ಹೈಕೋರ್ಟ್ ಆದೇಶದಂತೆ ಕೆ.ಆರ್.ಮಾರುಕಟ್ಟೆ ಬಳಿಯ 230 ಮಳಿಗೆಗಳ ತೆರವು

kr-market
kr-market
Published on

ಪ್ರಮುಖ ಮುಖ್ಯಾಂಶಗಳು

  • ಪಾದಚಾರಿ ಮಾರ್ಗಗಳ ಒತ್ತುವರಿ ತೆರವಿಗೆ ಬೃಹತ್​​ ಕಾರ್ಯಾಚರಣೆ
  • ವರ್ತಕರ ವಿರೋಧ, ಪರ್ಯಾಯ ವ್ಯವಸ್ಥೆ ಕಲ್ಪಿಸಲು ಒತ್ತಾಯ
  • ಅನಧಿಕೃತ ಒತ್ತುವರಿ ಸಹಿಸಲ್ಲ ಎಂದು ಪಾಲಿಕೆ ಮುಖ್ಯಸ್ಥರ ಗುಡುಗು

ಬೆಂಗಳೂರು: ಪಂಚ ಪಾಲಿಕೆಗಳ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾದ ತಿಂಗಳ ಬಳಿಕ ಬುಧವಾರ, ಕೆ.ಆರ್.ಮಾರುಕಟ್ಟೆ ಆಸುಪಾಸು ಬೃಹತ್ ಪ್ರಮಾಣದ ಒತ್ತುವರಿ ತೆರವುಗೊಳಿಸಲಾಯಿತು. ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಬೆಂಗಳೂರು ಕೋಟೆ, ವಿಕ್ಟೋರಿಯಾ ಆಸ್ಪತ್ರೆ ಕಾಂಪೌಂಡ್‌ಗೆ ಹೊಂದಿಕೊಂಡಂತೆ ಹಾಗೂ ಮೈಸೂರು ರಸ್ತೆ ಮೇಲ್ಸೇತುವೆಯ ಕೆಳ ಭಾಗದಲ್ಲಿ ನಿರ್ಮಿಸಿದ್ದ 230 ಅನಧಿಕೃತ ಮಳಿಗೆ/ಶೆಡ್‌ಗಳನ್ನು ಕೇಂದ್ರ ನಗರ ಪಾಲಿಕೆ ಸಂಪೂರ್ಣವಾಗಿ ಕಿತ್ತೆಸೆದಿದೆ.

