ರಾಜಧಾನಿ ಅಭಿವೃದ್ಧಿ ಮತ್ತೆ ಹಳಿಗೆ ಬರುವ ನಿರೀಕ್ಷೆ

gba election date
gba election date
Published on

ಪ್ರಮುಖ ಮುಖ್ಯಾಂಶಗಳು

  • 68 ತಿಂಗಳ ಬಳಿಕ ನಗರ ಸ್ಥಳೀಯಾಡಳಿತಕ್ಕೆ ಚುನಾವಣೆ
  • ಮಳೆಗಾಲದಲ್ಲೇ ಎಲೆಕ್ಷನ್ ಚಟುವಟಿಕೆ ಧಾವಂತಕ್ಕೆ ಮುನ್ನುಡಿ
  • ದಿಢೀರ್ ನಿರ್ಧಾರದಿಂದ ರಾಜಕೀಯ ಪಕ್ಷಗಳಲ್ಲಿ ಸಂಚಲನ
ಬೆಂಗಳೂರು: ದೇಶದ ಅತಿದೊಡ್ಡ ನಗರ ಸ್ಥಳೀಯಾಡಳಿತ ಖ್ಯಾತಿಯ ಬೆಂಗಳೂರು ಮಹಾನಗರಕ್ಕೆ ಕೊನೆಗೂ ಚುನಾಯಿತ ಸದಸ್ಯರ ಆಡಳಿತ ವ್ಯವಸ್ಥೆಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ರಾಜ್ಯ ಚುನಾವಣಾ ಆಯೋಗ, ಎಲೆಕ್ಷನ್ ನಡೆಸುವ ನಿರ್ಧಾರ ಕೈಗೊಂಡಿರುವುದು ಹಳಿತಪ್ಪಿರುವ ರಾಜಧಾನಿಯ ಅಭಿವೃದ್ಧಿ ಮತ್ತೆ ಹಳಿಗೆ ಮರಳುವ ನಿರೀಕ್ಷೆ ಮೂಡಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ಆಡಳಿತ ದೃಷ್ಟಿಯಿಂದ ಗ್ರೇಟರ್ ಬೆಂಗಳೂರು ಪರಿಕಲ್ಪನೆಗೆ ಮೇಲ್ದರ್ಜೆಗೇರಿಸುವ ಸರ್ಕಾರದ ನಿರ್ಧಾರದಿಂದಾಗಿ ಬೆಂಗಳೂರು ಕಾರ್ಪೋರೇಷನ್ ಐದೂವರೆ ವರ್ಷ (68 ತಿಂಗಳು) ಚುನಾಯಿತ ಸದಸ್ಯರಿಲ್ಲದೆ ಬಸವಳಿದಿದೆ. ಇದರಿಂದ ಜನತೆ ತಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳದ ಕಾರಣ ವಾರ್ಡ್ ಅಭಿವೃದ್ಧಿ ಸಂಪೂರ್ಣ ಸ್ಥಗಿತಗೊಂಡಿತು. ಅಧಿಕಾರಿಗಳ ದರ್ಬಾರ್‌ನಲ್ಲಿ ಒಂದಿಷ್ಟು ಕೆಲಸಗಳು ನಡೆದಿದ್ದರೂ, ಬಹುತೇಕ ಪ್ರದೇಶಗಳಲ್ಲಿ ಮೂಲಸೌಕರ್ಯ ಇಲ್ಲದೆ ಕಳಾಹೀನ ಸ್ಥಿತಿ ಕಾಣುವಂತಾಗಿದೆ. ಸರ್ಕಾರದ ಇಚ್ಛಾಶಕ್ತಿ ಕೊರತೆ ಹಾಗೂ ಇನ್ನಿತರ ಕಾರಣದಿಂದ ಚುನಾವಣೆ ವಿಳಂಬ ಆಗಿದ್ದು ನಿಜ. ಇದನ್ನು ಸಮರ್ಥಿಸಿಕೊಳ್ಳಲು ರಾಜಕೀಯ ಪಕ್ಷಗಳಿಗೆ ಇಷ್ಟವಿಲ್ಲದಿದ್ದರೂ, ಈಗ ಎಲೆಕ್ಷನ್‌ಗಾಗಿ ಗಡಿಬಿಡಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಸೃಷ್ಟಿಯಾಗಿದೆ.

