238 ಗ್ರಾಪಂಗಳಿಗೆ ಗಾಂಧಿ ಗ್ರಾಮ ಪುರಸ್ಕಾರ

ವಿಧಾನಸೌಧ
ವಿಧಾನಸೌಧ
Published on

ಪ್ರಮುಖ ಮುಖ್ಯಾಂಶಗಳು

  • ವಿಧಾನಸೌಧದಲ್ಲಿ ಸಿಎಂ, ಡಿಸಿಎಂರಿಂದ ಸನ್ಮಾನ
  • ಪ್ರಶಸ್ತಿ ಪ್ರಮಾಣ ಪತ್ರ, ಸ್ಮರಣಿಕೆ, 5 ಲಕ್ಷ ರೂ. ಪ್ರೋತ್ಸಾಹ ಧನ
ಬೆಂಗಳೂರು: ಗ್ರಾಮೀಣ ಜನರ ಬೇಡಿಕೆಗಳಿಗೆ ಅನುಗುಣವಾಗಿ ಮೂಲಸೌಕರ್ಯ ಮತ್ತು ಉತ್ತಮ ಸೇವೆ ನೀಡುತ್ತಿರುವ 238 ಗ್ರಾಪಂಗಳು ಗಾಂಧಿ ಗ್ರಾಮ (Gandhi grama) ಪುರಸ್ಕಾರಕ್ಕೆ ಆಯ್ಕೆಯಾಗಿವೆ.
ಉತ್ತಮವಾಗಿ ಆಡಳಿತ ನಡೆಸುತ್ತಿರುವ ಗ್ರಾಪಂಗಳನ್ನು ಪ್ರೋತ್ಸಾಹಿಸಲು ತಾಲೂಕಿಗೆ ಒಂದು ಉತ್ತಮ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿ ಪ್ರತಿ ವರ್ಷವೂ ಪ್ರಶಸ್ತಿ ನೀಡಲಾಗುತ್ತಿದೆ.
ಪ್ರಶಸ್ತಿಗೆ ಆಯ್ಕೆ ಮಾಡಲು ಗ್ರಾಪಂಗಳು ಕಾಯ್ದೆಬದ್ಧವಾಗಿ ನಿರ್ವಹಿಸಬೇಕಾದ ಹಾಗೂ ಸ್ವಯಂ ಪ್ರೇರಣೆಯಿಂದ ಕೈಗೊಳ್ಳಲಾಗುವ ಅಭಿವೃದ್ಧಿ ಚಟುವಟಿಕೆಗಳು, ಸರ್ಕಾರ ಕಾಲಕಾಲಕ್ಕೆ ರೂಪಿಸಿದ ಕಾರ್ಯಕ್ರಮಗಳ ನಿರ್ವಹಣೆಗೆ ಕೈಗೊಂಡ ಕ್ರಮಗಳನ್ನು ಒಳಗೊಂಡಂತೆ ಜೀವನದ ಗುಣಮಟ್ಟ, ಹಣಕಾಸಿನ ನಿರ್ವಹಣೆ, ಮೂಲಸೌಕರ್ಯ, ಉತ್ತಮ ಆಡಳಿತ, ಗ್ರಾಪಂ ಸೇವೆಗಳು ಮತ್ತು ಗ್ರಾಪಂ ಅಭಿವೃದ್ಧಿ ಚಟುವಟಿಕೆಗಳನ್ನು ಪರಿಗಣಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲ ಗ್ರಾಪಂಗಳಿಂದ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಿ ಪ್ರತಿ ತಾಲೂಕಿಗೆ ಅತಿ ಹೆಚ್ಚು ಅಂಕ ಗಳಿಸಿರುವ 5 ಗ್ರಾಪಂಗಳನ್ನು ಅರ್ಹತಾ ಪಟ್ಟಿಗೆ ಆಯ್ಕೆ ಮಾಡಲಾಗಿತ್ತು. ಆ ನಂತರ ಸ್ಥಳ ಹಾಗೂ ದಾಖಲಾತಿ ಪರಿಶೀಲನೆ ಮಾಡಿ, ಆಯಾ ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿನ ಜಿಲ್ಲಾಮಟ್ಟದ ಆಯ್ಕೆ ಸಮಿತಿ ಮೂಲಕ ತಾಲೂಕಿಗೆ ಒಂದರಂತೆ ಆಯ್ಕೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿನ ರಾಜ್ಯಮಟ್ಟದ ಪರಾಮರ್ಶೆ ಸಮಿತಿ ಮೂಲಕ ಗ್ರಾಮಗಳನ್ನು ಅಂತಿಮಗೊಳಿಸಲಾಗಿದೆ. ಆಯ್ಕೆಯಾದ ಗ್ರಾಪಂಗಳಿಗೆ ಪ್ರಶಸ್ತಿ ಪ್ರಮಾಣಪತ್ರ, ಸ್ಮರಣಿಕೆ ಮತ್ತು 5 ಲಕ್ಷ ರೂ.ಪ್ರೋತ್ಸಾಹಧನ ನೀಡಿ ಗೌರವಿಸಲಾಗುತ್ತಿದೆ.
ಪ್ರಸ್ತುತ 2023-2024ನೇ ಸಾಲಿನಲ್ಲಿ ಆಯ್ಕೆ ಮಾಡಲಾದ 238 ಗ್ರಾಪಂಗಳಿಗೆ ಪುರಸ್ಕಾರ ಪ್ರದಾನ ಮಾಡಲಾಗುತ್ತಿದೆ. ಗ್ರಾಪಂ ಅಧ್ಯಕ್ಷರು ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಂದ ಪ್ರಶಸ್ತಿಗಳನ್ನು ಸ್ವೀಕರಿಸಲಿದ್ದಾರೆ. ಪ್ರಶಸ್ತಿ ಮೊತ್ತವನ್ನು ಗಾಪಂ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲು ಸೂಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net