

ಬೆಂಗಳೂರು: ಕೆರೆ ಕಾಲುವೆಗೆ ಸೇತುವೆ ನಿರ್ಮಾಣ ಸಂಬಂಧ ಬಸವನಗರ ಮುಖ್ಯ ರಸ್ತೆಯಲ್ಲಿ ಅ.10ರ ಶನಿವಾರದಿಂದ 20 ದಿನಗಳ ಕಾಲ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ತೊಂದರೆ ಆಗಬಾರದೆಂದು ಎಚ್‌ಎಎಲ್ ಸಂಚಾರ ಪೊಲೀಸರು, ಈ ಕ್ರಮ ಕೈಗೊಂಡು ಪ್ರಕಟಣೆ ಹೊರಡಿಸಿದ್ದಾರೆ.
ಇಲ್ಲಿ ಸಂಚಾರ ನಿಷೇಧ:
ಮಾರತ್ತಹಳ್ಳಿ, ಎಚ್‌ಎಎಲ್, ವಿಭೂತಿಪುರ ಹಾಗೂ ಬಸವನಗರ ಕಡೆಯಿಂದ ವಿಜ್ಞಾನ ನಗರ, ಕಗ್ಗದಾಸಪುರ, ಮಲ್ಲೇಶಪಾಳ್ಯ ಕಡೆಗೆ ಹೋಗುವುದು ಮತ್ತು ವಿಜ್ಞಾನ ನಗರ, ಕಗ್ಗದಾಸಪುರ, ಮಲ್ಲೇಶಪಾಳ್ಯ, ಬಿಇಎಂಎಲ್ ಕಡೆಯಿಂದ ವಿಭೂತಿಪುರ, ಬಸವನಗರ, ಮಾರತ್ತಹಳ್ಳಿ, ಎಚ್‌ಎಎಲ್ ಕಡೆಗೆ ಸಂಚಾರ ಬಂದ್ ಇರಲಿದೆ.
ಪರ್ಯಾಯ ಮಾರ್ಗ:
* ಮಾರತ್ತಹಳ್ಳಿ, ಎಚ್‌ಎಎಲ್, ವಿಭೂತಿಪುರ, ಬಸವನಗರ ಕಡೆಯಿಂದ ವಿಜ್ಞಾನ ನಗರ, ಕಗ್ಗದಾಸಪುರ ಮಲ್ಲೇಶಪಾಳ್ಯ ಹಾಗೂ ಬಿಇಎಂಎಲ್ ಕಡೆಗೆ ಹೋಗುವ ವಾಹನಗಳು ಹಳೇ ವಿಮಾನ ನಿಲ್ದಾಣ ಮುಖ್ಯ ರಸ್ತೆಯ ಮುಖೇನ ಸುರಂಜನ್‌ದಾಸ್ ರಸ್ತೆ ಬ್ರಿಡ್ಜ್ ಜಂಕ್ಷನ್ ಬಳಿಯಲ್ಲಿ ಬಲ ತಿರುವು ಪಡೆದು ಸುರಂಜನ್‌ದಾಸ್ ರಸ್ತೆ ಮೂಲಕ ಬಿಇಎಂಎಲ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಮಲ್ಲೇಶಪಾಳ್ಯ ಮುಖ್ಯ ರಸ್ತೆ ಮುಖೇನ ವಿಜ್ಞಾನ ನಗರ ಮತ್ತು ಕಗ್ಗದಾಸಪುರ ಕಡೆಗೆ ಸಂಚರಿಸಬಹುದು.
* ವಿಜ್ಞಾನ ನಗರ, ಕಗ್ಗದಾಸಪುರ, ಮಲ್ಲೇಶಪಾಳ್ಯ, ಬಿಇಎಂಎಲ್ ಕಡೆಯಿಂದ ವಿಭೂತಿಪುರ, ಬಸವ ನಗರ, ಎಚ್‌ಎಎಲ್, ಮಾರತ್ತಹಳ್ಳಿ ಕಡೆಗೆ ಸಂಚರಿಸುವ ಎಲ್ಲ ವಾಹನಗಳು ಮಲ್ಲೇಶಪಾಳ್ಯ ಮುಖ್ಯರಸ್ತೆಯ ಮುಖೇನ ಸಂಚರಿಸಿ ಬಿಇಎಂಎಲ್ ಜಂಕ್ಷನ್ ಬಳಿ ಎಡ ತಿರುವು ಪಡೆದು ಸುರಂಜನ್‌ದಾಸ್ ರಸ್ತೆಯ ಮೂಲಕ ಸಂಚರಿಸಿ ರಂಜನ್‌ದಾಸ್ ಜಂಕ್ಷನ್ ತಲುಪಿ ಎಡ ತಿರುವು ಪಡೆದುಕೊಂಡು ಹಳೇ ವಿಮಾನ ನಿಲ್ದಾಣ ರಸ್ತೆ ಮೂಲಕ ವಿಭೂತಿಪುರ, ಬಸವನಗರ, ಎಚ್‌ಎಎಲ್, ಮಾರತ್ತಹಳ್ಳಿ ಕಡೆಗೆ ಪರ್ಯಾಯ ಮಾರ್ಗವಾಗಿ ಸಂಚರಿಸಬಹುದು.