ದಿಢೀರ್ ಘೋಷಣೆ ಏಕೆ?:

ನಗರ ಪಾಲಿಕೆಗಳಿಗೆ ಚುನಾವಣೆ ನಡೆಸುವ ಸಂಬಂಧ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಸುದೀರ್ಘ ವಿಚಾರಣೆ ಬಳಿಕ ಜೂನ್ 30ರೊಳಗೆ ಎಲೆಕ್ಷನ್ ನಡೆಸುವಂತೆ ಸರ್ವೋಚ್ಛ ನ್ಯಾಯಾಲಯ ಗಡುವು ನಿಗದಿಗೊಳಿಸಿ ಆದೇಶ ಮಾಡಿತು. ಇದಕ್ಕೂ ಕೂಡ ನೆಪ ಹೇಳಿ ಚುನಾವಣೆ ಮುಂದೂಡುವ ಯತ್ನ ನಡೆಯಿತು. ಪ್ರಸ್ತುತ ನಡೆದಿರುವ ಜನಗಣತಿಯ ಮನೆ ಮನೆ ಸಮೀಕ್ಷೆ ಹಾಗೂ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್) ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಿರುವುದರಿಂದ ಜೂನ್ ಬದಲು ಅಕ್ಟೋಬರ್‌ಗೆ ಎಲೆಕ್ಷನ್ ಮುಂದಕ್ಕೆ ಹಾಕುವಂತೆ ನಗರ ಜಿಲ್ಲಾಧಿಕಾರಿ ಇತ್ತೀಚಿಗಷ್ಟೇ ಆಯೋಗಕ್ಕೆ ಪತ್ರ ಬರೆದಿದ್ದರು. ಇದಕ್ಕೆ ಜಿಬಿಎ ಮುಖ್ಯಸ್ಥರು ಸಹಮತ ವ್ಯಕ್ತಪಡಿಸಿದ್ದರು. ಆದರೆ, ಮುಂದಿನ ವಾರ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ವಿಚಾರಣೆಗೆ ಬರಲಿರುವ ಹಿನ್ನೆಲೆ, ಮತ್ತೊಮ್ಮೆ ಗಡುವು ವಿಸ್ತರಿಸುವಂತೆ ಕೋರಿದ್ದಲ್ಲಿ ನ್ಯಾಯಾಂಗ ನಿಂದನೆ ಕೇಸ್ ಹಾಕುವ ಸಾಧ್ಯತೆಯನ್ನು ಸರ್ಕಾರ ಹಾಗೂ ಆಯೋಗವು ಗಮನಿಸಿ ಅನಿವಾರ್ಯವಾಗಿ ಎಲೆಕ್ಷನ್ ನಿರ್ಧರಿಸುವ ನಡೆಯನ್ನು ಆಯ್ಕೆ ಮಾಡಿಕೊಂಡಿದೆ.

ಬ್ರ್ಯಾಂಡ್ ಬೆಂಗಳೂರು; ಅಭಿವೃದ್ಧಿಗೆ ಊರುಗೋಲು

ರಾಜಧಾನಿಗೆ ವಿಶ್ವದರ್ಜೆಯ ಮೂಲಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರ 1 ಲಕ್ಷ ಕೋಟಿ ರೂ. ಮೊತ್ತದ ಬೃಹತ್ ಯೋಜನೆಗಳನ್ನು ಒಳಗೊಂಡ ನೀಲಿನಕ್ಷೆ ರೂಪಿಸಿದೆ. ಇವುಗಳಲ್ಲಿ ಕೆಲವವನ್ನು ಮಾತ್ರ ಆರಂಭದಲ್ಲಿ ಜಾರಿಗೆ ತರಲು ಒಪ್ಪಿಗೆ ನೀಡಿದೆ. ಮುಂದಿನ ದಿನಗಳಲ್ಲಿ ವಿವಿಧ ಮೂಲಗಳಿಂದ ಸಂಪನ್ಮೂಲ ಸಂಗ್ರಹಿಸಿ ಆ ಎಲ್ಲ ಪ್ರಾಜೆಕ್ಟ್‌ಗಳನ್ನು ಜಾರಿಗೊಳಿಸುವುದಾಗಿ ಬೆಂಗಳೂರು ನಗರ ಅಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಪಾದಿಸುತ್ತಲೇ ಬಂದಿದೆ. ಈ ಯೋಜನೆಗಳೇ ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಅನುಷ್ಠಾನಕ್ಕೆ ತರುವ ಆಶಯವನ್ನು ಸರ್ಕಾರ ಪ್ರಕಟಿಸಿರುವುದು ಮೂಲಸೌಕರ್ಯ ಕೊರತೆ ನೀಗಿಸುವ ಆಶಾಭಾವ ಮೂಡಿಸಿದೆ.

