ರೈತರು ಸಂಸ್ಕರಣೆ, ಮೌಲ್ಯವರ್ಧನೆಗೆ ಒತ್ತು ನೀಡಲಿ

value-addition
value-addition
Published on

ಪ್ರಮುಖ ಮುಖ್ಯಾಂಶಗಳು

  • ನವೋದ್ಯಮಿ ಮೂಲಕ ಸ್ವಯಂ ಉದ್ಯೋಗ ಸೃಷ್ಟಿ
  • ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿಕೆ
ಬೆಂಗಳೂರು: ರೈತರು ತಾವು ಬೆಳೆದ ಬೆಳೆಗಳನ್ನು ಸಂಸ್ಕರಣೆ ಹಾಗೂ ಮೌಲ್ಯವರ್ಧನೆಗೆ ಒಳಪಡಿಸಿದ್ದಲ್ಲಿ ಕೃಷಿಯಲ್ಲಿ ಹೆಚ್ಚಿನ ಆದಾಯ ಪಡೆಯಲು ಸಾಧ್ಯ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.
ಬೆಂಗಳೂರು ಕೃಷಿ ವಿವಿಯ ಅಗ್ರಿ ಇನ್ನೋವೇಶನ್ ಸೆಂಟರ್ ಸಹಯೋಗದಲ್ಲಿ ಜಿಕೆವಿಕೆ ಕ್ಯಾಂಪಸ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ‘ಅಗ್ರಿ ಸ್ಟಾರ್ಟ್‌ಅಪ್ ಕಾನ್‌ಕ್ಲೇವ್ 2.0’ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ, ಸಂಶೋಧನೆ ಹಾಗೂ ಆವಿಷ್ಕಾರಗಳ ಸಂಯೋಜನೆಯಿಂದ ರೈತರ ಜೀವನಮಟ್ಟವನ್ನು ಸುಧಾರಿಸಬಹುದಾಗಿದೆ. ಕೃಷಿ ವಿವಿಯ ಸಂಶೋಧನೆಗಳು ಪ್ರಯೋಗಾಲಯಗಳಿಗಷ್ಟೇ ಸೀಮಿತವಾಗಿವೆ. ಸಂಶೋಧನೆಯು ನವೋದ್ಯಮ ಮೂಲಕ ರೈತರ ಹೊಲಕ್ಕೆ ತಲುಪಬೇಕು. ಜತೆಗೆ ಯುವಜನತೆ ಅಗ್ರಿ ಸ್ಟಾರ್ಟ್‌ಅಪ್ ಆರಂಭಿಸಿದರೆ ಸಂಸ್ಕರಣೆ, ಮೌಲ್ಯವರ್ಧನೆ, ಪ್ಯಾಕೇಜಿಂಗ್, ಬ್ರ್ಯಾಂಡಿಂಗ್ ಹಾಗೂ ಮಾರುಕಟ್ಟೆ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ತರಲು ಸಾಧ್ಯ ಎಂದು ಪ್ರತಿಪಾದಿಸಿದರು.
ದೇಶದಲ್ಲಿ ಎರಡು ಲಕ್ಷ ನವೋದ್ಯಮಗಳಿದ್ದು, ಕರ್ನಾಟಕದಲ್ಲಿ 7-8 ಸಾವಿರದಷ್ಟಿವೆ. ಯುವ ಪದವೀಧರರು ಉದ್ಯೋಗ ಅರಸಿ ಹೋಗುವ ಬದಲು ಉದ್ಯೋಗದಾತರಾಗಬೇಕು. ಇದಕ್ಕಾಗಿ ನವೋದ್ಯಮವನ್ನು ಬಳಸಿಕೊಳ್ಳಬೇಕಿದ್ದು, ಸರ್ಕಾರ ಕೃಷಿ ಪದವೀಧರರಿಗೆ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಭರವಸೆ ನೀಡಿದರು.
ಕೃಷಿ ಇಲಾಖೆಯ ಕಾರ್ಯದರ್ಶಿ ಡಾ. ಕೆ.ರಾಜೇಂದ್ರ ಮಾತನಾಡಿ, ಅಗ್ರಿ ಸ್ಟಾರ್ಟ್‌ಅಪ್‌ಗಳು ಕೇವಲ ಉದ್ಯಮವಲ್ಲ, ರೈತರ ಬದುಕಿನಲ್ಲಿ ಬದಲಾವಣೆ ತರಬಲ್ಲ ಶಕ್ತಿಯಾಗಿದೆ. ತಂತ್ರಜ್ಞಾನ ಮತ್ತು ಕೃಷಿಯ ಸಂಯೋಜನೆಯಿಂದ ಕೃಷಿಕರ ಆದಾಯ ಹೆಚ್ಚುವುದರ ಜತೆಗೆ ಗ್ರಾಮೀಣ ಯುವಜನತೆಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಕೃಷಿ ನವೋದ್ಯಮ ರೈತರಿಗೆ ವರದಾನ:

