ಕೋಲ್ಕತ್ತಾದಿಂದ ಬರಿಗೈಯಲ್ಲಿ ಬೆಂಗಳೂರಿಗೆ ಬಂದ ಗಿಗ್​ ಕಾರ್ಮಿಕ; ಈಗ ಸ್ವಂತ ಮನೆ, ಬೈಕ್​ನ ಒಡೆಯ!..Gig Worker Bengaluru

Gig worker came to Bengaluru from Kolkata empty made success
Gig worker came to Bengaluru from Kolkata empty made success
Published on
Gig worker came to Bengaluru from Kolkata empty made success: ಬೆಂಗಳೂರಿನಲ್ಲಿ ಫುಡ್​ ಡೆಲಿವರಿ ಮಾಡೋದು ಅಷ್ಟು ಸುಲಭವಲ್ಲ. ಇಲ್ಲಿ ಕಾಡುವ ಟ್ರಾಫಿಕ್​ ಮಧ್ಯೆಯೂ ಊಟ, ತಿಂಡಿಯನ್ನು ಮನೆಬಾಗಿಲಿಗೆ ತಲುಪಿಸುವ ಕೆಲಸವನ್ನು ಗಿಗ್​ ಕಾರ್ಮಿಕರು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ. ಅವರ ಬದುಕಿನಲ್ಲೂ ಒಂದೊಂದು ಕಥೆಯಿರುತ್ತದೆ. ಇದಕ್ಕೆ ಈ ಹಿಂದೆ ರಾಹುಲ್​ ಗಾಂಧಿಯವರು ಗಿಗ್​​ ಕಾರ್ಮಿಕರನ್ನು ಭೇಟಿಯಾದಾಗ ಅವರು ಬಿಚ್ಚಿಟ್ಟ ನೋವಿನ ಘಟನೆಗಳೇ ಸಾಕ್ಷಿ. ಇವರ ಪೈಕಿ, ರೂಪ್‌ಚಂದ್ ಬಾರ್ ಅವರ ಕಥೆ ನಿಜಕ್ಕೂ ಸ್ಫೂರ್ತಿದಾಯಕ. ಇತ್ತೀಚೆಗಷ್ಟೇ ಅವರು ಸ್ವಿಗ್ಗಿ ಸಂಸ್ಥೆಯಲ್ಲಿ ಡೆಲಿವರಿ ಪಾರ್ಟ್‌ನರ್ ಆಗಿ 10 ವರ್ಷ ಪೂರೈಸಿದ್ದು, ಈ ಹತ್ತು ವರ್ಷಗಳಲ್ಲಿ ಅವರ ಬದುಕು ಬದಲಾದ ಪರಿಯೇ ರೋಚಕವಾಗಿದೆ.
ಕೋಲ್ಕತ್ತಾ ಮೂಲದವರಾದ ರೂಪ್‌ಚಂದ್ ಇವರಿಗೆ ಶಾಲಾ ದಿನಗಳಲ್ಲಿ ಆಟೋಟ ಸ್ಪರ್ಧೆಗಳೆಂದರೆ ಅಚ್ಚುಮೆಟ್ಟು. ಓಟದ ಸ್ಪರ್ಧೆಗಳಲ್ಲಿ ಜಿಲ್ಲಾ ಮಟ್ಟದ ಕ್ರೀಡಾಪಟುವೂ ಆಗಿದ್ದರು.ಭಾರತೀಯ ಸೇನೆ ಸೇರಬೇಕು, ದೇಶಸೇವೆ ಮಾಡಬೇಕೆಂಬುದು ಇವರ ಬಹುದೊಡ್ಡ ಕನಸಾಗಿತ್ತು. ಆದರೆ, ಸೇನೆಗೆ ಬೇಕಾದ 'ಎತ್ತರ' ಇವರಲ್ಲಿ ಇರಲಿಲ್ಲ. ಹೀಗಾಗಿ ಇವರ ಕನಸು ಅಲ್ಲೇ ಭಗ್ನವಾಯಿತು.

ಬೆಂಗಳೂರಿಗೆ ಪಯಣ, 2,700 ರೂ. ಸಂಬಳ

ರೈತ ಕುಟುಂಬಸ್ಥರಾದ ರೂಪ್​ ಚಂದ್​​ಗೆ ಅಷ್ಟಾಗಿ ಆದಾಯ ಇರಲಿಲ್ಲ. ಹೀಗಾಗಿ ಸೇನೆಗೂ ಸೇರಲಾಗಿರಲಿಲ್ಲ. ಈ ಹತಾಶೆಯ ನಡುವೆ ಮುಂದೆ ಮಾಡೋದೇನು ಎಂಬ ಪ್ರಶ್ನೆ ತಲೆಯಲ್ಲಿ ಸುಳಿದಾಡಲಾರಂಭಿಸಿತ್ತು. ಕೊನೆಗೊಂದು ದಿನ ಬದುಕಿನಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಹೊತ್ತು ಬೆಂಗಳೂರಿನ ರೈಲೇರಿದರು. ಆಗ, "ಒಳ್ಳೆಯ ಬದುಕು ಕಟ್ಟಿಕೊಳ್ಳುವ ಕನಸನ್ನು ಬಿಟ್ಟರೆ ನನ್ನ ಬಳಿ ಬೇರೇನೂ ಇರಲಿಲ್ಲ," ಎನ್ನುತ್ತಾರೆ ರೂಪ್‌ಚಂದ್‌ ಬಾರ್.
ಉದ್ಯಾನ ನಗರಿಗೆ ಬಂದವರೇ ಮೊದಲು ಹೌಸ್‌ಕೀಪಿಂಗ್ (ಸ್ವಚ್ಛತಾ) ಕಾರ್ಮಿಕನಾಗಿ ಕೆಲಸಕ್ಕೆ ಸೇರಿದರು. ಆಗ ಅವರ ತಿಂಗಳ ದುಡಿಮೆ ಕೇವಲ 2,700 ರೂಪಾಯಿ!

