ಸುರಂಗದಿಂದ ಹೆಬ್ಬಾಳ ಕೆರೆ ಮೇಲಾಗುವ ಪರಿಣಾಮ ತಿಳಿಸಲು ಹೈಕೋರ್ಟ್​ ಸೂಚನೆ| High court

High court
High court
Published on

ಬೆಂಗಳೂರು: 

ಹೆಬ್ಬಾಳ ಮೇಲ್ಸೇತುವೆಯಿಂದ ಪಶುವೈದ್ಯಕಿಯ ಕಾಲೇಜು ಬಳಿಗೆ ಸಂಪರ್ಕ ಕಲ್ಪಿಸುವ ಪ್ರಸ್ತಾವಿತ 2.5 ಕಿ.ಮೀ ಉದ್ದದ ಸುರಂಗ ಮಾರ್ಗ ಯೋಜನೆಗೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​, ರಾಜ್ಯ ಸರ್ಕಾರಕ್ಕೆ ನೋಟಿಸ್​ ಜಾರಿಗೊಳಿಸಿದೆ. 

ಉದ್ದೇಶಿತ ಯೋಜನೆಯಿಂದ ಮೇಲ್ಸೇತುವೆ ಜಂಕ್ಷನ್​ಗೆ ಹೊಂದಿಕೊಂಡಂತಿರುವ 143 ಎಕರೆ ವಿಸ್ತೀರ್ಣದ ಹೆಬ್ಬಾಳ ಕೆರೆಯ ಮೇಲೆ ಯಾವುದೇ ದುಷ್ಪರಿಣಾಮ ಬೀರಲಿದೆಯೇ ಎಂಬ ಬಗ್ಗೆ ಸರ್ಕಾರವು ಮುಂದಿನ ವಿಚಾರಣೆಯೊಳಗೆ ಉತ್ತರ ನೀಡಬೇಕು. ಇಲ್ಲವಾದಲ್ಲಿ ಯೋಜನೆಗೆ ತಡೆ ನೀಡಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಕೆ.ಎಸ್​. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಎಚ್ಚರಿಕೆ ನೀಡಿದೆ.
ಯೋಜನೆಯಿಂದ ಹೆಬ್ಬಾಳ ಕೆರೆಯ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಲಾಗಿದೆಯೇ ಎಂಬುದನ್ನು ಪ್ರಮಾಣಪತ್ರದಲ್ಲಿ ಸ್ಪಷ್ಟಪಡಿಸಬೇಕು. ಈ ಸುರಂಗ ಮಾರ್ಗವು ಕೆರೆಯ ನೀರಿನ ಒಳಹರಿವು, ಹೊರಹರಿವು ಅಥವಾ ಅಂತರ್ಜಲದ ಹರಿವಿಗೆ ಯಾವುದೇ ಅಡೆತಡೆ ಉಂಟುಮಾಡುತ್ತದೆಯೇ ಎಂಬ ಬಗ್ಗೆಯೂ ವಿವರವಾದ ಮಾಹಿತಿ ನೀಡಬೇಕು ಎಂದು ಆದೇಶಿಸಿದೆ. ಮುಂದಿನ ವಿಚಾರಣೆ ಆ. 24ಕ್ಕೆ ನಿಗದಿಯಾಗಿದೆ. 

ಅರ್ಜಿದಾರರ ವಾದವೇನು?

ಬಸವನಗುಡಿಯ ಆರ್​.ಕೆ. ಗುರುಪ್ರಸಾದ್​ ಸೇರಿ ಮೂವರು ಅರ್ಜಿ ಸಲ್ಲಿಸಿದ್ದಾರೆ. ಈ ಸುರಂಗ ಮಾರ್ಗ ಹಾದುಹೋಗುವ ಭಾಗದಲ್ಲಿ ಹಲವು ರಾಜಕಾಲುವೆಗಳಿವೆ. ಸರ್ಕಾರದ ಯೋಜನಾ ವರದಿಯಲ್ಲಿಯೇ ಯೋಜನೆಯಿಂದ ಕೆರೆಯ ಒಳಹರಿವಿಗೆ ಧಕ್ಕೆಯಾಗಲಿದೆ ಎಂದು ಒಪ್ಪಿಕೊಳ್ಳಲಾಗಿದೆ. ಯಾವುದೇ ವೈಜ್ಞಾನಿಕ ಅಧ್ಯಯನ ನಡೆಸದೆ ಕೆರೆಯ ತಳಭಾಗದ ನೆಲವನ್ನು ಬಳಸಲು ಉದ್ದೇಶಿಸಲಾಗಿದೆ. ಇದರಿಂದ ಪರಿಸರದ ಮೇಲಿನ ಪರಿಣಾಮಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸುವವರೆಗೆ ಯೋಜನೆಗೆ ತಡೆ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ. 

ℹ️

ಬಫರ್​ ಜೋನ್​ ತಿದ್ದುಪಡಿ ಪ್ರಶ್ನೆ 

2014ರ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆಯಲ್ಲಿ ಕೆರೆಗಳ 30 ಮೀಟರ್​ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ನಿರ್ಮಾಣಗಳನ್ನು ಮಾಡುವುದನ್ನು ನಿಷೇಧಿಸಲಾಗಿತ್ತು. ಆದರೆ, 2025ರಲ್ಲಿ ಸರ್ಕಾರ ಈ ಕಾಯ್ದೆಗೆ ತಿದ್ದುಪಡಿ ತಂದು, ಬಫರ್ ಜೋನ್​ ವಲಯವನ್ನು ಕಡಿತಗೊಳಿಸಿ ನೀರಿನ ಹರಿವಿಗೆ ಧಕ್ಕೆಯಾಗದಂತೆ ಕೆಲವು ನಿಮಾರ್ಣಗಳಿಗೆ ಅನುಮತಿ ನೀಡಲು ಅವಕಾಶ ಮಾಡಿಕೊಟ್ಟಿದೆ. ಈ ತಿದ್ದುಪಡಿಯ ಮಾನ್ಯತೆಯನ್ನು ಕೂಡ ಅರ್ಜಿದಾರರು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net