ಬಿಡಿಎನಲ್ಲಿ ಬಯೋಮೆಟ್ರಿಕ್ ಹಾಜಾರಾತಿ ಕಡ್ಡಾಯ

biometric attendance
biometric attendance
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿ/ನೌಕರರ ಅಟೆಂಡೆನ್ಸ್ ವೇತನಕ್ಕೆ ಲಿಂಕ್
  • ಸಿಬ್ಬಂದಿಗಳ ಕಳ್ಳಾಟಕ್ಕೆ ಪ್ರಾಧಿಕಾರದ ಆಯುಕ್ತರ ಬ್ರೇಕ್
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ದಲ್ಲಿ ಅಧಿಕಾರಿ/ನೌಕರರ ಹಾಜರಾತಿಗೆ ಮುಖಚರ್ಯೆ ಸಹಿತ ಹಾಜರಾತಿಯನ್ನು ಕಡ್ಡಾಯ ಮಾಡಿದ್ದು, ತಡವಾಗಿ ಬರುವವರಿಗೆ ಶಿಸ್ತುಕ್ರಮದ ಎಚ್ಚರಿಕೆ ನೀಡಲಾಗಿದೆ.
ಪ್ರಾಧಿಕಾರದಲ್ಲಿ ಹಾಲಿ ಬಯೋಮೆಟ್ರಿಕ್ ಪದ್ಧತಿ ಅಸ್ತಿತ್ವದಲ್ಲಿದ್ದರೂ, ಕೆಲ ಅಧಿಕಾರಿ/ಸಿಬ್ಬಂದಿ ಹಾಜರಾತಿ ನಿಯಮವನ್ನು ಉಲ್ಲಂಸುತ್ತಿರುವ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಬಿಡಿಎ ಆಯುಕ್ತ ಪಿ.ಮಣಿವಣ್ಣನ್ ಹೊಸದಾಗಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಇತರ ಕಚೇರಿಗಳಲ್ಲಿ ಅನುಸರಿಸುವ ಹಾಜರಾತಿ ಸಮಯವನ್ನು ಬಿಡಿಎನಲ್ಲೂ ಅಳವಡಿಸಿಕೊಳ್ಳಲಾಗಿದೆ.
ಹೊಸ ಆದೇಶದ ಪ್ರಕಾರ ಹಾಜರಾತಿಯನ್ನು ವೇತನದ ವಹಿಗೆ ಲಿಂಕ್ ಮಾಡಲಾಗಿದೆ. ಇದರಿಂದಾಗಿ ನಿಗದಿತ ಸಮಯಕ್ಕಿಂತ ತಡವಾಗಿ ಬಂದಲ್ಲಿ ವೇತನ ಕಡಿತ ಆಗಲಿದೆ. ಜತೆಗೆ ನೋಟಿಸ್ ಕೂಡ ಜಾರಿ ಮಾಡಲಾಗುತ್ತದೆ. ಬೇಕಾಬಿಟ್ಟಿ ರಜೆ ಪಡೆಯುವುದಕ್ಕೂ ಬ್ರೇಕ್ ಹಾಕಲಾಗಿದೆ. ಮುಖ್ಯವಾಗಿ ಫೀಲ್ಡ್ ವರ್ಕ್ ಹೆಸರಿನಲ್ಲಿ ಕೆಲಸದ ವೇಳೆ ಹೊರಗೆ ಹೋಗುವ ವೇಳೆ ಮ್ಯಾನುಯೆಲ್ ಪದ್ಧತಿಗೆ ಕಡಿವಾಣ ಹಾಕಿದ್ದು, ಅಂತಹವರು ಕೂಡ ಬಯೋಮೆಟ್ರಿಕ್ ಪದ್ಧತಿಯನ್ನೇ ಅನುಸರಿಸಬೇಕಾಗುತ್ತದೆ. ಹೊಸ ನಿಯಮವನ್ನು ಬಿಡಿಎ ಕೇಂದ್ರ ಕಚೇರಿ ಹಾಗೂ ನಾಲ್ಕೂ ವಲಯ ಕಚೇರಿಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರಾಧಿಕಾರದ ಆಯುಕ್ತರು ಸೂಚಿಸಿದ್ದಾರೆ.
ಕಚೇರಿಗಳಲ್ಲಿ ಹಾಜರಿರಲು ಸೂಚನೆ:
ಬಿಡಿಎನ ವಿವಿಧ ವಿಭಾಗಳಲ್ಲಿ ಅಧಿಕಾರಿಗಳು ಹಾಗೂ ನೌಕರರು ಸಾರ್ವಜನಿಕರ ಭೇಟಿ ವೇಳೆ ಸ್ಥಳದಲ್ಲಿ ಇರುವುದಿಲ್ಲ ಎಂಬ ದೂರನ್ನು ನಾಗರಿಕರು ಆಯುಕ್ತರಿಗೆ ನಿರಂತರವಾಗಿ ನೀಡುತ್ತಿದ್ದಾರೆ. ಇದನ್ನಾಧರಿಸಿ ಆಯಾ ವಿಭಾಗದ ಮುಖ್ಯಸ್ಥರಿಗೆ ಆಯುಕ್ತರ ಕಚೇರಿಯಿಂದ ಸೂಚನೆ ನೀಡಿದ್ದು, ಕೆಲಸದ ವೇಳೆ ಕಚೇರಿಯಲ್ಲಿದ್ದು ಕರ್ತವ್ಯದಲ್ಲಿ ನಿರತರಾಗಬೇಕು. ಸಾರ್ವಜನಿಕರು ಅಹವಾಲು ಜತೆಗೆ ಕಡತ ವಿಲೇವಾರಿಯಲ್ಲೂ ಶಿಸ್ತು ಅಳವಡಿಸಿಕೊಳ್ಳಬೇಕು ಎಂದು ಆಯುಕ್ತರು ಎಲ್ಲ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net