ಮಕ್ಕಳ ಬಾಲ್ಯದ ಆರೈಕೆ ಶಿಕ್ಷಣಕ್ಕೆ ಬೆಂ.ನಗರ ವಿವಿ ನೂತನ ಕೋರ್ಸ್

 ಬೆಂಗಳೂರು ನಗರ ವಿಶ್ವವಿದ್ಯಾಲಯ
ಬೆಂಗಳೂರು ನಗರ ವಿಶ್ವವಿದ್ಯಾಲಯ
Published on

ಪ್ರಮುಖ ಮುಖ್ಯಾಂಶಗಳು

  • ಬಾಲ್ಯದ ಆರೈಕೆ ಮತ್ತು ಶಿಕ್ಷಣ (ಅರ್ಲಿ ಚೈಲ್ಡ್ ಕೇರ್ ಆೃಂಡ್ ಎಜುಕೇಷನ್) ಎಂಬ ಕೋರ್ಸ್ ಅನ್ನು ರಾಜ್ಯದಲ್ಲಿ ಮೊದಲ ಬಾರಿಗೆ ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಆರಂಭ
  • ಚೈಲ್ಡ್‌ಕೇರ್ ಸೆಂಟರ್‌ಗಳಲ್ಲಿ ಶಿಕ್ಷಕರು ಮಕ್ಕಳೊಂದಿಗೆ ಹೇಗೆ ನಡೆದುಕೊಳ್ಳಬೇಕು ಮತ್ತು ಯಾವ ರೀತಿಯ ಶಿಕ್ಷಣ ನೀಡಬೇಕು ಎಂಬ ಮಾರ್ಗದರ್ಶನ
  • ದ್ವಿತೀಯ ಪಿಯುಸಿ ತೇರ್ಗಡೆಯಾಗಿರುವವರು ಈ ಕೋರ್ಸ್ ಅನ್ನು ಸೇರ್ಪಡೆಯಾಗಬಹುದು. ಅಂಗನವಾಡಿಗಳಲ್ಲಿಯೂ ಆರಂಭಕ್ಕೆ ಸಿದ್ಧತೆ
ಎನ್.ಎಲ್. ಶಿವಮಾದು
ಬೆಂಗಳೂರು: ನಗರದ ಪ್ರದೇಶದಲ್ಲಿ ನಾಯಿಕೊಡೆಗಳಂತೆ ಬೆಳೆದುಕೊಂಡಿರುವ ಚೈಲ್ಡ್‌ಕೇರ್ ಸೆಂಟರ್‌ಗಳಲ್ಲಿ ಶಿಕ್ಷಕರು ಮಕ್ಕಳೊಂದಿಗೆ ಹೇಗೆ ನಡೆದುಕೊಳ್ಳಬೇಕು ಮತ್ತು ಯಾವ ರೀತಿಯ ಶಿಕ್ಷಣ ನೀಡಬೇಕು ಎಂಬ ಮಾರ್ಗದರ್ಶನ ನೀಡುವುದಕ್ಕಾಗಿ ಬಾಲ್ಯದ ಆರೈಕೆ ಮತ್ತು ಶಿಕ್ಷಣ (ಅರ್ಲಿ ಚೈಲ್ಡ್ ಕೇರ್ ಆೃಂಡ್ ಎಜುಕೇಷನ್) ಎಂಬ ಕೋರ್ಸ್ ಅನ್ನು ರಾಜ್ಯದಲ್ಲಿ ಮೊದಲ ಬಾರಿಗೆ ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಆರಂಭಿಸುತ್ತಿದೆ.
ಬೆಂಗಳೂರು ಸೇರಿ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಚೈಲ್ಡ್ ಕೇರ್ ಸೆಂಟರ್‌ಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಲೇ ಇದೆ. ಮನೆಯಲ್ಲಿರುವ ಹೆಚ್ಚಿನ ಮಹಿಳೆಯರು ಇದನ್ನು ಒಂದು ವ್ಯವಹಾರವಾಗಿ ಪರಿಗಣಿಸುತ್ತಿದ್ದಾರೆ. ಆದರೆ, ಇವರಿಗೆ ಯಾವುದೇ ಕನಿಷ್ಠ ಶಿಕ್ಷಣ ಕೂಡ ಸಿಗುತ್ತಿಲ್ಲ. ಪಡೆದುಕೊಳ್ಳಲು ಕೂಡ ಸರ್ಕಾರಿ ವ್ಯವಸ್ಥೆಯಲ್ಲಿ ಕೋರ್ಸ್‌ಗಳಿರಲಿಲ್ಲ.
7ನೇ ತರಗತಿ, ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಓದಿರುವವರೆಲ್ಲರೂ ಚೈಲ್ಡ್ ಕೇರ್ ಮತ್ತು ಪ್ರಿಸ್ಕೂಲ್‌ಗಳನ್ನು ನಡೆಸುತ್ತಿದ್ದಾರೆ. ಹೀಗೆ ಪ್ರಿಸ್ಕೂಲ್ ನಡೆಸುವ ಶಿಕ್ಷಕರನ್ನು ಅಣಿಗೊಳಿವುದಕ್ಕಾಗಿಯೇ ಬೆಂಗಳೂರು ನಗರ ವಿಶ್ವವಿದ್ಯಾಲಯವು ಅರ್ಲಿ ಚೈಲ್ಡ್ ಕೇರ್ ಆೃಂಡ್ ಎಜುಕೇಷನ್ ಎಂಬ ಡಿಪ್ಲೊಮೊ ಕೋರ್ಸ್ ಅನ್ನು ಆರಂಭಿಸುತ್ತಿದೆ.
ಈ ಕೋರ್ಸ್‌ನಲ್ಲಿ ಬಹಳ ಮುಖ್ಯವಾಗಿ ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳುವುದು, ಅವರ ಬೆಳವಣಿಗೆ, ಕಲಿಕೆ, ನಡವಳಿಕೆ, ಸ್ವಭಾವ, ಪರಿಸರದೊಂದಿಗೆ ಹೊಂದಿಕೊಳ್ಳುವುದು ಹೀಗೆ ಹತ್ತಾರು ವಿಷಯಗಳಲ್ಲಿ ಮಕ್ಕಳನ್ನು ಅರ್ಥ ಮಾಡಿಕೊಳ್ಳುವ ವಿಷಯಗಳನ್ನು ತಿಳಿಸಿಕೊಡಲಾಗುತ್ತದೆ. ಅದರ ಜತೆಗೆ ಮಕ್ಕಳಿಗೆ ಏನನ್ನು ಕಲಿಸಿಕೊಡಬೇಕು, ಆಧುನಿಕ ತಂತ್ರಜ್ಞಾನಗಳನ್ನು ಎಷ್ಟರ ಮಟ್ಟಿಗೆ ಬಳಸಬೇಕು, ಮೌಲ್ಯಗಳನ್ನು ಕಲಿಸುವ ಬಗೆ ಸೇರಿ ಹತ್ತಾರು ವಿಷಯಗಳನ್ನು ಒಳಗೊಂಡ ಕೋರ್ಸ್ ಅನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗುತ್ತಿದೆ. ದ್ವಿತೀಯ ಪಿಯುಸಿ ತೇರ್ಗಡೆಯಾಗಿರುವವರು ಈ ಕೋರ್ಸ್ ಅನ್ನು ಸೇರ್ಪಡೆಯಾಗಬಹುದು.