ಜೂ.18 ಅಥವಾ 20ಕ್ಕೆ ಚುನಾವಣೆ?

ರಾಜ್ಯ ಚುನಾವಣಾ ಆಯೋಗ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಜೂ.14ರಿಂದ 24ರೊಳಗೆ ಸೂಕ್ತ ದಿನಾಂಕದಂತೆ ಎಲೆಕ್ಷನ್ ನಡೆಸುವುದಾಗಿ ಹೇಳಿದೆ. ಇದಕ್ಕೆ ಸಭೆಯಲ್ಲಿ ಹಾಜರಿದ್ದ ಸರ್ಕಾರದ ಪ್ರತಿನಿಧಿಗಳು ಸಹಮತ ವ್ಯಕ್ತಪಡಿಸಿದ್ದಾರೆ. ಚುನಾವಣೆಗೆ ಬಾಕಿ ಉಳಿದಿರುವ ಸಿದ್ಧತೆ ನಡೆಸಿ ಮತದಾನ ದಿನಾಂಕ ನಿಗದಿಗೆ ಜೂ.18 (ಗುರುವಾರ) ಅಥವಾ ಜೂ.20 (ಶನಿವಾರ) ಆಯೋಗ ಚಿತ್ತ ಹರಿಸಿದೆ ಎಂದು ಮೂಲಗಳು ತಿಳಿಸಿವೆ.

ಸಿದ್ಧತೆ ಬಹುತೇಕ ಪೂರ್ಣ:

ಈಗಾಗಲೇ ಐದೂ ಪಾಲಿಕೆಗಳ ವ್ಯಾಪ್ತಿಯಲ್ಲಿ ವಾರ್ಡ್‌ವಾರು ವಿಂಗಡಣೆ, ಮೀಸಲು ನಿಗದಿ, ಮತದಾರರ ಪಟ್ಟಿ ಅಂತಿಮಗೊಳಿಸಲಾಗಿದೆ. ಹೊಸದಾಗಿ ಮತಪಟ್ಟಿಗೆ ಸೇರುವವರಿಗೂ ಅವಕಾಶ ನೀಡಲಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಮತದಾನ/ಮತ ಎಣಿಕೆಗೆ ಪೂರಕವಾದ ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ಕೇಂದ್ರಗಳನ್ನು ಅಂತಿಮಗೊಳಿಸುವಂತೆ ಆಯೋಗವು ಜಿಬಿಎ ಮುಖ್ಯಸ್ಥರಿಗೆ ಸೂಚಿಸಿದೆ. ಹಾಗಾಗಿ ಕಾರ್ಪೋರೇಷನ್ ಎಲೆಕ್ಷನ್ ಮಳೆಗಾಲದಲ್ಲೇ ನಡೆಯುವ ಸಾಧ್ಯತೆ ಹೆಚ್ಚಿದೆ.

ಪಾಲಿಕೆಗಳ ವಾರ್ಡ್ ಸಂಖ್ಯೆ ವಿವರ:

ಉತ್ತರ ಪಾಲಿಕೆ - 72
ದಕ್ಷಿಣ ಪಾಲಿಕೆ - 72
ಪೂರ್ವ ಪಾಲಿಕೆ - 50
ಪಶ್ಚಿಮ ಪಾಲಿಕೆ - 63
ಕೇಂದ್ರ ಪಾಲಿಕೆ - 112
ಒಟ್ಟು - 369

ಇವಿಎಂ ಬದಲು ಬ್ಯಾಲೆಟ್ ಪೇಪರ್:

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ಬದಲು ಮತಪತ್ರ ಬಳಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಕಾಯ್ದೆಗೂ ತಿದ್ದುಪಡಿ ತಂದಿದೆ. ರಾಜ್ಯ ಚುನಾವಣಾ ಆಯೋಗ ಕೂಡ ಮತಪತ್ರ ಬಳಸಲು ಸಹಮತ ವ್ಯಕ್ತಪಡಿಸಿರುವುದರಿಂದ ಪಂಚ ಪಾಲಿಕೆಗಳಲ್ಲಿ ಮತಪತ್ರದ ಮುಲಕವೇ ಎಲೆಕ್ಷನ್ ನಡೆಯುವುದು ಖಚಿತವಾಗಿದೆ.ರಾಜಧಾನಿ ಅಭಿವೃದ್ಧಿ ಮತ್ತೆ ಹಳಿಗೆ ಬರುವ ನಿರೀಕ್ಷೆ ಇದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net