

ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಪ್ನ ಬುಕ್ ಹೌಸ್ ಭಾನುವಾರ (ನ.1) ಬೆಳಗ್ಗೆ 10ಕ್ಕೆ ಗಾಂಧಿನಗರದಲ್ಲಿನ ಮಳಿಗೆಯಲ್ಲಿ ಪುಸ್ತಕ ಜಾತ್ರೆ ಕನ್ನಡ ಬರಹಗಾರರ ಸಮ್ಮಿಲನ ಕಾರ್ಯಕ್ರಮ ಆಯೋಜಿಸಿದೆ.
ರಿಯಾಯಿತಿ ಮೇಳಕ್ಕೆ ಹಿರಿಯ ನಟ ದೊಡ್ಡಣ್ಣ ಚಾಲನೆ ನೀಡಲಿದ್ದು, ಅತಿಥಿಗಳಾಗಿ ವಿದ್ವಾಂಸ ಪ್ರೊ. ಹಂಪ ನಾಗರಾಜಯ್ಯ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಆರ್. ಸುನಂದಮ್ಮ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಡಾ. ಸಿ. ಸೋಮಶೇಖರ್, ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಸಾಹಿತಿಗಳಾದ ಡಾ. ವಸುಂಧರಾ ಭೂಪತಿ, ಡಾ. ಎಚ್.ಎಲ್. ಪುಷ್ಪ, ಡಾ. ಬೈರಮಂಗಲ ರಾಮೇಗೌಡ ಇತರರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಶ್ರೀರಾಮಪುರದ ಲಿಟಲ್ ಫ್ಲವರ್ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಡೊಳ್ಳುಕುಣಿತ ಹಾಗೂ ವಾದ್ಯವೃಂದದವರಿಂದ ಅತಿಥಿಗಳಿಗೆ ಗೌರವ ಅಭಿನಂದನೆ ಸಲ್ಲಿಸಲಾಗುವುದು. ಡಾ. ಅಪ್ಪಗೆರೆ ತಿಮ್ಮರಾಜು ಅವರಿಂದ ಜನಪದ ಗೀತೆ ಮತ್ತು ಭಾವಗೀತೆಗಳ ಗಾಯನ, ಕಾಜಾಣ ತಂಡದಿಂದ ರಂಗ ಸಂಗೀತ, ಮಹಾದೇವಮೂರ್ತಿ ತಂಡದವರಿಂದ ಕಂಸಾಳೆ ಜತೆಗೆ ಎಂ.ಎಸ್. ನರಸಿಂಹಮೂರ್ತಿ, ಎಚ್. ಡುಂಡಿರಾಜ್ ಹಾಗೂ ವೈ.ವಿ. ಗುಂಡುರಾವ್ ಅವರಿಂದ ಹಾಡು ಹರಟೆ ಸಹ ಇರಲಿದೆ.
ಕನ್ನಡ ಪುಸ್ತಕಗಳ ಪ್ರದರ್ಶನ:
ರಾಜ್ಯೋತ್ಸವ ಪ್ರಯುಕ್ತ ನ.1 ರಿಂದ 30ರವರೆಗೆ ಸಪ್ನದ ಎಲ್ಲ ಮಳಿಗೆಗಳಲ್ಲಿ ಕನ್ನಡ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ. ಕನ್ನಡ ಪುಸ್ತಕಗಳಿಗೆ ಶೇ. 10ರಿಂದ ಶೇ. 50 ರಿಯಾಯಿತಿ ನೀಡಲಾಗುತ್ತಿದೆ. ಜತೆಗೆ 500 ರೂ. ಮೇಲ್ಪಟ್ಟ ಕನ್ನಡ ಪುಸ್ತಕಗಳ ನಿವ್ವಳ ಖರೀದಿಗೆ ಸದಸ್ಯತ್ವ ಕಾರ್ಡ್ ನೀಡಲಿದ್ದು, ಇದಕ್ಕೆ ವರ್ಷಪೂರ್ತಿ ಶೇ. 10 ರಿಯಾಯಿತಿ ದೊರೆಯಲಿದೆ. ಕನ್ನಡ ಪುಸ್ತಕಗಳಿಗೆ ಕಾಂಬೋ ಆರ್, ಒಂದು ಕೊಂಡರೆ ಒಂದು ಉಚಿತ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಒಂದು ಕನ್ನಡ ಪುಸ್ತಕದ ಉಡುಗೊರೆ ನೀಡಲಾಗುವುದು ಎಂದು ವ್ಯವಸ್ಥಾಪಕ ನಿದೇರ್ಶಕ ನಿತಿನ್ ಷಾ ತಿಳಿಸಿದ್ದಾರೆ.