ಸಂಯೋಜಿತ ಕಾಲೇಜುಗಳಲ್ಲಿಯೂ ಲಭ್ಯ:

ಬೆಂ. ನಗರ ವಿವಿ ವ್ಯಾಪ್ತಿಯ ಸಂಯೋಜಿತ ಕಾಲೇಜುಗಳಲ್ಲಿಯೂ ಈ ಕೋರ್ಸ್‌ನ ಸಂಯೋಜನೆಯನ್ನು ಪಡೆಯಬಹುದು. ಈಗಾಗಲೇ ಕೊರ್ಸ್ ಅನ್ನು ಪರಿಚಯಿಸಿದ್ದು, ಸಂಬಂಧಪಟ್ಟ ಕಾಲೇಜುಗಳು ಸಂಯೋಜನೆ ಪಡೆಯಬಹುದು. ನ.21ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕುಲಪತಿ ಪ್ರೊ. ರಮೇಶ್ ವಿಷಯವನ್ನು ಹಂಚಿಕೊಂಡರು.
ಇದರ ಜತೆಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ 100 ಕೋರ್ಸ್‌ಗಳನ್ನು ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗಗಳಲ್ಲಿ ಆರಂಭಿಸುತ್ತಿದೆ. ಕಲಾ, ವಾಣಿಜ್ಯ, ವಿಜ್ಞಾನ, ನಿರ್ವಹಣೆ, ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ ಶಾಖೆಗಳಲ್ಲಿ ಆರಂಭಿಸಲಾಗುತ್ತದೆ ಎಂದರು.

ಅಂಗನವಾಡಿಗಳಲ್ಲಿಯೂ ಆರಂಭಕ್ಕೆ ಸಿದ್ಧತೆ

ಈ ಕೋರ್ಸ್ ಅನ್ನು ರಾಜ್ಯದ ಅಂಗನವಾಡಿಗಳಲ್ಲಿಯೂ ಪರಿಚಯಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿಯೂ ಚಿಂತನೆ ನಡೆಸಲಾಗಿದೆ. ರಾಜ್ಯದಲ್ಲಿ 66,909 ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲ ಕಡೆ ಈ ಕೋರ್ಸ್ ಅನ್ನು ಪರಿಚಯಿಸುವುದರಿಂದ ಬುನಾದಿ ಹಂತದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯಲಿದೆ. ಸದ್ಯದಲ್ಲಿಯೇ ಪರಿಚಯಿಸುವ ಸಾಧ್ಯತೆಗಳಿವೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
"

ಆಧುನಿಕ ಕಾಲಕ್ಕೆತಕ್ಕಂತೆ ಮತ್ತು ಬೇಡಿಕೆ ಇರುವ ಕೋರ್ಸ್‌ಗಳನ್ನು ವಿಶ್ವವಿದ್ಯಾಲಯದಲ್ಲಿ ಆರಂಭಿಸಲಾಗುತ್ತಿದೆ. ಇದರಿಂದ ಪದವೀಧರರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಡುವುದು ನಮ್ಮ ಉದ್ದೇಶವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net