ಜುಲೈ ಅಂತ್ಯಕ್ಕೆ ‘ಯುಬಿ 100’ ಗುರಿ ತಲುಪಲು ಗಡುವು

ub-100-target
ub-100-target
Published on

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತುತ ಅರ್ಧದಷ್ಟು ವಿಶೇಷ ಸ್ವಚ್ಛತಾ ಅಭಿಯಾನ ಪೂರ್ಣ
  • ಬ್ಲ್ಯಾಕ್ ಸ್ಪಾಟ್‌ಗಳನ್ನು ಪರಿಸರಸ್ನೇಹಿ ಸ್ಥಳವಾಗಿಸಲು ಕ್ರಮ
ಬೆಂಗಳೂರು: ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬ್ಲ್ಯಾಕ್‌ಸ್ಪಾಟ್‌ಮುಕ್ತ ಮಾಡುವ ಹಿನ್ನೆಲೆಯಲ್ಲಿ ಕೈಗೆತ್ತಿಕೊಂಡಿರುವ ಯುಬಿ100 (ಉತ್ತರ ಬೆಂಗಳೂರು 100) ವಿಶೇಷ ಸ್ವಚ್ಛತಾ ಅಭಿಯಾನವನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಲು ಆಯುಕ್ತ ಪಿ.ಸುನೀಲ್ ಕುಮಾರ್ ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ.
ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಜೂ.5ರಂದು ಚಾಲನೆ ನೀಡಲಾಗಿ 45 ದಿನಗಳ ಯುಬಿ 100 ಅಭಿಯಾನವು ಯಶಸ್ವಿಯಾಗಿ ಮುಂದುವರಿಯುತ್ತಿದ್ದು, ಈಗಾಗಲೇ ಶೇ.50 ಪ್ರಗತಿ ಸಾಧಿಸಲಾಗಿದೆ. ಇದರಿಂದಾಗಿ 50 ಸ್ಥಳಗಳಲ್ಲಿ ಕಸದ ಬ್ಲ್ಯಾಕ್ ಸ್ಪಾಟ್‌ಗಳನ್ನು ಶಾಶ್ವತವಾಗಿ ನಿರ್ಮೂಲನೆಗೊಳಿಸಲಾಗಿದೆ. ಉಳಿದವುಗಳನ್ನು ಈ ತಿಂಗಳಾಂತ್ಯಕ್ಕೆ ಪೂರ್ಣಗೊಳಿಸಿ ಗುರಿ ಸಾಧಿಸಬೇಕು. ಉತ್ತರ ಪಾಲಿಕೆಯನ್ನು ಬ್ಲ್ಯಾಕ್‌ಸ್ಪಾಟ್‌ಮುಕ್ತ ಮಾಡುವ ಹೊಣೆಯನ್ನು ಎಲ್ಲ ಅಧಿಕಾರಿಗಳು ವಹಿಸಿಕೊಳ್ಳುವಂತೆ ಅವರು ಗುರುವಾರ ನಿರ್ದೇಶನ ನೀಡಿದ್ದಾರೆ.


ಅಭಿಯಾನ ಏಕೆ?

