ಈ ಹಿಂದೆಯೂ ಮದರ್‌ಹುಡ್ ಆಸ್ಪತ್ರೆಯ ನಡೆ ವಿರುದ್ಧ ಸಾರ್ವಜನಿಕರು ಉತ್ತರ ಪಾಲಿಕೆ ಹಾಗೂ ಸಂಚಾರ ಪೊಲೀಸರಿಗೆ ದೂರು ನೀಡಿ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದು, ಈ ಹಿನ್ನೆಲೆಯಲ್ಲಿಯೂ ಫುಟ್‌ಪಾತ್ ಒತ್ತುವರಿ ತೆರವು ವೇಳೆ ಕಾರ್ಯಾಚರಣೆ ನಡೆಸಿ ಎಚ್ಚರಿಕೆ ನೀಡಲಾಗಿದೆ.
ಸ್ವಯಂ ತೆರವಿಗೆ ಸೂಚನೆ:
ಸರ್ಕಾರಿ/ರಾಷ್ಟ್ರೀಯ ಹೆದ್ದಾರಿ ಜಾಗದಲ್ಲಿರುವ ಎಲ್ಲ ಅನಧಿಕೃತ ಕಟ್ಟಡ, ಅನಧಿಕೃತ ಪಾರ್ಕಿಂಗ್ ಹಾಗೂ ಒತ್ತುವರಿಯನ್ನು ತಕ್ಷಣ ತೆರವುಗೊಳಿಸುವಂತೆ ನಾಗರಿಕರಿಗೆ ಸೂಚಿಸಲಾಗಿದೆ. ಸಾರ್ವಜನಿಕ ಆಸ್ತಿಯನ್ನು ಯಾವುದೇ ರೀತಿಯ ಒತ್ತುವರಿ ಅಥವಾ ಅನಧಿಕೃತ ಬಳಕೆಯಿಂದ ಮುಕ್ತವಾಗಿಟ್ಟುಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಈ ವೇಳೆ ಉತ್ತರ ಪಾಲಿಕೆಯ ಕಾರ್ಯಪಾಲಕ ಅಭಿಯಂತರ ಸಚಿನ್ ಹಾಗೂ ಎಇಇ ವರುಣ್ ಸೇರಿ ಪಾಲಿಕೆ ಅಧಿಕಾರಿಗಳು ಹಾಜರಿದ್ದರು.