ಆರೋಗ್ಯದಲ್ಲಿ ಏರುಪೇರಾಗಿ DCM ಪರಮೇಶ್ವರ್​ ಆಸ್ಪತ್ರೆಗೆ ದಾಖಲು: ಸಿಎಂ ಸೇರಿ ಸಚಿವರ ದೌಡು! ವೈದ್ಯರು ಹೇಳಿದ್ದೇನು? DCM G Parameshwara

DCM G Parameshwara
ಉಪಮುಖ್ಯಮಂತ್ರಿ ಜಿ. ಪರಮೇಶ್ವರ್
Published on: 

ಬೆಂಗಳೂರು: ಬ್ಯಾಡ್ಮಿಂಟನ್ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ( DCM G Parameshwara ) ಅವರ ಆರೋಗ್ಯದಲ್ಲಿ ಇದ್ದಕ್ಕಿದ್ದಂತೆ ಏರುಪೇರು ಉಂಟಾಗಿದ್ದು, ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪರಮೇಶ್ವರ್​ ಅವರ ಆರೋಗ್ಯ ಹಠಾತ್ತನೆ ಕ್ಷೀಣಿಸಿದ ಸುದ್ದಿ ತಿಳಿಯುತ್ತಿದ್ದಂತೆಯೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಂಪುಟದ ಹಲವು ಹಿರಿಯ ಸಚಿವರು ಹಾಗೂ ನಾಯಕರು ಆಸ್ಪತ್ರೆಗೆ ದೌಡಾಯಿಸಿ ಆರೋಗ್ಯ ವಿಚಾರಿಸುತ್ತಿದ್ದಾರೆ.

Also Read
ಕರ್ನಾಟಕ ಮತದಾರರ ಅಂತಿಮ ಪಟ್ಟಿ ಪ್ರಕಟ: ಬರೋಬ್ಬರಿ 1 ಕೋಟಿ ಹೆಸರು ಡಿಲೀಟ್, ನಿಮ್ಮ ಹೆಸರಿದೆಯಾ ಹೀಗೆ ಚೆಕ್ ಮಾಡಿ! | Karnataka Electoral Roll
DCM G Parameshwara

ಬ್ಯಾಡ್ಮಿಂಟನ್ ಉದ್ಘಾಟನಾ ಕಾರ್ಯಕ್ರಮದ ವೇಳೆ ಪರಮೇಶ್ವರ್ ಅವರ ಆರೋಗ್ಯದಲ್ಲಿ ದಿಢೀರ್ ವ್ಯತ್ಯಾಸ ಕಂಡುಬಂದಿತು. ಈ ವೇಳೆ ಅವರ ಜತೆಯಲ್ಲಿದ್ದ ಎಂಎಲ್‌ಸಿ ಗೋವಿಂದರಾಜು ಅವರು ಸಮಯಪ್ರಜ್ಞೆ ಮೆರೆದು, ಯಾವುದೇ ವಿಳಂಬ ಮಾಡದೇ ವೈದೇಹಿ ಆಸ್ಪತ್ರೆಗೆ ಕರೆದೊಯ್ದರು. ಆರಂಭದಲ್ಲಿ ಪರಮೇಶ್ವರ್​ ಅವರಿಗೆ ಹೃದಯಾಘಾತವಾಗಿದೆ ಎಂಬ ಕಳವಳಕಾರಿ ವರದಿಗಳು ಹರಡಿದ್ದರಿಂದ ಬೆಂಬಲಿತರು ಮತ್ತು ಕಾರ್ಯಕರ್ತರಲ್ಲಿ ಆತಂಕ ಮನೆಮಾಡಿತ್ತು. ಆದರೆ, ಆಸ್ಪತ್ರೆಯ ವೈದ್ಯಕೀಯ ತಂಡವು ತಕ್ಷಣವೇ ಅವರ ತಪಾಸಣೆ ನಡೆಸಿ ತೀವ್ರ ನಿಗಾದಲ್ಲಿ ಅಗತ್ಯ ಚಿಕಿತ್ಸೆಯನ್ನು ಒದಗಿಸಿದೆ.

ವೈದೇಹಿ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ವಿ.ಕೆ. ಶ್ರೀನಿವಾಸ್ ಅವರು ಪರಮೇಶ್ವರ್ ಅವರ ಆರೋಗ್ಯದ ಕುರಿತು ಅಧಿಕೃತ ಮಾಹಿತಿ ನೀಡಿ ಅಭಿಮಾನಿಗಳ ಹಾಗೂ ನಾಯಕರ ಆತಂಕವನ್ನು ದೂರ ಮಾಡಿದ್ದಾರೆ.

ಡಿಸಿಎಂ ಪರಮೇಶ್ವರ್ ಅವರ ಹೃದಯ ಬಡಿತದ ಪ್ರಮಾಣ ಏಕಾಏಕಿ ಹೆಚ್ಚಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಪ್ರಸ್ತುತ ಅವರ ಆರೋಗ್ಯ ಸಂಪೂರ್ಣ ನಾರ್ಮಲ್ ಆಗಿದೆ. ಇಸಿಜಿ ಸೇರಿದಂತೆ ಎಲ್ಲಾ ವೈದ್ಯಕೀಯ ಪರೀಕ್ಷಾ ವರದಿಗಳು ಸಾಮಾನ್ಯವಾಗಿದ್ದು, ಅವರು ಸ್ವತಃ ಊಟ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ, ಇನ್ನು ಎರಡು ಗಂಟೆಗಳಲ್ಲಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂದೂ ವೈದ್ಯರು ಸ್ಪಷ್ಟಪಡಿಸಿದ್ದಾರೆ.

Also Read
Gen Z ಪ್ರಚಾರವೋ ಅಥವಾ ಕಿರುಕುಳವೋ..? ನವೆಂಬರ್ 1ರ ರ‍್ಯಾಲಿ ಕುರಿತು ಯೂತ್​ ಕಾಂಗ್ರೆಸ್ ಪೋಸ್ಟ್‌ನಿಂದ ಭುಗಿಲೆದ್ದ ವಿವಾದ! | Indian Youth Congress
DCM G Parameshwara

ಪರಮೇಶ್ವರ್ ಅವರು ಚೇತರಿಸಿಕೊಳ್ಳುತ್ತಿರುವ ವಿಷಯ ತಿಳಿದು ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ಪ್ರಮುಖ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಪರಮೇಶ್ವರ್ ಅವರೊಂದಿಗೆ ಮಾತುಕತೆ ನಡೆಸಿ ಅವರ ಕ್ಷೇಮ ವಿಚಾರಿಸಿದ್ದಾರೆ. ವೈದ್ಯರ ಸಕಾಲಿಕ ಚಿಕಿತ್ಸೆ ಹಾಗೂ ಎಂಎಲ್‌ಸಿ ಗೋವಿಂದರಾಜು ಅವರ ಸಮಯಪ್ರಜ್ಞೆಯಿಂದಾಗಿ ಯಾವುದೇ ಅನಾಹುತ ಸಂಭವಿಸದೆ ಡಿಸಿಎಂ ಪರಮೇಶ್ವರ್ ಅವರು ಅಪಾಯದಿಂದ ಪಾರಾಗಿದ್ದು, ಸದ್ಯದಲ್ಲೇ ಮನೆಗೆ ಮರಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net