ಕಲೆ, ಸಂಸ್ಕೃತಿಗೆ ಜಗತ್ತನ್ನು ಒಗ್ಗೂಡಿಸುವ ಶಕ್ತಿ ಇದೆ: ನಾಗತಿಹಳ್ಳಿ

ಆರ್‌ವಿ ಇಂಜಿನಿಯರಿಂಗ್ ಕಾಲೇಜಿನ 52ನೇ ಕನ್ನಡ ಹಬ್ಬ
ಆರ್‌ವಿ ಇಂಜಿನಿಯರಿಂಗ್ ಕಾಲೇಜಿನ 52ನೇ ಕನ್ನಡ ಹಬ್ಬ
Published on

ಪ್ರಮುಖ ಮುಖ್ಯಾಂಶಗಳು

  • ವೈಮನಸ್ಸಿನಿಂದ ಸಹಸ್ರಾರು ಜನರನ್ನು ಕೊಂದು ಕ್ರೌರ್ಯ ಮೆರೆಯುತ್ತಿರುವ ಜಗತ್ತಿನಲ್ಲಿ ಕಲೆ ಮತ್ತು ಸಂಸ್ಕೃತಿಗೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಇದೆ
  • ಆರ್‌ವಿ ಇಂಜಿನಿಯರಿಂಗ್ ಕಾಲೇಜಿನ 52ನೇ ಕನ್ನಡ ಹಬ್ಬ ‘ಜಗದ್ವಹಾ’ ಮತ್ತು 8ನೇ ಮೈಲ್ ತಾಂತ್ರಿಕ ಸಾಂಸ್ಕೃತಿಕ ಉತ್ಸವ ‘ಅಷ್ಟ್ರಂಗ್’ ಉದ್ಘಾಟನಾ ಸಮಾರಂಭ
  • ಇಂದಿನ ಯುವಕರಲ್ಲಿನ ಕನ್ನಡವನ್ನು ನೋಡಿದಾಗ ನಾಡಿಗೆ ಉಜ್ವಲ ಭವಿಷ್ಯವಿದೆ ಎಂದೆನಿಸುತ್ತದೆ. ಆ ಮಿಡಿತ, ಸಂಭ್ರಮವು ದೇಶಕ್ಕೆ ಅಗತ್ಯವಾಗಿ ಬೇಕಿದೆ
ಬೆಂಗಳೂರು: ವರ್ಷಾನುಗಟ್ಟಲೆ ಯುದ್ಧ, ತಲ್ಲಣ ಮತ್ತು ಸಂಘರ್ಷಗಳಲ್ಲಿ ತೊಡಗಿ ವೈಮನಸ್ಸಿನಿಂದ ಸಹಸ್ರಾರು ಜನರನ್ನು ಕೊಂದು ಕ್ರೌರ್ಯ ಮೆರೆಯುತ್ತಿರುವ ಜಗತ್ತಿನಲ್ಲಿ ಕಲೆ ಮತ್ತು ಸಂಸ್ಕೃತಿಗೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಇದೆ ಎಂದು ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಆರ್‌ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿರುವ ಮೂರು ದಿನಗಳ 52ನೇ ಕನ್ನಡ ಹಬ್ಬ ‘ಜಗದ್ವಹಾ’ ಮತ್ತು 8ನೇ ಮೈಲ್ ತಾಂತ್ರಿಕ ಸಾಂಸ್ಕೃತಿಕ ಉತ್ಸವ ‘ಅಷ್ಟ್ರಂಗ್’ ಉದ್ಘಾಟನಾ ಸಮಾರಂಭಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕಲೆ, ಸಿನಿಮಾ, ಚಿತ್ರಕಲೆ, ನೃತ್ಯ ಯಾವುದೇ ಅದರೂ ಎಲ್ಲರನ್ನೂ ಒಗ್ಗೂಡಿಸುತ್ತದೆ. ಇಂದಿನ ಯುವಕರಲ್ಲಿನ ಕನ್ನಡವನ್ನು ನೋಡಿದಾಗ ನಾಡಿಗೆ ಉಜ್ವಲ ಭವಿಷ್ಯವಿದೆ ಎಂದೆನಿಸುತ್ತದೆ. ಆ ಮಿಡಿತ, ಸಂಭ್ರಮವು ದೇಶಕ್ಕೆ ಅಗತ್ಯವಾಗಿ ಬೇಕಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಎನ್. ಸುಬ್ರಮಣ್ಯ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಮಾತೃಭಾಷೆಗೆ ಹೆಚ್ಚು ಒತ್ತು ನೀಡುವಂತೆ ತಿಳಿಸಿದೆ. ಹೀಗಾಗಿ, ಕಾಲೇಜಿನಲ್ಲಿ ಕನ್ನಡ ವಾತಾವರಣ ಸೃಷ್ಟಿಸಲಾಗಿದೆ. ಹೊರ ರಾಜ್ಯದಿಂದ ಬರುವ ವಿದ್ಯಾರ್ಥಿಗಳಿಗೆ ನಲಿ-ಕಲಿ ಕಾರ್ಯಕ್ರಮ ಅನುಷ್ಠಾನ ಮಾಡಲಾಗಿದೆ. ಇದರಿಂದ ಬಹಳಷ್ಟು ವಿದ್ಯಾರ್ಥಿಗಳು ತುಂಬಾ ಚೆನ್ನಾಗಿ ಕನ್ನಡ ಕಲಿತಿರುವ ಉದಾಹರಣೆಗಳಿವೆ ಎಂದು ಹೇಳಿದರು.
ಹಾಗೆಯೇ ಸಂಸ್ಥೆಯಲ್ಲಿ ಸಮಗ್ರ ಶಿಕ್ಷಣವನ್ನು ಅಳವಡಿಸಿಕೊಳ್ಳಲಾಗಿದೆ. ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಅನ್ನು ಬೋಧನೆ ಮಾಡಿದರೂ ಅಂತಿಮ ವರ್ಷಕ್ಕೆ ಬರುವಷ್ಟರಲ್ಲಿ ತಮ್ಮಲ್ಲಿನ ಕೌಶಲದಿಂದ ಹೊರ ಹೋಗುತ್ತಾರೆ. ತಂತ್ರಜ್ಞರಾಗಿ, ಅನೇಕರು ನಾಗರಿಕ ಸೇವೆಯಲ್ಲಿ ಮುಂದುವರಿಯುತ್ತಿದ್ದಾರೆ. ಕ್ರೀಡೆಯಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಚಿತ್ರ ನಿರ್ದೇಶಕರಾಗಿ, ಹಿನ್ನೆಲೆ ಗಾಯತ, ನಟ-ನಟಿಯರಾಗಿ ತಮ್ಮ ವೃತ್ತಿಯನ್ನು ಆರಂಭಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಪೂಜಾ, ಉಪ ಪ್ರಾಂಶುಪಾಲೆ ಡಾ. ಕೆ.ಎಸ್. ಗೀತಾ ಉಪಸ್ಥಿತರಿದ್ದರು.

