ಯಾರಾದ್ರೂ ಹತ್ರ ಬಂದ್ರೆ ಹುಷಾರ್!; ಸಿನಿಮಾ ಸ್ಟೈಲ್​ನಲ್ಲಿ ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರಗಳ್ಳತನಕ್ಕೆ ಯತ್ನ, ಆರೋಪಿ ಅರೆಸ್ಟ್..Bengaluru

 ಇಂದಿರಾ ನಗರದಲ್ಲಿ ಸರಗಳ್ಳತನಕ್ಕೆ ಯತ್ನಿಸಿದ ದೃಶ್ಯ
ಇಂದಿರಾ ನಗರದಲ್ಲಿ ಸರಗಳ್ಳತನಕ್ಕೆ ಯತ್ನಿಸಿದ ದೃಶ್ಯ
Published on: 
  • ಬೆಂಗಳೂರಿನ ಇಂದಿರಾನಗರದಲ್ಲಿ ಸರಗಳ್ಳತನಕ್ಕೆ ಯತ್ನ, ಆರೋಪಿ ಅರೆಸ್ಟ್.

  • ಸಿನಿಮಾ ಸ್ಟೈಲ್​ನಲ್ಲಿ ಯುವತಿ ಕುತ್ತಿಗೆ ಮೇಲೆ ಚಾಕು ಇಟ್ಟು ಬೆದರಿಕೆ.

  • ಆರೋಪಿಯನ್ನು ಚಾಣಾಕ್ಷತನದಿಂದ ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು.

ಬೆಂಗಳೂರು: ಸುತ್ತಲೂ ಆತಂಕದಿಂದ ನೋಡುತ್ತಿರುವ ಜನ..ಯುವತಿಯ ಕುತ್ತಿಗೆ ಬಳಿ ಚಾಕು ಇಟ್ಟ ಕಳ್ಳ..ಆಕೆಯನ್ನು ಎಳೆದೊಯ್ಯುತ್ತಿರುವ ದೃಶ್ಯ ಕಂಡು ಬಂದಿದ್ದು ಬೆಂಗಳೂರಿನ ಇಂದಿರಾ ನಗರದಲ್ಲಿ. ಇದು ಸಿನಿಮಾ ಶೂಟಿಂಗ್ ಅಥವಾ ಸೀರಿಯಲ್​ಗಾಗಿ ನಡೆದ ಸೀನ್​ ಅಲ್ಲ. ಬದಲಾಗಿ ಸರಗಳ್ಳತನಕ್ಕೆ ಯತ್ನಿಸಿ ..ಸಿಕ್ಕಿಬಿದ್ದಾಗ ತಪ್ಪಿಸಿಕೊಳ್ಳಲು ಕಳ್ಳ ನಡೆಸಿದ ನಾಟಕವಿದು.

ಇಂದಿರಾನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಅ.31ರಂದು ನಡೆದ ಸರಗಳ್ಳತನ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ.. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಭುರಾಜ್ ಅಲಿಯಾಸ್ ರಾಜ್ ಆರೋಪಿ ಎಂದು ಗುರುತಿಸಲಾಗಿದೆ.

Also Read
ಗಂಡನಿಗೆ ತಿಳಿಯದಂತೆ ಸರಣಿ ಕಳ್ಳತನ: ಇಂಟರ್ನೆಟ್ ನೋಡಿ ಕನ್ನ ಕೊರೆಯುತ್ತಿದ್ದ ಖತರ್ನಾಕ್​ ಬುರ್ಖಾ ಕಳ್ಳಿ ಬಂಧನ! Learns Theft Online
 ಇಂದಿರಾ ನಗರದಲ್ಲಿ ಸರಗಳ್ಳತನಕ್ಕೆ ಯತ್ನಿಸಿದ ದೃಶ್ಯ

ಏನಿದು ಕೇಸ್?

ಅ.31ರಂದು 11.45 ರ ಸುಮಾರಿಗೆ ನಡೆದಿದೆ. ಅಂಗಡಿಯೊಂದಕ್ಕೆ ನುಗ್ಗಿದ ಆರೋಪಿ, ಯಾರೋ ತನ್ನನ್ನು ಹಿಂಬಾಲಿಸಿಕೊಂಡು ಬಂದು ಕೊಲೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಯುವತಿ ಬಳಿ ನಾಟಕವಾಡಿದ್ದಾನೆ. ನನ್ನನ್ನು ದಯವಿಟ್ಟು ರಕ್ಷಿಸಿ ಎಂದು ಯುವತಿಯನ್ನು ಕೇಳಿಕೊಂಡಿದ್ದಾನೆ. ಆಕೆ ನಂಬಿ ಆತನ ಮಾತು ಕೇಳುತ್ತಿದ್ದಂತೆ ಅಸಲಿ ಮುಖವನ್ನು ಆರೋಪಿ ಬಿಚ್ಚಿದ್ದಾನೆ.