ಉತ್ತರ ಪಾಲಿಕೆ ವ್ಯಾಪ್ತಿಯ ಹಲವು ಸ್ಥಳಗಳಲ್ಲಿ ದೀರ್ಘ ಷಮಯದಿಂದ ಕಸ ಸಂಗ್ರಹಣೆ, ಅನಧಿಕೃತ ತ್ಯಾಜ್ಯ ವಿಸರ್ಜನೆ ಹಾಗೂ ನಿರ್ವಹಣೆಯ ಕೊರತೆಯಿಂದ ನಾಗರಿಕರಿಗೆ ತೊಂದರೆಯಾಗುತ್ತಿದೆ. ಇಂತಹ ಕಸದ ಬ್ಲ್ಯಾಕ್ ಸ್ಪಾಟ್‌ಗಳನ್ನು ಗುರುತಿಸಿ ಅವುಗಳನ್ನು ಶಾಶ್ವತವಾಗಿ ನಿರ್ಮೂಲನೆಗೊಳಿಸಿ, ಸ್ವಚ್ಛ ಹಾಗೂ ಸಾರ್ವಜನಿಕಸ್ನೇಹಿ ಸ್ಥಳಗಳಾಗಿ ಪರಿವರ್ತಿಸಲು ಯುಬಿ 100 ಅಭಿಯಾನವನ್ನು ಆರಂಭಿಸಲಾಗಿದೆ.
ಸದ್ಯ ಅಭಿಯಾನದಡಿ ಗುರುತಿಸಿರುವ 100 ಬ್ಲ್ಯಾಕ್ ಸ್ಪಾಟ್‌ಗಳ ಪೈಕಿ ಈವರೆಗೆ 50 ಸ್ಥಳಗಳಲ್ಲಿ ಸ್ವಚ್ಛತಾ ಹಾಗೂ ಸೌಂದರ್ಯೀಕರಣ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಕಸ ಹಾಗೂ ತ್ಯಾಜ್ಯ ತೆರವು, ಪಾದಚಾರಿ ಮಾರ್ಗಗಳ ದುರಸ್ತಿ, ರಸ್ತೆಬದಿ ಸ್ವಚ್ಛತೆ, ಬೀದಿ ದೀಪಗಳ ನಿರ್ವಹಣೆ, ಗೋಡೆಗಳ ಸೌಂದರೀಕರಣ ಹಾಗೂ ಸಾರ್ವಜನಿಕ ಉಪಯೋಗಕ್ಕೆ ಅನುಕೂಲವಾಗುವ ಮೂಲಸೌಕರ್ಯಗಳ ಅಭಿವೃದ್ಧಿ ಕೆಲಸವನ್ನು ಪೂರ್ಣಗೊಳಿಸಲಾಗಿದೆ. ಈ ಪ್ರದೇಶಗಳಲ್ಲಿ ಹಿಂದೆ ಕಾಣುತ್ತಿದ್ದ ಕಸದ ರಾಶಿ ಸ್ಥಳಗಳು ಈಗ ಸಂಪೂರ್ಣವಾಗಿ ಸ್ವಚ್ಛತಾ ಸ್ಥಳವಾಗಿ ಪರಿವರ್ತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

3 ಹಂತಗಳಲ್ಲಿ ಅಭಿಯಾನ ಅನುಷ್ಠಾನ:

ವಿಶೇಷ ಸ್ವಚ್ಛತಾ ಅಭಿಯಾನವನ್ನು ಮೂರು ಹಂತಗಳಲ್ಲಿ ಜಾರಿಗೆ ತರಲಾಗುತ್ತಿದೆ. ಮೊದಲ ಹಂತದಲ್ಲಿ ತೀವ್ರ ಸ್ವಚ್ಛತೆ ಮತ್ತು ಮೂಲಸೌಕರ್ಯ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತದೆ. ದ್ವಿತೀಯ ಹಂತದಲ್ಲಿ ಬ್ಲ್ಯಾಕ್‌ಸ್ಪಾಟ್‌ಗಳ ಸ್ಥಳ ಪರಿವರ್ತನೆ ಮತ್ತು ಸೌಂದರ್ಯೀಕರಣ ಹಾಗೂ ಮೂರನೇ ಹಂತದಲ್ಲಿ ನಿಗಾವಹಿಸುವಿಕೆ ಮತ್ತು ನಿರ್ವಹಣೆ ಮಾಡುವ ಪರಿಪಾಠವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಇದರಿಂದಾಗಿ ಅಭಿಯಾನಕ್ಕೆ ನಾಗರಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಮುಂದಿನ ದಿನಗಳಲ್ಲೂ ಅಭಿಯಾನಕ್ಕೆ ಸ್ಥಳೀಯ ನಿವಾಸಿಗಳು, ವ್ಯಾಪಾರಸ್ಥರು, ಸಂಘ-ಸಂಸ್ಥೆಗಳು ಹಾಗೂ ಸ್ವಯಂಸೇವಕರ ಸಹಕಾರ ನೀಡಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
"

ಕಸವನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆಯದೆ, ಮೂಲದಲ್ಲಿಯೇ ವಿಂಗಡಿಸಿ ನೀಡುವುದು ಹಾಗೂ ಅಭಿವೃದ್ಧಿಪಡಿಸಲಾದ ಸ್ಥಳಗಳ ಸ್ವಚ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ. ಈ ಕೆಲಸವನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗಲು ನಾಗಿಕರು ಕಾರ್ಪೋರೇಷನ್ ಜತೆ ಕೈಗೋಡಿಸಬೇಕಿದೆ.

- ಪಿ.ಸುನೀಲ್ ಕುಮಾರ್, ಉತ್ತರ ಪಾಲಿಕೆ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net