ಈ ಪ್ರದೇಶದಲ್ಲಿ 2 ದಶಕದಿಂದಲೂ ಫುಟ್‌ಪಾತ್ ಮೇಲೆ ನೂರಾರು ಮಳಿಗೆಗಳನ್ನು ನಿರ್ಮಿಸಿಕೊಂಡು ವರ್ತಕರು ವ್ಯಾಪಾರ ಮಾಡುತ್ತಿದ್ದರು. ಸಾರ್ವಜನಿಕರಿಗೆ ನಡೆದಾಡಲು ಜಾಗ ಇಲ್ಲದಂತೆ ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದ ಪರಿಣಾಮ ಜನರು ರಸ್ತೆಯಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿಂದೆ ಒತ್ತುವರಿದಾರರನ್ನು ಹೊರಹಾಕಲು ಬಿಬಿಎಂಪಿ ಹಾಗೂ ಜಿಬಿಎ ಪ್ರಯತ್ನಿಸಿದ್ದರೂ, ಸಫಲತೆ ಕಂಡಿರಲಿಲ್ಲ.
ಇತ್ತೀಚಿಗೆ ಸುಪ್ರೀಂಕೋರ್ಟ್ ಪಾದಚಾರಿ ಮಾರ್ಗಗಳನ್ನು ಒತ್ತುವರಿಮುಕ್ತಗೊಳಿಸುವುದು ಸ್ಥಳೀಯಾಡಳಿತ ಜವಾಬ್ದಾರಿ ಎಂದು ಆದೇಶ ಮಾಡಿತ್ತು. ಜತೆಗೆ ಕೆಲ ವರ್ತಕರು ನ್ಯಾಯಾಲಯದ ಮೊರೆ ಹೋಗಿದ್ದರೂ, ಒತ್ತುವರಿದಾರರು ಜಾಗ ಖಾಲಿ ಮಾಡಲೇಬೇಕು ಎಂದು ಕಳೆದ ಜು.17ರಂದು ಹೈಕೋರ್ಟ್​​ ನಿರ್ದೇಶಿಸಿತ್ತು. ಈ ಗಡುವಿನೊಳಗೆ ಸ್ವಯಂ ತೆರವು ಮಾಡಿದ್ದಲ್ಲಿ ಮಳಿಗೆಗಳ ಫ್ರೇಮ್ ಸಹಿತ ಇತರ ವಸ್ತುಗಳನ್ನು ತೆಗೆದುಕೊಂಡುಹೋಗಬಹುದು. ಜತೆಗೆ ಬೆಸ್ಕಾಂ ಅಳವಡಿಸಿರುವ ಮೀಟರ್ ಹಿಂದಿರುಗಿಸಿ ಠೇವಣಿ ಹಣ ವಾಪಸ್ ಪಡೆಯಲು ಅವಕಾಶ ನೀಡಲಾಗಿತ್ತು. ಅಲ್ಲದೆ ಅರ್ಹ ವ್ಯಾಪಾರಿಗಳಿಗೆ ಅನ್ಯ ಸ್ಥಳದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಪಾಲಿಕೆಯು ಸಮಿತಿ ರಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಸೂಚಿಸಿತ್ತು. ಗಡುವು ಪೂರ್ಣಗೊಳ್ಳುತ್ತಿದ್ದಂತೆ ಕಾರ್ಪೋರೇಷನ್ ಸಿಬ್ಬಂದಿ ಜೆಸಿಬಿ ಯಂತ್ರಗಳನ್ನು ಬಳಸಿ ಮಳಿಗೆ/ಶೆಡ್‌ಗಳನ್ನು ತೆರವುಗೊಳಿಸಿದೆ.

ಕಾರ್ಯಾಚರಣೆ ವೇಳೆ ಹೈಡ್ರಾಮಾ:

ಸದಾ ಜನಜಂಗುಳಿ ಕಾಣಸಿಗುವ ಕೆ.ಆರ್.ಮಾರುಕಟ್ಟೆ ಆಸುಪಾಸು ಫುಟ್‌ಪಾತ್ ಒತ್ತುವರಿ ತೆರವು ಕಾರ್ಯವನ್ನು ಸ್ವತ: ಕೇಂದ್ರ ಪಾಲಿಕೆ ಆಯುಕ್ತ ಜಿ.ಜಗದೀಶ್ ವಹಿಸಿದ್ದರು. ಬೃಹತ್ ಕಾರ್ಯಾಚರಣೆ ಹಿನ್ನೆಲೆ 150ಕ್ಕೂ ಹೆಚ್ಚು ಪೊಲೀಸರನ್ನು ಬಳಸಿಕೊಳ್ಳಲಾಯಿತು. ತೆರವು ವೇಳೆ ವರ್ತಕರು ಪಾಲಿಕೆ ಕ್ರಮವನ್ನು ವಿರೋಧಿಸಿದರು. ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಪಟ್ಟು ಹಿಡಿದರು. ಜತೆಗೆ ಹಲವು ಮಹಿಳಾ ವ್ಯಾಪಾರಿಗಳು ಅಧಿಕಾರಿ ಹಾಗೂ ಪೊಲೀಸರ ಮುಂದೆ ಕಣ್ಣೀರು ಹಾಕಿದರು. ಅಧಿಕಾರಿಗಳು ವರ್ತಕರನ್ನು ಸಮಾಧಾನಪಡಿಸಲು ಹರಸಾಹಸಪಟ್ಟರು. ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದ್ದು, ನಿಮಗೆ ಸೇರಿದ ವಸ್ತುಗಳನ್ನು ಒತ್ತೊಯ್ಯಲು ಅಡ್ಡಿಯಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು. ಇದರ ಹೊರತಾಗಿಯೂ ಹಲವು ವ್ಯಾಪಾರಿಗಳು ತಮ್ಮ ಮಳಿಗೆಗಳನ್ನು ಕಿತ್ತೆಸೆಯದಂತೆ ಅಧಿಕಾರಿಗಳ ದುಂಬಾಲು ಬಿದ್ದರು. ಕಾರ್ಯಾಚರಣೆಗೆ 60 ಕಾರ್ಮಿಕರು, 6 ಜೆಸಿಬಿ, 10 ಟ್ರ್ಯಾಕ್ಟರ್ ಹಾಗೂ 4 ಟಿಪ್ಪರ್‌ಗಳನ್ನು ಬಳಸಿಕೊಳ್ಳಲಾಯಿತು ಎಂದು ಆಯುಕ್ತರು ತಿಳಿಸಿದರು.


