ರಾಜ್ಯದಲ್ಲಿ ಬರ ಪರಿಸ್ಥಿತಿ ಗಂಭೀರ: ರೈತರಿಗೆ 2,500 ರೂ. ಪರಿಹಾರ ನೀಡಲು ಸರ್ಕಾರದಿಂದ 1,250 ಕೋಟಿ ರೂ. ವೆಚ್ಚ ಅಂದ್ರು ಡಿಸಿಎಂ! Dr G Parameshwara

ಸದಾಶಿವನಗರದ ತಮ್ಮ ನಿವಾಸದ ಬಳಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ರೈತರೊಂದಿಗೂ ಚರ್ಚೆ ನಡೆಸಲಾಗಿದೆ. ಇತ್ತೀಚೆಗೆ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದ್ದರೂ ರಾಜ್ಯದ ಬಹುತೇಕ ಭಾಗಗಳಲ್ಲಿ ಬರದ ತೀವ್ರತೆ ಕಡಿಮೆಯಾಗಿಲ್ಲ ಎಂದು ಹೇಳಿದರು.
Dr G Parameshwara
ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ
Published on: 

ಬೆಂಗಳೂರು: ರಾಜ್ಯದ ಬಹುತೇಕ ಭಾಗಗಳಲ್ಲಿ ಬರದ ಪರಿಣಾಮ ಅತ್ಯಂತ ಗಂಭೀರವಾಗಿದ್ದು, ಆಹಾರ ಉತ್ಪಾದನೆ ಕುಂಠಿತಗೊಂಡಿರುವುದರ ಜತೆಗೆ ಜಾನುವಾರುಗಳಿಗೆ ಮೇವಿನ ಕೊರತೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ಸಂಕಷ್ಟವನ್ನು ನಿಭಾಯಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಕೇಂದ್ರ ಸರ್ಕಾರದಿಂದ ಬರ ಪರಿಹಾರದ ಅನುದಾನ ಪಡೆಯಲು ನಿರಂತರ ಪ್ರಯತ್ನ ನಡೆಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ ( Dr G Parameshwara ) ಅವರು ತಿಳಿಸಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ರೈತರೊಂದಿಗೂ ಚರ್ಚೆ ನಡೆಸಲಾಗಿದೆ. ಇತ್ತೀಚೆಗೆ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದ್ದರೂ ರಾಜ್ಯದ ಬಹುತೇಕ ಭಾಗಗಳಲ್ಲಿ ಬರದ ತೀವ್ರತೆ ಕಡಿಮೆಯಾಗಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಬರದ ಪರಿಣಾಮ ಆಹಾರ ಉತ್ಪಾದನೆಗೆ ತೀವ್ರ ಹೊಡೆತ ಬಿದ್ದಿದ್ದು, ಶೇ.82ರಷ್ಟು ನಷ್ಟ ಸಂಭವಿಸಿದೆ. ಇದರ ಪರಿಣಾಮವಾಗಿ ಜನರಿಗೆ ಆಹಾರ ಧಾನ್ಯಗಳ ಕೊರತೆ ಎದುರಾಗುವ ಆತಂಕವಿದ್ದು, ಜಾನುವಾರುಗಳಿಗೆ ಅಗತ್ಯವಾದ ಮೇವಿನ ಲಭ್ಯತೆಯೂ ಕಡಿಮೆಯಾಗಿದೆ. ಇದರೊಂದಿಗೆ ಕುಡಿಯುವ ನೀರಿನ ಸಮಸ್ಯೆಯೂ ಗಂಭೀರ ಸ್ವರೂಪ ಪಡೆದುಕೊಂಡಿದೆ ಎಂದು ವಿವರಿಸಿದರು.