ಬದುಕು ಬದಲಿಸಿತು ಆ 'ಒಂದು ವಾರ'

ಹೀಗೆಯೇ ಸಾಗುತ್ತಿದ್ದ ಅವರ ಬದುಕಿಗೆ ತಿರುವು ಸಿಕ್ಕಿದ್ದು 2016ರಲ್ಲಿ. "ನೀನ್ಯಾಕೆ ಸ್ವಿಗ್ಗಿ ಡೆಲಿವರಿ ಪಾರ್ಟ್‌ನರ್ ಆಗಬಾರದು? ಅಲ್ಲಿ ಒಳ್ಳೆ ಹಣ ಸಿಗುತ್ತದೆ," ಎಂದು ಸ್ನೇಹಿತನೊಬ್ಬ ಹೇಳಿದ್ದ. ಆಗ ಅವರಿಗೆ ಈ ಡೆಲಿವರಿ ಪಾರ್ಟ್‌ನರ್‌ ಅಂದರೆ ಏನು? ಸ್ವಿಗ್ಗಿ ಅಂದರೆ ಏನು ಎಂದೂ ಅಷ್ಟಾಗಿ ತಿಳಿದಿರಲಿಲ್ಲ. ಆದರೆ ಸ್ನೇಹಿತನ ಸಲಹೆಯನ್ನು ಪಾಲಿಸಿದ್ದರು. ಅದೇ ತಮ್ಮ ಬದುಕಿಗೆ ದೊಡ್ಡ ತಿರುವು ನೀಡುತ್ತದೆ ಎಂಬುದೂ ಆಗ ಅವರಿಗೆ ತಿಳಿದಿರಲಿಲ್ಲ.
"ನಾನು ಸ್ವಿಗ್ಗಿಗೆ ಸೇರಿದ ಮೊದಲ ವಾರದಲ್ಲೇ, ನನ್ನ ಇಡೀ ತಿಂಗಳ ಸಂಬಳಕ್ಕಿಂತ ಹೆಚ್ಚಿನ ಹಣವನ್ನು ಸಂಪಾದಿಸಿದೆ. ಯಾರದೋ ಕೈಕೆಳಗೆ ದುಡಿಯುವ ಬದಲು, ನನ್ನ ಇಷ್ಟದಂತೆ ಕೆಲಸ ಮಾಡುವ ಸ್ವಾತಂತ್ರ್ಯ ನನಗಿಲ್ಲಿ ಸಿಕ್ಕಿತು. ಕಷ್ಟಪಟ್ಟು ದುಡಿದರೆ ಹಣ ಸಿಗುತ್ತದೆ ಎಂಬುದೂ ಅರಿವಾಯಿತು," ಎನ್ನುತ್ತಾರೆ ರೂಪ್‌ಚಂದ್.

ಸ್ವಂತ ಮನೆ, ಬೈಕ್ ಮತ್ತು ಭಾಷೆ

ಅಲ್ಲಿಂದ ಇಲ್ಲಿಯವರೆಗೂ, ಗ್ರಾಹಕರು ಬುಕ್‌ ಮಾಡಿದ ಆಹಾರವನ್ನು ಅವರ ಮನೆಬಾಗಿಲಿಗೆ ತಲುಪಿಸುವ ಕೆಲಸವನ್ನು ರೂಪ್‌ಚಂದ್‌ ನಿಯತ್ತಾಗಿ ಮಾಡುತ್ತಾ ಬಂದಿದ್ದಾರೆ. ಅವರ ಈ ಸತತ ಹತ್ತು ವರ್ಷಗಳ ಪ್ರಾಮಾಣಿಕ ಶ್ರಮ ಇಂದು ಅವರಿಗೆ ದೊಡ್ಡ ಯಶಸ್ಸನ್ನೂ ತಂದುಕೊಟ್ಟಿದೆ. ಸಂಸ್ಥೆಯ 'ಸ್ಟಾರ್ ಪರ್ಫಾರ್ಮರ್' ಆಗಿ ಗುರುತಿಸಿಕೊಂಡಿದ್ದಾರೆ. ಸ್ವಂತ ಬೈಕ್ ಖರೀದಿಸಿದ್ದಾರೆ. ತಮ್ಮ ಊರಿನಲ್ಲಿ ಸುಂದರವಾದ ಮನೆಯೊಂದನ್ನು ಕಟ್ಟಿಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ನೆಮ್ಮದಿಯ ಜೀವನವನ್ನೂ ಕಲ್ಪಿಸಿಕೊಟ್ಟಿದ್ದಾರೆ.
ಮಾತೃಭಾಷೆ ಬಂಗಾಳಿ ಮಾತ್ರ ಗೊತ್ತಿದ್ದ ಇವರು, ಇಂದು ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿಯೂ ಸರಾಗವಾಗಿ ಮಾತನಾಡುತ್ತಾರೆ. ನನ್ನ ಕುಟುಂಬದಲ್ಲಿ ಮೂರು-ನಾಲ್ಕು ಭಾಷೆಗಳನ್ನು ಕಲಿತ ಮೊದಲ ವ್ಯಕ್ತಿ ನಾನೇ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net