ಅವಶೇಷ ಸಾಗಿಸಲು ಹರಸಾಹಸ:

ತೆರವು ಕಾರ್ಯಾಚರಣೆಯಲ್ಲಿ ನೂರಾರು ಮಳಿಗೆ/ಶೆಡ್‌ಗಳನ್ನು ಕಿತ್ತೆಸೆದ ಪರಿಣಾಮ ಅಪಾರ ಪ್ರಮಾಣದ ಅವಶೇಷ ಸೃಷ್ಟಿಯಾಯಿತು. ನೂರಾರು ಗಡಡಿನ ಶೀಟ್‌ಗಳು, ಕಬ್ಬಣ ಸಾಮಗ್ರಿ ಸಹಿತ ಇತರ ವಸ್ತುಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿದ್ದವು. ಇವುಗಳಲ್ಲಿ ತಮಗೆ ಸೇರಿದ ಪರಿಕರಗಳನ್ನು ಹೊರಸಾಗಿಸಲು ವರ್ತಕರು ಸಂಜೆಯವರೆಗೂ ನಿರತರಾಗಿದ್ದರು. ಪಾಲಿಕೆ ಸಿಬ್ಬಂದಿ/ಕಾರ್ಮಿಕರು ಕೂಡ ಮಳಿಗೆ ತೆರವಿಗೆ ಹರಸಾಹಸಪಟ್ಟರು.

ಮೇಲ್ಸೇತುವೆಗೆ ಡ್ರಿಲ್, ವೆಲ್ಡಿಂಗ್?:

ವಿಕ್ಟೋರಿಯಾ ಆಸ್ಪತ್ರೆಯ ಕಾಂಪೌಂಡ್ ಹಾಗೂ ಮೈಸೂರು ರಸ್ತೆಯ ಮೇಲ್ಸೇತುವೆಯ ಕೆಳಭಾಗದಲ್ಲಿ ನೂರಾರು ಸಂಖ್ಯೆಯ ಶೆಡ್‌ಗಳನ್ನು ನಿರ್ಮಿಸಿಕೊಳ್ಳಲಾಗಿತ್ತು. ಮೇಲ್ಸೇತುವೆ ಕಂಬಕ್ಕೆ ಡ್ರಿಲ್ ಮಾಡಿ ಕಬ್ಬಿಣದ ರಾಡುಗಳನ್ನು ವೆಲ್ಡಿಂಗ್ ಮಾಡಿ ಶಾಶ್ವತ ಮಳಿಗೆಗಳಾಗಿ ನಿರ್ಮಿಸಿಕೊಳ್ಳಲಾಗಿತ್ತು. ಇವುಗಳನ್ನು ಕಿತ್ತೊಗೆಯಲು ಕಾರ್ಮಿಕರು ಶ್ರಮಪಟ್ಟರು.