Also Read
ಬಿಷ್ಣೋಯ್ ಗ್ಯಾಂಗ್​ಗೆ ಸಲ್ಲು ಒಂದು ನೆಪ ಮಾತ್ರ... ಸೆಲೆಬ್ರಿಟಿಗಳ ಮೇಲಿನ ದಾಳಿಗಳ ಹಿಂದಿದೆ ಈ ಭಯಾನಕ ಗೇಮ್‌ಪ್ಲ್ಯಾನ್! Lawrence Bishnoi Gang
Dr G Parameshwara

ಈಗಾಗಲೇ ಹಲವೆಡೆ ಟ್ಯಾಂಕರ್‌ಗಳು ಮತ್ತು ಖಾಸಗಿ ಕೊಳವೆಬಾವಿಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಆದರೆ ನೀರಿನ ಮೂಲಗಳೇ ಬತ್ತಿಹೋದರೆ ಟ್ಯಾಂಕರ್‌ಗಳಿಗೆ ನೀರು ತುಂಬಿಸಿ ಪೂರೈಸುವುದೂ ಕಷ್ಟವಾಗಲಿದೆ. ಪರಿಸ್ಥಿತಿ ಆ ಹಂತಕ್ಕೆ ತಲುಪುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದರು.

ಕೇಂದ್ರಕ್ಕೆ ಮೂರನೇ ಮನವಿ ಪತ್ರ ಸಲ್ಲಿಸಲು ಸಿದ್ಧತೆ

ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳ ಪ್ರಕಾರ ಬರಪೀಡಿತ ಪ್ರದೇಶಗಳನ್ನು ಘೋಷಿಸಿ, ಬೆಳೆ ಹಾಗೂ ಇತರ ನಷ್ಟಗಳ ಅಂದಾಜು ಸಿದ್ಧಪಡಿಸಲಾಗುತ್ತದೆ. ಅದರ ಆಧಾರದಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿ (NDRF) ಮಾರ್ಗಸೂಚಿಗಳ ಅನ್ವಯ ಕೇಂದ್ರ ಸರ್ಕಾರದಿಂದ ಪರಿಹಾರದ ಅನುದಾನ ಕೋರಲಾಗುತ್ತದೆ ಎಂದು ಹೇಳಿದರು.

ಈಗಾಗಲೇ ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿದ್ದು, ಮೂರನೇ ಮನವಿ ಪತ್ರವನ್ನು ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ. ಇನ್ನೊಂದು ಎರಡು ದಿನಗಳಲ್ಲಿ ಅದು ಸಿದ್ಧವಾಗಲಿದ್ದು, ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಮನವಿ ಪತ್ರ ಸಲ್ಲಿಸಲು ಮುಖ್ಯಮಂತ್ರಿಗಳು, ನಾನು ಅಥವಾ ನಿಯೋಗ ತೆರಳುವ ಬಗ್ಗೆ ಮುಖ್ಯಮಂತ್ರಿಗಳೇ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಈ ಹಿಂದೆ ಸರ್ವಪಕ್ಷ ನಿಯೋಗವನ್ನು ಕೇಂದ್ರ ಸರ್ಕಾರದ ಬಳಿ ಕರೆದೊಯ್ಯುವ ಪ್ರಸ್ತಾಪವನ್ನು ಮುಖ್ಯಮಂತ್ರಿಗಳು ಮಾಡಿದ್ದರು. ಆದರೆ ವಿರೋಧ ಪಕ್ಷದವರು ನಿಯೋಗದಲ್ಲಿ ಭಾಗವಹಿಸುವ ಕುರಿತು ಭಿನ್ನ ನಿಲುವು ವ್ಯಕ್ತಪಡಿಸಿರುವುದರಿಂದ ಮುಂದಿನ ಕ್ರಮದ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಹೇಳಿದರು.