ಬೆಂಗಳೂರು ಕೃಷಿ ವಿವಿ ಕುಲಪತಿ ಡಾ. ಎಸ್.ವಿ. ಸುರೇಶ್ ಮಾತನಾಡಿ, ಕೃಷಿ ನವೋದ್ಯಮವು ರೈತರಿಗೆ ಹೊಸ ತಂತ್ರಜ್ಞಾನ, ಹವಾಮಾನ ಆಧಾರಿತ ಕೃಷಿ ಸಲಹೆ, ಡಿಜಿಟಲ್ ಮಾರುಕಟ್ಟೆ, ನಿಖರ ಕೃಷಿ, ಡ್ರೋನ್ ತಂತ್ರಜ್ಞಾನ ಹಾಗೂ ಕೃಷಿ ಯಂತ್ರೋಪಕರಣಗಳ ಬಳಕೆಯನ್ನು ಸುಲಭಗೊಳಿಸುತ್ತಿವೆ. ಇದರಿಂದ ಕೃಷಿ ವೆಚ್ಚ ಕಡಿಮೆಯಾಗುವುದರ ಜತೆಗೆ ಉತ್ಪಾದಕತೆ ಮತ್ತು ಲಾಭದಾಯಕತೆ ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಹಿನ್ನೆಲೆಯಲ್ಲಿ 50 ಮಳಿಗೆಗಳಲ್ಲಿ ಯುವ ನವೋದ್ಯಮಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದರು. ಕೃಷಿ ತಂತ್ರಜ್ಞಾನದ ಕುರಿತು ಮಾಹಿತಿ ವಿನಿಮಯವೂ ನಡೆಯಿತು.
ಅಗ್ರಿ ಇನ್ನೋವೇಶನ್ ಸೆಂಟರ್‌ನ ಮುಖ್ಯಸ್ಥೆ ಡಾ. ವೀಣಾ ಎಸ್. ಅನಿಲ್, ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರದ ಮುಖ್ಯಸ್ಥ ಡಾ. ಕೆ.ಪಿ. ರಘುಪ್ರಸಾದ್ ಹಾಜರಿದ್ದರು.
"

ಕೃಷಿ ಪದವೀಧರರು ಮತ್ತು ಯುವ ಸಂಶೋಧಕರು ಕೃಷಿಯನ್ನು ಕೈಗಾರಿಕಾ ದೃಷ್ಟಿಕೋನದಿಂದ ನೋಡಬೇಕು. ಕೃಷಿ ಉತ್ಪನ್ನಗಳ ನೇರ ಮಾರುಕಟ್ಟೆ, ಕೃಷಿ ಪ್ರವಾಸೋದ್ಯಮ, ಸಾವಯವ ಉತ್ಪನ್ನಗಳ ಬ್ರ್ಯಾಂಡಿಂಗ್ ಹಾಗೂ ರಫ್ತು ಅವಕಾಶಗಳನ್ನು ಬಳಸಿಕೊಂಡು ಗ್ರಾಮೀಣ ಭಾಗದಲ್ಲಿ ಹೊಸ ಉದ್ಯಮ ಆರಂಭಿಸಬಹುದು.

- ಡಾ. ಜಿತೇಂದ್ರಕುಮಾರ್, ಎಂಡಿ, ಜೈವಿಕ ತಂತ್ರಜ್ಞಾನ ಕೈಗಾರಿಕೆ ಉತ್ತೇಜನಾ ಪರಿಷತ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net