ಪ್ರತಿ ವಾರ್ಡ್‌ನಲ್ಲಿ 10 ಕಿ.ಮೀ ಫುಟ್‌ಪಾತ್ ನಿರ್ಮಿಸಿ

footpath
footpath
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಸ್.ಸುರೇಶ್‌ಕುಮಾರ್ ಅವರಿಂದ ಅಧಿಕಾರಿಗಳಿಗೆ ಸೂಚನೆ
ಬೆಂಗಳೂರು: ರಾಜಾಜಿನಗರ ಮತಕ್ಷೇತ್ರದ ಎಲ್ಲ ವಾರ್ಡ್‌ಗಳಲ್ಲಿ ತಲಾ 10 ಕಿ.ಮೀ. ಫುಟ್‌ಪಾತ್ ನಿರ್ಮಿಸಬೇಕು. ಹಾಳಾಗಿರುವ ಆಟದ ಮೈದಾನಗಳನ್ನು ಸುಸ್ಥಿತಿಯಲ್ಲಿಡುವ ಜತೆಗೆ ಹಾಳಾಗಿರುವ ರಸ್ತೆ ಅಭಿವೃದ್ಧಿಪಡಿಸುವಂತೆ ಶಾಸಕ ಎಸ್. ಸುರೇಶ್ ಕುಮಾರ್ ಅವರು ಪಶ್ಚಿಮ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ರಾಜಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಗಳಿಗೆ ಸಂಬಂಧಿಸಿದ ಸಮಸ್ಯೆ ಹಾಗೂ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಫುಟ್‌ಪಾತ್ ಹಾಗೂ ರಸ್ತೆ ಅಭಿವೃದ್ಧಿ ಕಾರ್ಯವನ್ನು ಆದ್ಯತೆಯ ಮೇರೆಗೆ ಕೈಗೊಳ್ಳುವಂತೆ ಸೂಚಿಸಿದರು.
ಶ್ರೀರಾಮಪುರದಲ್ಲಿರುವ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ವರ್ಗಕ್ಕೆ ಶೇ.50 ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವ ಅಂಬೇಡ್ಕರ್ ಡೇ ಕೇರ್ ಸೆಂಟರ್‌ನಲ್ಲಿ ಪ್ರಯೋಗಾಲಯ ಸ್ಥಾಪಿಸಲು ಪ್ರಸ್ತಾವನೆ ಇದೆ. ಈ ಕುರಿತು ಕ್ರಮ ಕೈಗೊಳ್ಳುವ ಜತೆಗೆ ಪ್ರಕಾಶನಗರದ ಮರಿಯಪ್ಪನಪಾಳ್ಯದಲ್ಲಿ ಡಯಾಲಿಸಿಸ್ ಕೇಂದ್ರದ ಬಾಕಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳ್ಳುವಂತೆ ಶಾಸಕರು ಆಯುಕ್ತರ ಗಮನಕ್ಕೆ ತಂದರು.

ಸರಕಾರಿ ಸ್ವತ್ತುಗಳ ಜವಾಬ್ದಾರಿ ವಹಿಸಿಕೊಳ್ಳಿ:

ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ. ಕೆ.ವಿ. ರಾಜೇಂದ್ರ ಮಾತನಾಡಿ, ರಾಜಾಜಿನಗರ ಮತಕ್ಷೇತ್ರ ವ್ಯಾಪ್ತಿಯ ಶಿಶುವಿಹಾರ, ನಮ್ಮ ಕ್ಲಿನಿಕ್ ಕಟ್ಟಡ ಸೇರಿ ಎಲ್ಲ ಸರಕಾರಿ ಸ್ವತ್ತುಗಳ ಜವಾಬ್ದಾರಿಯನ್ನು ಇಂಜಿನಿಯರಿಂಗ್ ವಿಭಾಗ ತೆಗೆದುಕೊಳ್ಳಬೇಕು. ವಿಭಾಗ ಕಚೇರಿಯ ಬಲ ಸಂವರ್ಧನೆಗೊಳಿಸಲು ತಕ್ಷಣವೇ ಮುಂದಾಗಬೇಕು. ನವರಂಗ್ ಅಂಡರ್ ಪಾಸ್‌ನಲ್ಲಿ ನೀರು ಸೋರಿಕೆ ಸರಿಪಡಿಸಿ ಸೌಂದರ್ಯಿಕರಣಕ್ಕೆ ಕ್ರಮ ಕೈಗೊಳ್ಳಬೇಕು. ಎನ್‌ಪಿಎಸ್ ಅಂಡರ್‌ಪಾಸ್‌ನಲ್ಲಿ ಖಾಲಿಯಿರುವ ಜಾಗವನ್ನು ಆಟದ ಸ್ಥಳವಾಗಿ (ಬಾಸ್ಕೆಟ್ ಬಾಲ್/ಕಬಡ್ಡಿ ಅಥವಾ ಇತರ) ಕ್ರೀಡಾಸಕ್ತರು ಸದ್ಬಳಕೆ ಮಾಡಿಕೊಳ್ಳುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಯುಕ್ತರು ನಿರ್ದೇಶಿಸಿದರು.
ಸಭೆಯಲ್ಲಿ ಪಶ್ಚಿಮ ಪಾಲಿಕೆಯ ಜಂಟಿ ಆಯುಕ್ತ ಸಂಗಪ್ಪ, ಮುಖ್ಯ ಅಭಿಯಂತರ ಬಸವರಾಜ್ ಕಬಾಡೆ, ಆರೋಗ್ಯಾಧಿಕಾರಿ ಡಾ. ಮನೋರಂಜನ್ ಹೆಗ್ಡೆ ಹಾಗೂ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.
ವಾರ್ಡ್ ಆರೋಗ್ಯ ಪರಿವೀಕ್ಷಕರು, ವಾರ್ಡ್ ಇಂಜಿನಿಯರ್ ಮತ್ತು ಮಾರ್ಷಲ್‌ಗಳು ವಾರ್ಡ್‌ನಲ್ಲಿ ಓಡಾಡಿ ಪೌರಕಾರ್ಮಿಕ ಸಮಸ್ಯೆಗಳನ್ನು ನಿವಾರಿಸಲು ಯೋಜನೆ ರೂಪಿಸಬೇಕು. ಬ್ಲ್ಯಾಕ್ ಸ್ಪಾಟ್ ತೆರವು ಆಗಬೇಕು ಎಂದು ಶಾಸಕರು ಸೂಚಿಸಿದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಆಯುಕ್ತರು, ಪೌರಕಾರ್ಮಿಕ ವಿಷಯಗಳಿಗೆ ಸಂಬಂಧಿಸಿ ಕ್ರಮ ಕೈಗೊಳ್ಳಲಾಗುವುದು. ಪ್ರಮುಖ ರಸ್ತೆ, ವಾರ್ಡ್ ರಸ್ತೆಗಳ ಸ್ವಚ್ಛತೆ ಕುರಿತಂತೆ ಪಾಲಿಕೆಯ ಬೈಲಾದಲ್ಲಿ ಉಲ್ಲೇಖಿಸಿದಂತೆ ರಸ್ತೆಗಳ ಆದ್ಯತಾನುಸಾರ ಸ್ವಚ್ಛತೆ ಬಗ್ಗೆ ಮೈಕ್ರೋ ಪ್ಲ್ಯಾನ್ ಮಾಡಿ, ಅನುಷ್ಠಾನಗೊಳಿಸುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net