ಕೇಂದ್ರ ಸರ್ಕಾರದಿಂದ ಪರಿಹಾರದ ಹಣ ಬಿಡುಗಡೆಯಾದರೆ ಸಂಕಷ್ಟದಲ್ಲಿರುವ ರೈತರು ಹಾಗೂ ಇತರ ಸಂತ್ರಸ್ತರಿಗೆ ನೆರವು ಒದಗಿಸಲು ಅನುಕೂಲವಾಗಲಿದೆ. ಹೀಗಾಗಿ ಕೇಂದ್ರ ಸರ್ಕಾರ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಬೇಕಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಅನುದಾನಕ್ಕಾಗಿ ಕಾಯದೆ ರಾಜ್ಯ ಸರ್ಕಾರ ತನ್ನ ಸಂಪನ್ಮೂಲಗಳಿಂದಲೇ ಬರ ಪರಿಹಾರ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುತ್ತಿದೆ. ಕುಡಿಯುವ ನೀರಿನ ಪೂರೈಕೆಗೆ ಈಗಾಗಲೇ ಅನುದಾನ ಒದಗಿಸಲಾಗಿದ್ದು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪರಿಸ್ಥಿತಿಯನ್ನು ನಿರ್ವಹಿಸುತ್ತಿದ್ದಾರೆ. ಅಗತ್ಯವಿರುವ ಕಡೆ ಟ್ಯಾಂಕರ್‌ಗಳು ಹಾಗೂ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ವಿವರಿಸಿದರು.

ವಿಬಿ ಜಿ ರಾಮ್ ಜಿ ಯೋಜನೆಯಡಿ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ ಇದುವರೆಗೆ ಒಂದು ಪೈಸೆಯೂ ಅನುದಾನ ಬಂದಿಲ್ಲ. ಆದರೂ ರಾಜ್ಯ ಸರ್ಕಾರವೇ ತನ್ನ ಸಂಪನ್ಮೂಲಗಳಿಂದ ಹಣ ಒದಗಿಸಿ ಕಾಮಗಾರಿಗಳನ್ನು ಮುಂದುವರಿಸುತ್ತಿದೆ ಎಂದು ಹೇಳಿದರು.

Also Read
ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಹಿಂದಿರುವ ಮಾಸ್ಟರ್‌ಮೈಂಡ್ ಅನಿಲ್ ಪಂಡಿತ್ ಯಾರು? ಈತನ ಕರಾಳ ಹಿನ್ನೆಲೆ ಇಲ್ಲಿದೆ...Anil Pandit
Dr G Parameshwara

ರೈತರಿಗೆ ತಲಾ 2,500 ರೂಪಾಯಿ ನೀಡುವುದಕ್ಕಾಗಿಯೇ ರಾಜ್ಯ ಸರ್ಕಾರಕ್ಕೆ ಸುಮಾರು 1,250 ಕೋಟಿ ರೂ. ವೆಚ್ಚವಾಗುತ್ತಿದ್ದು, ಈ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಇಷ್ಟೊಂದು ಆರ್ಥಿಕ ಹೊರೆಯ ನಡುವೆಯೂ ಜನರು ಹಾಗೂ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸ್ಟಿಂಗ್ ಆಪರೇಷನ್ ವಿವಾದ ಉತ್ತಮ ಬೆಳವಣಿಗೆಯಲ್ಲ

