ಕರ್ನಾಟಕ ಸರ್ಕಾರವು ಅರ್ಹ ಫಲಾನುಭವಿಗಳಿಗೆ ಮಾತ್ರ ಉಚಿತ ವಿದ್ಯುತ್ ಸೌಲಭ್ಯ ತಲುಪಿಸುವ ಉದ್ದೇಶದಿಂದ ಗೃಹ ಜ್ಯೋತಿ ಯೋಜನೆಯನ್ನು ಜುಲೈ 1ರಿಂದ ಮತ್ತೊಮ್ಮೆ ಮರು ಪರಿಶೀಲನೆ ಮಾಡುತ್ತಿದೆ. ಯೋಜನೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ನಕಲಿ ದಾಖಲೆಗಳ ಬಳಕೆಯಾಗಿದೆಯೇ, ಮೃತಪಟ್ಟವರ ಹೆಸರಿನಲ್ಲಿ ಇನ್ನು ಕೂಡ ಉಚಿತ ವಿದ್ಯುತ್ ಸೌಲಭ್ಯ ಪಡೆಯಲಾಗುತ್ತಿದೆಯೇ ಮತ್ತು ಒಂದೇ ಕುಟುಂಬದವರು ಬೇರೆ ಬೇರೆ ಮೀಟರ್‌ಗಳ ಹೆಸರಿನಲ್ಲಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು ಇಂಧನ ಇಲಾಖೆ ತಪಾಸಣೆ ನಡೆಸುತ್ತಿದೆ. ಇದರೊಂದಿಗೆ ಬಾಡಿಗೆದಾರರು ಮತ್ತು ಸ್ವಂತ ಮನೆ ಮಾಲೀಕರ ಖಾತೆಗಳ ಮರು ಜೋಡಣೆ ಹಾಗೂ ಮಾಸಿಕ ವಿದ್ಯುತ್ ಬಳಕೆಯ ಸರಾಸರಿ ಮಿತಿಯನ್ನು ನಿಯಮಾನುಸಾರ ಮರು ಮೌಲ್ಯಮಾಪನ ಮಾಡಲು ಸರ್ಕಾರ ನಿರ್ಧರಿಸಿದ್ದು, ಅರ್ಹ ಬಡ ಮತ್ತು ಮಧ್ಯಮ ವರ್ಗದ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ಕೇವಲ ದುರುಪಯೋಗ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.