ಹೂಳೆತ್ತುವಿಕೆ ಪ್ರಹಸನ, ರಾಜಕಾಲುವೆ ಅಧ್ವಾನ

silt in rajakaluves
silt in rajakaluves
Published on

ಪ್ರಮುಖ ಮುಖ್ಯಾಂಶಗಳು

  • ಹೂಳು ತೆಗೆದು ಬದಿಗೆ ರಾಶಿ ಹಾಕಿ ಉದಾಸೀನ
  • ಹೆಬ್ಬಾಳದ ರಿಂಗ್ ರಸ್ತೆ ಬಳಿ ಅಪೂರ್ಣ ಕಾಮಗಾರಿ
ಬೆಂಗಳೂರು: ಮಹಾನಗರದಲ್ಲಿ ಪ್ರತಿವರ್ಷ ಮಳೆಗಾಲದ ವೇಳೆ ರಾಜಕಾಲುವೆ ಹಾಗೂ ಚರಂಡಿಗಳಲ್ಲಿ ಹೂಳೆತ್ತುವ ಕಾರ್ಯಕ್ಕಾಗಿ ವಾರ್ಷಿಕ ಕೋಟ್ಯಂತರ ರೂ. ವ್ಯಯಿಸಿದರೂ, ತೆಗೆದ ಹೂಳನ್ನು ಪೂರ್ಣವಾಗಿ ತೆರವು ಮಾಡದ ಕಾರಣ ಮತ್ತೆ ನೀರುಗಾಲುವೆಗಳಿಗೆ ಸೇರಿ ಸಮಸ್ಯೆಯಾಗುತ್ತಿದೆ.
ಹೆಬ್ಬಾಳದ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಕರಿಯಣ್ಣಪಾಳ್ಯ ರಾಜಕಾಲುವೆಯಲ್ಲಿ ತುಂಬಿದ್ದ ಹೂಳನ್ನು ತೆಗೆದು ಒಂದು ಬದಿಯಲ್ಲೇ ಹಾಕಲಾಗಿದೆ. ಸುಮಾರು ಒಂದು ವರ್ಷದಿಂದ ಹೂಳನ್ನು ಬೇರೆಡೆ ಸಾಗಿಸದ ಕಾರಣ ಕ್ರಮೇಣ ನೀರುಗಾಲುವೆ ಸೇರುತ್ತಿದೆ. ಆ ಬಳಿಕವೂ ಗಿಡ-ಗಂಟಿ ಸೇರಿ ಇನ್ನೊಮ್ಮೆ ಹೂಳು ತೆಗೆದರೂ ಪೂರ್ಣವಾಗಿ ಸಾಗಿಸಿಲ್ಲ. ಅರೆಬರೆ ಕಾಮಗಾರಿ ಕೈಗೊಂಡು ಅರ್ಧಕ್ಕೆ ನಿಂತಿರುವ ಕೆಲಸವನ್ನು ಪೂರ್ಣಗೊಳಿಸಲು ಮಳೆನೀರುಗಾಲುವೆ ವಿಭಾಗ ವಿಫಲವಾಗಿದೆ. ಜತೆಗೆ ಒಂದು ಬದಿ ತಡೆಗೋಡೆ ನಿರ್ಮಿಸದ ಕಾರಣ ಮೇಲ್ಭಾಗದ ಮಣ್ಣು ರಾಜಕಾಲುವೆ ಸೇರುತ್ತಿದೆ. ಈ ರೀತಿ ನಗರದಾದ್ಯಂತ ಹಲವೆಡೆ ಹೂಳೆತ್ತುವಿಕೆ ಪ್ರಹಸನವಾಗಿ ಮಾರ್ಪಟ್ಟಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.