ಸುರಂಗ ಪಾದಚಾರಿ ಮಾರ್ಗಕ್ಕೆ ಅಡ್ಡಿ:

ಕೆ.ಆರ್.ಮಾರುಕಟ್ಟೆ ಸಿಗ್ನಲ್ ಬಳಿಯಿರುವ ಬಸ್ ನಿಲ್ದಾಣದಿಂದ ವಿಕ್ಟೋರಿಯಾ ಆಸ್ಪತ್ರೆಗೆ ತೆರಳಲು ದಶಕಗಳ ಹಿಂದೆಯೇ ಸುರಂಗ ಪಾದಚಾರಿ ಮಾರ್ಗವನ್ನು ನಿರ್ಮಿಸಲಾಗಿದೆ. ಆದರೆ, ಆಸ್ಪತ್ರೆಯತ್ತ ತೆರಳುವ ಕಡೆ ಮಳಿಗೆಗಳನ್ನು ನಿರ್ಮಿಸಿಕೊಂಡಿದ್ದರಿಂದ ಸಾರ್ವಜನಿಕರು ಆ ಕಡೆ ತೆರಳಲು ಸಾಧ್ಯವಾಗದೆ ವಾಹನಗಳ ಮಧ್ಯೆಯೇ ನುಸುಳಿ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

ಸರಾಗ ಓಡಾಟಕ್ಕೆ ಅವಕಾಶ ಕಲ್ಪಿಸಿ:

ಮಾರ್ಕೆಟ್ ಸುತ್ತಮುತ್ತ ಒಂದು ಕಡೆಯಿಂದ ಇನ್ನೊಂದು ಕಡೆಗೆ ರಸ್ತೆದಾಟಿ ಹೋಗಲು ಸಾಧ್ಯವಾಗುತ್ತಿಲ್ಲ. ಸಿಗ್ನಲ್ ಇದ್ದರೂ, ರಸ್ತೆದಾಟಲು ಆಗುತ್ತಿಲ್ಲ. ಸುರಂಗ ಮಾರ್ಗ ಇದ್ದರೂ, ಜನರು ಬಳಸುತ್ತಿಲ್ಲ. ರಾತ್ರಿ ವೇಳೆ ಒಬ್ಬರೇ ತೆರಳಲು ಭಯವಾಗುತ್ತದೆ. ಸೂಕ್ತ ಭದ್ರತೆ ಒದಗಿಸಿ ಸುರಂಗ ಮಾರ್ಗದಲ್ಲೇ ನಾಗರಿಕರು ಓಡಾಡಿದರೆ ಸಿಗ್ನಲ್‌ನಲ್ಲಿ ಅನಗತ್ಯ ದಟ್ಟಣೆ ನಿವಾರಿಸಬಹುದು. ಈ ಬಗ್ಗೆ ಪಾಲಿಕೆ ಹಾಗೂ ಸಂಚಾರ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಹಲವು ಸಾರ್ವಜನಿಕರು ಆಗ್ರಹಿಸಿದರು.
"

ಕೆ.ಆರ್.ಮಾರುಕಟ್ಟೆ ಮುಖ್ಯರಸ್ತೆಯ ಫುಟ್‌ಪಾತ್‌ಗಳಲ್ಲಿ ಯಾರಿಗೂ ಗುರುತಿನ ಚೀಟಿ ನೀಡಿಲ್ಲ. ತೆರವು ಮಾಡಲಾದ ಮಳಿಗೆಗಳ ವರ್ತಕರಿಗೆ ಈ ಮೊದಲೇ ನೋಟಿಸ್ ನೀಡಲಾಗಿತ್ತು. ಹೈಕೋರ್ಟ್ ಆದೇಶ ಅನ್ವಯವೇ ತೆರವುಗೊಳಿಸಲಾಗಿದೆ. ಪರ್ಯಾಯ ವ್ಯವಸ್ಥೆ ಬಗ್ಗೆ ಸಮಿತಿಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಯಾರೇ ಆದರೂ ಪಾದಚಾರಿ ಮಾರ್ಗಗಳಲ್ಲಿ ಅನಧಿಕೃತವಾಗಿ ಮಳಿಗೆ ನಿರ್ಮಿಸಿದ್ದಲ್ಲಿ ಮುಲಾಜಿಲ್ಲದೆ ತೆರವುಗೊಳಿಸಲಾಗುವುದು.

- ಜಿ.ಜಗದೀಶ್, ಕೇಂದ್ರ ನಗರ ಪಾಲಿಕೆಯ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net