ಕುತ್ತಿಗೆಗೆ ಚಾಕು ಇಟ್ಟು ಕೊಲೆಗೆ ಯತ್ನ

ಯುವತಿಗೆ ಬೆದರಿಕೆ ಹಾಕಿ, ಸುಮಾರು 35 ಗ್ರಾಂ ತೂಕದ ಮತ್ತು ಅಂದಾಜು 4.5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ನೀಡುವಂತೆ ಒತ್ತಾಯಿಸಿದ್ದಾನೆ. ವಿರೋಧಿಸಿದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ. ಇಷ್ಟೇ ಅಲ್ಲದೆ ಆಕೆಯ ಕೈಗಳನ್ನು 'ಫೆವಿಕಿಕ್' ಬಳಸಿ ಅಂಗಡಿಯ ಮೇಜಿಗೆ ಅಂಟಿಸಿ, ಆಕೆಯ ಚಿನ್ನದ ಸರವನ್ನು ಕಸಿದುಕೊಳ್ಳಲು ಯತ್ನಿಸಿದ್ದಾನೆ.

ಯುವತಿಯ ಚೀರಾಟ ಕೇಳಿದ ಸ್ಥಳೀಯರು ಮತ್ತು ಅಕ್ಕ ಪಕ್ಕದ ಅಂಗಡಿಯವರು ಸ್ಥಳಕ್ಕೆ ಧಾವಿಸಿ, ಆಕೆಯನ್ನು ರಕ್ಷಿಸಲು ಮುಂದಾದರು. ಸಿಕ್ಕಿ ಬೀಳುವ ಆತಂಕಕ್ಕೆ ಒಳಗಾದ ಆರೋಪಿ, ಯುವತಿಯ ಕತ್ತಿಗೆ ಚಾಕುವಿಟ್ಟು ಯಾರಾದರೂ ಹತ್ತಿರ ಬಂದರೆ ಆಕೆಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಆದರೆ, ಆರೋಪಿಯ ಬೆದರಿಕೆಗೆ ಬಗ್ಗದ ಸ್ಥಳೀಯರು ಚಾಣಾಕ್ಷತನದಿಂದ ಆತನ ಗಮನವನ್ನು ಬೇರೆಡೆಗೆ ಸೆಳೆದು, ಯುವತಿಯನ್ನು ಪ್ರಾಣಾಪಾಯದಿಂದ ಕಾಪಾಡಿ, ಇಂದಿರಾನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಆಕೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿರಬಹುದು. ಘಟನೆಯಿಂದ ಗಾಬರಿಗೊಳಗಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ನೆಟ್ಟಿಗರಿಂದ ಆತಂಕ ವ್ಯಕ್ತ

ಆರೋಪಿಯು ಯುವತಿಯನ್ನು ಕರೆದೊಯ್ದ ಸಿನಿಮಾ ರೀತಿಯ ಸ್ಟೈಲ್ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ. ಬೆಂಗಳೂರಿನಲ್ಲಿ ಯಾವ ಸಿನಿಮಾಕ್ಕೂ ಕಮ್ಮಿ ಇಲ್ಲ,..ಆ ರೀತಿ ಕಳ್ಳತನಕ್ಕೆ ಯತ್ನ ಪ್ರಕರಣ ನಡೆದಿದೆ ಎಂದಿದ್ದಾರೆ. ಇನ್ನೂ ಕೆಲವರು ಇದು ಸೀರಿಯಲ್​ ಶೂಟಿಂಗ್​ ಅಥವಾ ನಿಜ ಕಳ್ಳತನ ಕೇಸ್​ ಆಗಿದ್ಯಾ ಎಂದು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಪ್ರಭುರಾಜ್​ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಂತರ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಈತ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಎನ್ನುವುದು ಗೊತ್ತಾಗಿದೆ. ಈತನ ವಿರುದ್ಧ ಇನ್ನೆಷ್ಟು ಪ್ರಕರಣಗಳು ದಾಖಲಾಗಿದೆ ಎನ್ನುವ ಪರಿಶೀಲನೆಯನ್ನು ಇಂದಿರಾ ನಗರ ಪೊಲೀಸರು ನಡೆಸುತ್ತಿದ್ದಾರೆ,(ಏಜೆನ್ಸೀಸ್).