ರಾಜ್ಯದಲ್ಲಿ ನಡೆಯುತ್ತಿರುವ ಸ್ಟಿಂಗ್ ಆಪರೇಷನ್ ಹಾಗೂ ಅದಕ್ಕೆ ಸಂಬಂಧಿಸಿದ ರಾಜಕೀಯ ಆರೋಪ-ಪ್ರತ್ಯಾರೋಪಗಳ ಕುರಿತು ಮಾಧ್ಯಮದವರ ಪ್ರಶ್ನಗೆ ಪ್ರತಿಕ್ರಿಯಿಸಿದ ಅವರು, ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳು ಖಂಡಿತವಾಗಿಯೂ ಒಳ್ಳೆಯ ಬೆಳವಣಿಗೆಗಳಲ್ಲ ಎಂದು ಹೇಳಿದರು. ಸಾರ್ವಜನಿಕ ಜೀವನದಲ್ಲಿ ತಪ್ಪುಗಳು ಆಗಿರಬಹುದು. ಈ ಹಿಂದೆ ಇಂತಹ ಘಟನೆಗಳು ನಡೆದಿರಬಹುದು. ಆದರೆ ಈ ಮಟ್ಟಕ್ಕೆ ಪರಿಸ್ಥಿತಿ ತಲುಪಿರುವುದು ಸರಿಯಲ್ಲ. ಕೇಂದ್ರ ಸಚಿವರಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು ತಮ್ಮ ವ್ಯಕ್ತಿತ್ವ, ಸ್ಥಾನಮಾನ ಹಾಗೂ ತಮ್ಮ ಹೇಳಿಕೆಗಳು ಉಂಟುಮಾಡುವ ಪರಿಣಾಮಗಳ ಬಗ್ಗೆ ಯೋಚಿಸಬೇಕು. ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು ಹಾಗೂ ಅಧಿಕಾರದಲ್ಲಿರುವವರನ್ನು ಒಳಗೊಂಡು ನಡೆಯುತ್ತಿರುವ ಈ ರೀತಿಯ ಸಾರ್ವಜನಿಕ ಆರೋಪ-ಪ್ರತ್ಯಾರೋಪಗಳು ಅಸಹ್ಯಕರ ಪರಿಸ್ಥಿತಿಗೆ ಕಾರಣವಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ಈ ವಿವಾದದ ಕುರಿತು ಪ್ರತಿಯೊಬ್ಬರೂ ಒಂದೊಂದು ಹೇಳಿಕೆ ನೀಡುತ್ತಾ ಹೋದರೆ ಅದು ಎಲ್ಲಿಗೆ ತಲುಪುತ್ತದೆ ಎಂಬುದನ್ನು ಯೋಚಿಸಬೇಕು. ಹೀಗಾಗಿ ಇಂತಹ ವಿಚಾರಗಳನ್ನು ಸಾರ್ವಜನಿಕವಾಗಿ ಹೆಚ್ಚು ಚರ್ಚಿಸುವುದು ಸೂಕ್ತವಲ್ಲ. ಈ ವಿಷಯದಲ್ಲಿ ಹೆಚ್ಚಿನ ಪ್ರತಿಕ್ರಿಯೆ ನೀಡುವುದಕ್ಕಿಂತ ಸುಮ್ಮನಿರುವುದೇ ಉತ್ತಮ ಎಂದು ಹೇಳಿದರು.

ಸ್ಟಿಂಗ್ ಆಪರೇಷನ್ ವಿವಾದದಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರದ ಗೌರವವನ್ನು ಯಾವ ರೀತಿಯಲ್ಲಿ ಕಾಪಾಡಬೇಕು ಮತ್ತು ಜನಸಮುದಾಯಕ್ಕೆ ಸತ್ಯಾಂಶಗಳನ್ನು ಹೇಗೆ ತಿಳಿಸಬೇಕು ಎಂಬುದರ ಬಗ್ಗೆ ಮುಖ್ಯಮಂತ್ರಿಗಳು ಸೇರಿದಂತೆ ಸರ್ಕಾರದ ಎಲ್ಲರೂ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದೇವೆ ಎಂದು ಹೇಳಿದರು.

ಯಾರಾದರೂ ಆರೋಪ ಮಾಡಿದ ತಕ್ಷಣ ಮತ್ತೊಬ್ಬರು ಪ್ರತಿಕ್ರಿಯಿಸುವುದು ಸೂಕ್ತವಲ್ಲ. ದೇಶದಲ್ಲಿ ಕಾನೂನು ವ್ಯವಸ್ಥೆಯಿದ್ದು, ಕಾನೂನಿನ ಚೌಕಟ್ಟಿನಲ್ಲಿ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳಲಾಗುತ್ತದೆ. ಈ ಸಂಬಂಧ ಗೃಹ ಸಚಿವರು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಗಳೂ ಈ ಕುರಿತು ಮಾತನಾಡಿದ್ದಾರೆ. ಸರ್ಕಾರವಾಗಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Also Read
ಒಂದೇ ದೇಹ ಎರಡು ತಲೆ ಹೊಂದಿದ್ದ ನವಜಾತ ಶಿಶು ಒಂದೇ ವಾರದಲ್ಲಿ ಸಾವು: ಶವ ಸ್ವೀಕರಿಸಲು ಪೋಷಕರ ನಕಾರ..! Two Headed Baby
Dr G Parameshwara

