ಮಾರ್ಚ್​​ ತಿಂಗಳಾಂತ್ಯಕ್ಕೆ 5 ಪಾಲಿಕೆಗಳ ಬಜೆಟ್

5 municipalities
5 municipalities
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರದ ಅನುದಾನ ಆಧರಿಸಿ ಕಾರ್ಯಕ್ರಮಗಳ ಸೇರ್ಪಡೆ
  • ತಲಾ 4-5 ಸಾವಿರ ಕೋಟಿ ರೂ. ಮೊತ್ತದ ಆಯವ್ಯಯ ಗಾತ್ರ
ಬೆಂಗಳೂರು: ರಾಜ್ಯ ಸರ್ಕಾರದ 2026-27ನೇ ಸಾಲಿನ ಆಯವ್ಯಯ ಮಂಡನೆಯಾದ ಬೆನ್ನಲ್ಲೇ, ಪಂಚ ಪಾಲಿಕೆಗಳ ಬಜೆಟ್ ಈ ತಿಂಗಳಾಂತ್ಯದಲ್ಲಿ ಮಂಡಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸೋಮವಾರದಿಂದ (ಮಾ.9) ಬಜೆಟ್ ಸಿದ್ಧತಾ ಸಭೆಗಳಿಗೆ ಚಾಲನೆ ಸಿಗಲಿದೆ.
ಬಿಬಿಎಂಪಿಯಿಂದ ಐದು ಕಾಪೋರೇಷನ್‌ಗಳಾಗಿ ಪುನಾರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ಪಂಚ ನಗರ ಪಾಲಿಕೆಗಳು ತಮ್ಮ ಚೊಚ್ಚಲ ಆಯವ್ಯಯವನ್ನು ಮಂಡಿಸುವ ಉತ್ಸಾಹದಲ್ಲಿವೆ. ಇದಕ್ಕಾಗಿ ಈಗಾಗಲೇ ಅಧಿಕಾರಿಗಳ ಹಂತದಲ್ಲಿ ಸಿದ್ಧತೆ ಆರಂಭವಾಗಿದೆ. ಸಾರ್ವಜನಿಕರಿಂದಲೂ ಸಲಹೆ/ಸೂಚನೆ ಆಹ್ವಾನಿಸಿದ್ದು, ಅವುಗಳಲ್ಲಿ ಅನುಷ್ಠಾನ ಯೋಗ್ಯವಾದವುಗಳನ್ನು ಅಳವಡಿಸಿಕೊಳ್ಳುವ ಭರವಸೆ ನೀಡಲಾಗಿದೆ. ಈ ಕಾರಣದಿಂದಾಗಿಯೇ ಹಲವು ಸಂಘ-ಸಂಸದ್ಥೆಗಳು, ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು (ಆರ್‌ಡಬ್ಲ್ಯುಎ) ಸುಸ್ಥಿರ ಹಾಗೂ ಪರಿಸರಸ್ನೇಹಿ ಕಾರ್ಯಕ್ರಮಗಳಿಗೆ ಒತ್ತು ನೀಡುವಂತಹ ಕಾರ್ಯಕ್ರಮಗಳನ್ನು ಘೋಷಿಸಲು ಸಲಹೆ ನೀಡಿವೆ. ಜತೆಗೆ ಸ್ಥಳೀಯ ವಾರ್ಡ್‌ಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಮಾದರಿ ಆಡಳಿತ ಅಳವಡಿಸಿಕೊಳ್ಳಲೂ ಮನವಿ ಮಾಡಲಾಗಿದೆ.

4-5 ಸಾವಿರ ಕೋಟಿ ಗಾತ್ರದ ಬಜೆಟ್:

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಐದು ಪಾಲಿಕೆಗಳು ಅಸ್ತಿತ್ವದಲ್ಲಿ ಇರುವುದರಿಂದ ಪ್ರತೀ ಕಾರ್ಪೋರೇಷನ್‌ಗಳೂ ಪ್ರತ್ಯೇಕವಾಗಿಯೇ ಬಜೆಟ್ ಮಂಡಿಸಲಿವೆ. ಈ ಪಂಚ ಪಾಲಿಕೆಗಳು ತಲಾ 4-5 ಸಾವಿರ ಕೋಟಿ ರೂ. ಗಾತ್ರದ ಆಯವ್ಯಯ ಹೊಂದುವ ಸಾಧ್ಯತೆ ಇದೆ. ಹಾಗಾಗಿ ಬೆಂಗಳೂರು ಮಹಾನಗರಕ್ಕೆ ಐದು ಬಜೆಟ್ ಸಿಗಲಿವೆ ಎಂದೇ ಹೇಳಬಹುದು.

ಸಂಪನ್ಮೂಲ ಕ್ರೋಡೀಕರಣ ಸವಾಲು:

ರಾಜ್ಯ ಸರ್ಕಾರ ತನ್ನ ಆಯವ್ಯಯದಲ್ಲಿ ಬೆಂಗಳೂರು ಅಭಿವೃದ್ಧಿಗೆ 7 ಸಾವಿರ ಕೋಟಿ ರೂ. ಅನುದಾನ ಪ್ರಕಟಿಸಿದೆ. ಇದರಲ್ಲಿ ಅರ್ಧದಷ್ಟು ಮಾತ್ರ ಪಾಲಿಕೆಗಳಿಗೆ ನೇರವಾಗಿ ಆರ್ಥಿಕ ನೆರವು ಸಿಗಲಿದೆ. ಉಳಿದ ಹಣವು ಬಿ-ಸ್ಮೈಲ್ ಹಾಗೂ ಘನತ್ಯಾಜ್ಯ ನಿರ್ವಹಣಾ ನಿಗಮಕ್ಕೆ ವರ್ಗಾಯಿಸಲಾಗುತ್ತದೆ. ಹಾಗಾಗಿ ಪಾಲಿಕೆಗಳು ತಮ್ಮ ಸಂಪನ್ಮೂಲವನ್ನು ಗಮನದಲ್ಲಿರಿಸಿಕೊಂಡೇ ಬಜೆಟ್ ರೂಪಿಸಲು ಕಸರತ್ತು ನಡೆಸಬೇಕಿದೆ. ಪ್ರಮುಖ ಯೋಜನೆಗಳು ಹಾಗೂ ಆದ್ಯತಾ ವಲಯಗಳನ್ನು ಗುರುತಿಸಿ ಸೀಮಿತ ಹಣ ಹಂಚಿಕೆ ಮಾಡಬೇಕಾದ ಅನಿವಾರ್ಯತೆ ಕಾರ್ಪೋರೇಷನ್‌ಗಳಿಗೆ ಸವಾಲಿನ ಕೆಲಸವಾಗಲಿದೆ.
ಪಂಚ ಪಾಲಿಕೆಗಳಿಗೆ ಆಸ್ತಿ ತೆರಿಗೆಯೇ ಪ್ರಮುಖ ಆದಾಯ ಮೂಲವಾಗಿದೆ. ಇದರ ಜತೆಗೆ ಜಾಹೀರಾತು ಶುಲ್ಕ, ರಸ್ತೆ ಅಗೆತ ಶುಲ್ಕ, ಉದ್ದಿಮೆ ಪರವಾನಗಿ ಶುಲ್ಕ, ಎ್ಎಆರ್, ಇ-ಖಾತಾ ಶುಲ್ಕ ಸೇರಿ ಸೀಮಿತ ತೆರಿಗೆ ವಸೂಲಾತಿಗೆ ಅವಕಾಶ ಇದೆ. ಈ ಬಾಬ್ತು ಸೇರಿ ಬೆರಳೆಣಿಕೆಯಷ್ಟು ವಿಷಯಗಳಲ್ಲಿ ಮಾತ್ರ ತೆರಿಗೆ ಹಾಕಿ ಬೊಕ್ಕಸ ತುಂಬಿಸಿಕೊಳ್ಳಬಹುದಾಗಿದೆ. ಆದರೆ, ಮೊದಲ ಬಜೆಟ್‌ನಲ್ಲಿ ಸಾರ್ವಜನಿಕರ ಮೇಲೆ ತೆರಿಗೆ ಹಾಕಿದರೆ ಕೆಟ್ಟ ಸಂದೇಶ ರವಾನೆಯಾಗಲಿದೆ ಎಂಬ ಕಾರನಕ್ಕೆ ಹಾಲಿ ಟ್ಯಾಕ್ಸ್ ಪದ್ಧತಿಯನ್ನೇ ಉಳಿಸಿಕೊಂಡು ತೆರಿಗೆ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಲೆಕ್ಕಾಚಾರ ಅಧಿಕಾರಿಗಳ ಮಟ್ಟದಲ್ಲಿ ನಡೆದಿದೆ.

ಡಿಸಿಎಂ ಮಾರ್ಗದರ್ಶನ:

ಪಾಲಿಕೆಗಳ ಬಜೆಟ್‌ಗೆ ಸಿದ್ಧತೆ ಆರಂಭವಾಗಿದ್ದು, ಯುಗಾದಿ ವೇಳೆಗೆ (ಮಾ.19) ಒಂದು ಹಂತಕ್ಕೆ ಬರುವ ಸಾಧ್ಯತೆ ಇದೆ. ಈ ವೇಳೆ ನಗರಾಭಿವೃದ್ಧಿ ಇಲಾಖೆಯ ಎಸಿಎಸ್ ಹಾಗೂ ಡಿಸಿಎಂ ಸಮ್ಮುಖ ಬಜೆಟ್‌ನಲ್ಲಿ ಯಾವ ಅಂಶಗಳಿಗೆ ಒತ್ತು ನೀಡಬೇಕು, ಸಂಪನ್ಮೂಲ ಸಂಗ್ರಹ ಹಾಗೂ ಇತ್ಯಾದಿ ವಿಷಯಗಳ ಬಗ್ಗೆ ಚಿಂತನ-ಮಂಥನ ನಡೆಯಲಿದೆ. ಇಲ್ಲಿ ವ್ಯಕ್ತವಾದ ಅಂಶಗಳನ್ನು ಸಂಗ್ರಹಿಸಿ ಐದೂ ಕಾರ್ಪೋರೇಷನ್‌ಗಳು ಎಷ್ಟು ಮೊತ್ತದ ಆಯವ್ಯಯ ಸಿದ್ಧಪಡಿಸಬೇಕು ಎಂಬುದರ ಬಗ್ಗೆ ತೀರ್ಮಾನವಾಗಲಿದೆ. ಆ ಬಳಿಕ ಮಾರ್ಚ್ ಕೊನೆಯ ವಾರ ಸೂಕ್ತ ದಿನಗಳಂದು ಪ್ರತೀ ಪಾಲಿಕೆಯು ಪ್ರತ್ಯೇಕವಾಗಿ ಬಜೆಟ್ ಪ್ರಕಟಿಸಲಿವೆ ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net