ನಗರದಲ್ಲಿ ಹೆಬ್ಬಾಳ, ವೃಷಾಭಾವತಿ, ಚಲ್ಲಘಟ್ಟ ಹಾಗೂ ಕೋರಮಂಗಲ ಎಂಬ 4 ಮಳೆನೀರು ಕಣಿವೆಗಳಾಗಿ ಗುರುತಿಸಲಾಗಿದೆ. ಇವುಗಳಲ್ಲಿ ಚಲ್ಲಘಟ್ಟ ಹಾಗೂ ಕೋರಮಂಗಲ ಕಣಿವೆಯಲ್ಲಿ ಹೆಚ್ಚು ಮಳೆನೀರು ಹರಿಯುತ್ತಿದ್ದು, ನಗರದ ಕೇಂದ್ರ ಭಾಗ ಹಾಗೂ ವಾಣಿಜ್ಯ ಪ್ರದೇಶವನ್ನು ಒಳಗೊಂಡಿದೆ. ಇದರಿಂದಾಗಿ ಸಹಜವಾಗಿಯೇ ಹೂಳು ಕೂಡ ಹೆಚ್ಚಿಗೆ ಕಂಡುಬರುತ್ತಿದ್ದು, ಪ್ರತಿವರ್ಷವೂ ಸ್ವಚ್ಛಗೊಳಿಸಲು ಆದ್ಯತೆ ನೀಡಲಾಗುತ್ತಿದೆ. ಉಳಿದೆರಡು ಕಣಿವೆ ಪ್ರದೇಶದಲ್ಲಿ ಮಧ್ಯಮ ಪ್ರಮಾಣದ ನೀರು ಹರಿದರೂ ಹೂಳಿನಲ್ಲಿ ಬಹುತೇಕ ತ್ಯಾಜ್ಯವಸ್ತುಗಳೇ ಕಂಡುಬರುತ್ತಿವೆ. ವಾರ್ಷಿಕವಾಗಿ ಹೂಳೆತ್ತಲು ಹಾಗೂ ನಿರ್ವಹಣೆಗೆ ಮಾತ್ರ ವಾರ್ಷಿಕ 500 ಕೋಟಿ ರೂ. (ರಾಜಕಾಲುವೆ ಅಭಿವೃದ್ಧಿಗೆ ಪ್ರತ್ಯೇಕ ಹಣ ನಿಗದಿ) ವ್ಯಯಿಸಲಾಗುತ್ತಿದೆ. ಇಷ್ಟೊಂದು ಬೃಹತ್ ಪ್ರಮಾಣದ ಹಣ ಖರ್ಚು ಮಾಡಿದರೂ, ರಾಜಕಾಲುವೆಗಳು ಶುಚಿಯಾಗದೆ ಕಸ ಸುರಿಯುವ ತಾಣವಾಗಿ ಮಾರ್ಪಟ್ಟಿರುವುದು ಪಾಲಿಕೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಚರಂಡಿಗಳಲ್ಲೂ ಹೂಳಿನದ್ದೇ ಸಮಸ್ಯೆ:
ರಸ್ತೆಗಳ ಬದಿ ಮಳೆನೀರು ಹರಿಯಲೆಂದೇ ಚರಂಡಿ ವಿನ್ಯಾಸ ಮಾಡಿದ್ದರೂ, ಕಸ-ಕಡ್ಡಿ ಹಾಗೂ ವಿವಿಧ ಬಗೆಯ ತ್ಯಾಜ್ಯ ತುಂಬುವ ‘ಡಸ್ಟ್ ಬಿನ್’ಗಳಾಗಿವೆ. ಮಳೆನೀರಿನೊಂದಿಗೆ ಮಣ್ಣು, ಮರಳು ಸೇರಿದರೆ ಅಂತಹ ಹೂಳನ್ನು ತೆಗೆದು ಸುಲಭವಾಗಿ ಸಾಗಿಸಬಹುದು. ಆದರೆ, ಕಸವನ್ನು ತೆಗೆದರೂ ಅದನ್ನು ಹೊರಗೆ ಸಾಗಿಸದೆ ಸಮೀಪದ ಖಾಲಿ ಜಾಗ, ಹಳ್ಳಗಳಿಗೆ ಸುರಿಯಲಾಗುತ್ತಿದೆ. ರಾಜಕಾಲುವೆಗಳಂತೆ ಚರಂಡಿಗಳು ಕೂಡ ಸಮರ್ಪಕವಾಗಿ ನಿರ್ವಹಣೆ ಆಗುತ್ತಿಲ್ಲ. ವರ್ತಕರು, ಬೀದಿಬದಿ ವ್ಯಾಪಾರಿಗಳು ಹಾಗೂ ನಾಗರಿಕರು ಚರಂಡಿಗೆ ಕಸ ಹಾಕುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ. ಇದರಿಂದ ಹೂಳಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎಂಬುದು ಅಧಿಕಾರಿಗಳ ವಾದ. ಆದರೆ, ಕಸ ಸೇರಿ ಚರಂಡಿಗಳನ್ನು ವಿನ್ಯಾಸ ಮಾಡದೆ ಹಳೆಯ ಮಾದರಿಯನ್ನೇ ಉಳಿಸಿಕೊಂಡ ಪರಿಣಾಮ ಸಮಸ್ಯೆ ಜೀವಂತ ಇದೆ ಎಂದು ಕೆಲ ಮಾಜಿ ಕಾರ್ಪೋರೇಟರ್‌ಗಳು ಪ್ರತಿಕ್ರಿಯಿಸಿದ್ದಾರೆ.