ಸ್ಟಿಂಗ್ ಆಪರೇಷನ್ ವಿವಾದದ ಹಿನ್ನೆಲೆಯಲ್ಲಿ ಇದೇ ಅವಧಿಯಲ್ಲಿ ದಲಿತ ಸಮುದಾಯದ ನಾಯಕರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸುವ ಸಾಧ್ಯತೆಗಳಿವೆ ಎಂಬ ಚರ್ಚೆ ಹಾಗೂ ಪರಮೇಶ್ವರ, ಪ್ರಿಯಾಂಕ್ ಖರ್ಗೆ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಹೆಸರುಗಳ ಪ್ರಸ್ತಾಪದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಅಂತಹ ಯಾವುದೇ ಮಾಹಿತಿ ತಮ್ಮ ಬಳಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈ ಕುರಿತು ಪಕ್ಷದ ಹೈಕಮಾಂಡ್ ಯಾರೊಂದಿಗೆ ಮಾತನಾಡಿದೆ? ಯಾರಿಗೆ ಈ ಮಾಹಿತಿ ಇದೆ? ನನಗೇ ತಿಳಿಯದ ವಿಚಾರ ಮಾಧ್ಯಮದವರಿಗೆ ಹೇಗೆ ತಿಳಿಯಿತು ಎಂದು ಪ್ರಶ್ನಿಸಿದರು. ಯಾವುದೇ ಚರ್ಚೆಗೆ ಕನಿಷ್ಠ ಆಧಾರವಾದರೂ ಇರಬೇಕು. ಆಧಾರವಿಲ್ಲದ ವಿಚಾರಗಳನ್ನು ಹುಟ್ಟುಹಾಕುವುದು ಸರಿಯಲ್ಲ ಎಂದು ಹೇಳಿದರು.

2028ರಲ್ಲಿ ಯಾರು ಅಧಿಕಾರಕ್ಕೆ ಬರಬೇಕು ಎಂಬುದನ್ನು ಜನರೇ ನಿರ್ಧರಿಸುತ್ತಾರೆ

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ರಾಜಕೀಯಕ್ಕೆ ಮರಳುವ ಹಾಗೂ 2028ರಲ್ಲಿ ಅಧಿಕಾರಕ್ಕೆ ಬರುವ ಕುರಿತು ನೀಡುತ್ತಿರುವ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, 2028ರಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆ ಎಂಬುದನ್ನು ಈಗಲೇ ಯಾರೂ ಹೇಳಲು ಸಾಧ್ಯವಿಲ್ಲ. ಅದನ್ನು ನಿರ್ಧರಿಸುವುದು ರಾಜ್ಯದ ಜನತೆ ಎಂದು ಹೇಳಿದರು. ಈ ಕುರಿತ ರಾಜಕೀಯ ತಂತ್ರಗಾರಿಕೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಕಾದು ನೋಡೋಣ ಎಂದು ಪ್ರತಿಕ್ರಿಯಿಸಿದರು.

ಕುಮಾರಸ್ವಾಮಿ ಅವರು ರಾಜ್ಯ ರಾಜಕೀಯಕ್ಕೆ ಮರಳಲು ಬಯಸಿದರೆ ಅವರನ್ನು ತಡೆಯುವವರು ಯಾರು? ಬೇಕಿದ್ದರೆ ನಾಳೆಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯ ರಾಜಕೀಯದಲ್ಲಿ ಸಕ್ರಿಯರಾಗಬಹುದು. ರಾಜಕೀಯದಲ್ಲಿ ಯಾರನ್ನೂ ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net