

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿರುವ ವಾಹನ ಸವಾರರಿಗೆ ರಾಜ್ಯದ ಸಾರಿಗೆ ಇಲಾಖೆ ಮತ್ತೊಮ್ಮೆ ಶೇ. 50 ರಷ್ಟು ದಂಡಪಾವತಿಗೆ ( Traffic Fines ) ಅವಕಾಶ ನೀಡಿದೆ. ನಿಮ್ಮ ಹತ್ತಿರದ ಸಂಚಾರ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ದಂಡ ಪಾವತಿಸಬಹುದಾಗಿದೆ.
ರಾಜ್ಯದಲ್ಲಿ ಬಾಕಿ ಉಳಿದಿರುವ ಪೊಲೀಸ್ ಇಲಾಖೆಯ ಟ್ರಾಫಿಕ್ ಚಲನ್ ಪ್ರಕರಣಗಳು ಮತ್ತು ಸಾರಿಗೆ ಇಲಾಖೆಗೆ ಸಂಬಂಧಿಸಿದ ಹಳೆಯ ಬಾಕಿ ದಂಡದ ಮೊತ್ತದಲ್ಲಿ ಬರೋಬ್ಬರಿ 50ರಷ್ಟು ರಿಯಾಯಿತಿ ನೀಡಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ.
ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ (E-Challan) ಹಾಗೂ ಸಾರಿಗೆ ಇಲಾಖೆಯಲ್ಲಿ 1991ರಿಂದ 2025ರ ಅವಧಿಯಲ್ಲಿ ದಾಖಲಾಗಿ, ಇದುವರೆಗೆ ಪಾವತಿಸಲು ಬಾಕಿ ಉಳಿದಿರುವ ಎಲ್ಲಾ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ. 50ರಷ್ಟು ವಿನಾಯಿತಿ ಕಲ್ಪಿಸಲು ಆರ್ಥಿಕ ಇಲಾಖೆಯು ಸಂಪೂರ್ಣ ಸಮ್ಮತಿ ಸೂಚಿಸಿದೆ.
ಸವಾರರ ಮೇಲಿನ ದಂಡದ ಹೊರೆ ಇಳಿಸುವ ಈ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಲು ಅನುಕೂಲವಾಗುವಂತೆ ವಿಶೇಷ ಕಾಲಾವಕಾಶವನ್ನು ಸಹ ನಿಗದಿಪಡಿಸಲಾಗಿದೆ.
ಬಾಕಿ ಇರುವ ದಂಡದ ಮೊತ್ತದಲ್ಲಿ ಶೇ. 50ರಷ್ಟು ರಿಯಾಯಿತಿ ಪಡೆದು ತಮ್ಮ ಪ್ರಕರಣಗಳನ್ನು ರಾಜೀ ಮೂಲಕ ಅಥವಾ ಸುಲಭವಾಗಿ ಇತ್ಯರ್ಥಪಡಿಸಿಕೊಳ್ಳಲು 2026ರ ನವೆಂಬರ್ 21 ರಿಂದ ಡಿಸೆಂಬರ್ 11ರವರೆಗೆ ವಿಶೇಷ ಕಾಲಾವಕಾಶ ನೀಡಿ ಸಾರಿಗೆ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸುವಂತೆ ಸೂಚಿಸಲಾಗಿದೆ. ಈ ನಿರ್ಧಾರವು ದಂಡ ಕಟ್ಟಿ ಕಂಗಾಲಾಗಿದ್ದ ಲಕ್ಷಾಂತರ ವಾಹನ ಸವಾರರಿಗೆ ದೊಡ್ಡ ನಿರಾಳತೆಯನ್ನು ತಂದುಕೊಡಲಿದೆ.
ಆರ್ಥಿಕ ಇಲಾಖೆಯ ಒಪ್ಪಿಗೆ ಹಾಗೂ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಅಧೀನ ಕಾರ್ಯದರ್ಶಿ ಆದಿನಾರಾಯಣ ಅವರ ಸಹಿಯೊಂದಿಗೆ ಹೊರಡಿಸಲಾಗಿರುವ ಪ್ರಸ್ತಾವನೆಯಂತೆ, ಸಾರಿಗೆ ಇಲಾಖೆಯು ಶೀಘ್ರದಲ್ಲೇ ನಿರ್ದಿಷ್ಟ ದಿನಾಂಕಗಳ ಒಳಗಾಗಿ ದಂಡ ಪಾವತಿಸಿ ರಿಯಾಯಿತಿ ಪಡೆದುಕೊಳ್ಳುವ ಕುರಿತು ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಲಿದೆ.
ಬಾಕಿ ಚಲನ್‌ಗಳನ್ನು ಹೊಂದಿರುವ ಸವಾರರು ಈ ಸುವರ್ಣ ಅವಕಾಶವನ್ನು ಬಳಸಿಕೊಂಡು ಕಡಿಮೆ ಮೊತ್ತದಲ್ಲಿ ತಮ್ಮ ದಂಡದ ಪ್ರಕರಣಗಳನ್ನು ಮುಕ್ತಾಯಗೊಳಿಸಿಕೊಳ್ಳಲು ಇದು ಸಕಾಲವಾಗಿದೆ.