ಹೊಸ ಪಾಲಿಕೆಗೆ ಗಡಿ ಸಮಸ್ಯೆ:
ಬಿಬಿಎಂಪಿ ಅಸ್ತಿತ್ವದಲ್ಲಿದ್ದಾಗ ನಗರದಲ್ಲಿ 842 ಕಿ.ಮೀ. ಉದ್ದದ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ನೀರುಗಾಲುವೆ ಜಾಲ ಇತ್ತು. ಕೆಲವೆಡೆ ಪಾಲಿಕೆ ಗಡಿ ದಾಟಿ ನೀರುಗಾಲುವೆಯನ್ನು ಹರಿಯಬಿಟ್ಟಿರುವ ಕಾರಣ ಅವುಗಳ ಉದ್ದ 856.74 ಕಿ.ಮೀ. ವಿಸ್ತರಿಸಿದೆ. ಸದ್ಯ ಪಂಚ ನಗರ ಪಾಲಿಕೆಗಳಾಗಿ ವಿಂಗಡಣೆ ಬಳಿಕ ಕೆಲವೆಡೆ ರಾಜಕಾಲುವೆಗಳು ಪಾಲಿಕೆಗಳ ಗಡಿ ಸಮಸ್ಯೆಯಿಂದಾಗಿ ನಿರ್ವಹಣೆಗೆ ಸಮಸ್ಯೆ ತಂದೊಡ್ಡಿದೆ. ವಿಶ್ವಬ್ಯಾಂಕ್ ನೆರವಿನ ಮಳೆನೀರುಗಾಲುವೆಗಳ ಪುನಶ್ಚೇತನ ಯೋಜನೆಯನ್ನು ‘ಬಿ-ಸ್ಮೈಲ್’ ಸಂಸ್ಥೆಗೆ ವಹಿಸಿದ್ದರೂ, ಇನ್ನುಳಿದ ರಾಜಕಾಲುವೆಗಳನ್ನು ಆಯಾ ಪಾಲಿಕೆಗಳಿಗೆ ನಿರ್ವಹಿಸಬೇಕಿದೆ. ಪಾಲಿಕೆ ಗಡಿಯಾಚೆಗಿನ ಹೂಳೆತ್ತುವಿಕೆ ಹಾಗೂ ನಿರ್ವಹಣೆಗೆ ಅನುದಾನ ಹಂಚಿಕೊಳ್ಳಬೇಕು ಇಲ್ಲವೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಕಸ ಸುರಿಯುವಿಕೆಗಿಲ್ಲ ದಂಡಾಸ್ತ್ರ:
ತ್ಯಾಜ್ಯ ಸಂಗ್ರಹಿಸಲು ಸಮರ್ಪಕ ವ್ಯವಸ್ಥೆ ಇಲ್ಲದ ಕಾರಣ ಜನರು ರಸ್ತೆ ಬದಿ, ಖಾಲಿ ಜಾಗ ಇಲ್ಲವೆ ರಾಜಕಾಲುವೆಗಳಿಗೆ ಸುರಿಯುತ್ತಿದ್ದಾರೆ. ನೀರುಗಾಲುವೆ ಬದಿಯಿರುವ ಮನೆ ಹಾಗೂ ವಾಣಿಜ್ಯ ಮಳಿಗೆಯವರು ತ್ಯಾಜ್ಯದ ಮೂಟೆಯನ್ನು ರಾಜಕಾಲುವೆಗೆ ಬಿಸಾಡುವ ಪ್ರಕರಣಗಳು ಹೆಚ್ಚುತ್ತಿವೆ. ಇಂತಹವರ ವಿರುದ್ಧ ದಂಡಾಸ್ತ್ರ ಬಳಸಲು ಜಿಬಿಎ ಮುಂದಾಗಿಲ್ಲ. ಅಥವಾ ಜನಜಾಗೃತಿಗೂ ಗಮನ ನೀಡಿಲ್ಲ. ಜನವಸತಿ ಇರುವೆಡೆ ರಾಜಕಾಲುವೆಗಳ ತಡೆಗೋಡೆ ಮೇಲೆ ಮೆಶ್ ಅಳವಡಿಸಿದರೆ ಅರ್ಧದಷ್ಟಾದರೂ ತ್ಯಾಜ್ಯ ಎಸೆಯುವಿಕೆ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂಬುದು ಮಾಜಿ ಮೇಯರ್ ಒಬ್ಬರ ಸಲಹೆಯಾಗಿದೆ.
ಹೂಳೆತ್ತುವಿಕೆಗಿಲ್ಲ ಆದ್ಯತೆ
ರಾಜಕಾಲುವೆಗಳ ವಾರ್ಷಿಕ ನಿರ್ವಹಣೆ ಜತೆಗೆ ವಾರ್ಡ್ ಮಟ್ಟದಲ್ಲಿರುವ ಚರಂಡಿಗಳಲ್ಲಿ ಹೂಳೆತ್ತುವಿಕೆಗೆ ಪ್ರತ್ಯೇಕ ಅನುದಾನ ನಿಗದಿ ಮಾಡಲಾಗುತ್ತದೆ. ಬಿಬಿಎಂಪಿ ಅಸ್ತಿತ್ವದಲ್ಲಿದ್ದಾಗ ಪ್ರತೀ ವಾರ್ಡ್‌ಗೆ 25 ಲಕ್ಷ ರೂ. ಅನುದಾನ ಸಿಗುತ್ತಿದ್ದರೂ, ಅರ್ಧದಷ್ಟು ಪ್ರದೇಶವೂ ಶುಚಿಯಾಗುತ್ತಿರಲಿಲ್ಲ. ಇತ್ತೀಚೆಗೆ ಮಂಡನೆಯಾದ ಬಜೆಟ್‌ನಲ್ಲಿ 369 ವಾರ್ಡ್‌ಗಳಿಗೆ ತಲಾ 20 ಲಕ್ಷ ರೂ. ಹಣ ಮೀಸಲಿಡಲಾಗಿದೆ. ಕೂಲಿಯಾಳುಗಳ ಅಭಾವ ಹಾಗೂ ಯಂತ್ರಗಳ ಬಳಕೆಯಿಂದ ದರ ಹೆಚ್ಚಳಗೊಂಡಿರುವುದರಿಂದ ಹಿಂದಿನ ಸಮಸ್ಯೆ ಮುಂದುವರಿಯಲಿದೆ. ಹಾಗಾಗಿ ಹೂಳೆತ್ತುವಿಕೆ ಹೊಸ ವ್ಯವಸ್ಥೆಯನ್ನು ಕಾರ್ಪೋರೇಷನ್‌ಗಳು ಅಳವಡಿಸಿಕೊಳ್ಳಬೇಕಿದೆ.
ರಿಂಗ್ ರಸ್ತೆಯ ಕರಿಯಣ್ಣಪಾಳ್ಯದ ಬಳಿಯ ರಾಜಕಾಲುವೆಯಲ್ಲಿದ್ದ ಗಿಡಗಂಟಿಯನ್ನು ತೆಗೆದು ಶುಚಿಗೊಳಿಸಲಾಗಿದೆ. ಆದರೆ, ಹೂಳನ್ನು ಅಲ್ಲಿಯೇ ರಾಶಿ ಹಾಕಿರುವುದರಿಂದ ಮಳೆಬಂದಲ್ಲಿ ಮತ್ತೆ ನೀರುಗಾಲುವೆ ಸೇರುವ ಸಂಭವ ಇದೆ. ಕಾಮಗಾರಿ ಪೂರ್ಣಗೊಳಿಸಿದ ಬಳಿಕ ಇಂತಿಷ್ಟು ದಿನದೊಳಗೆ ಹೂಳನ್ನು ಸಾಗಿಸಲು ಪಾಲಿಕೆ ಮುಖ್ಯಸ್ಥರು ನಿಯಮ ರೂಪಿಸಬೇಕು.
- ರಾಜು ಪಂಡಿತ್, ಕರಿಯಣ್ಣಪಾಳ್ಯ (ಹೆಬ್ಬಾಳ) ನಿವಾಸಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net