ಕನ್ನಡದ ಶೇ.40 ಪದಗಳು ಸಂಸ್ಕೃತದ್ದು: ನಾಗತಿಹಳ್ಳಿ

ನಾವು ಪ್ರತಿ ದಿನ ಅಚ್ಚ ಕನ್ನಡ ಶಬ್ಧಗಳನ್ನೇ ಬಳಸುತ್ತೇನೆಂಬ ಹಠಮಾರಿತನ ಬೇಡ. ಹಾಗೆಯೇ, ವಾಕ್ಯದ ಮಧ್ಯದಲ್ಲಿ ಎಲ್ಲಿಯೋ ಒಂದು ಕನ್ನಡ ಶಬ್ದ ಬಳಸುತ್ತೇನೆಂದೂ ಉಡಾೆಯೂ ಬೇಡ. ಆದರೆ, ಬಳಕೆಯಲ್ಲಿರುವ ಪದಗಳನ್ನು ಮಾತನಾಡಿದರೆ ಸಾಕು ಕನ್ನಡ ಉಳಿಯಲಿದೆ ಎಂದು ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಯುವಕರಿಗೆ ಕಿವಿಮಾತು ಹೇಳಿದರು.
ಕನ್ನಡದಲ್ಲಿರುವ ಶೇ.40 ಪದ ಸಂಸ್ಕೃತದ್ದಾಗಿವೆ. ಅವುಗಳಲ್ಲಿ ಕೆಲವು ಪದಗಳನ್ನು ತತ್ಸಮ-ತದ್ಬವ ರೂಪದಲ್ಲಿ ಬಳಸುತ್ತಿದ್ದೇವೆ. ಸೂರ್ಯ, ಚಂದ್ರ, ಪೂರ್ವ, ಪಶ್ಚಿಮ ಇವೆಲ್ಲವೂ ಸಂಸ್ಕೃತ ಪದಗಳಾಗಿವೆ. ಕನ್ನಡದಲ್ಲಿಯೇ ಮಾತನಾಡಬೇಕೆಂದರೆ ನೇಸರ (ಸೂರ್ಯ), ತಿಂಗಳು (ಚಂದ್ರ) ಮೂಡಣ, ಪಡುವಣ ಎಂದು ಬಳಸಬೇಕಾಗುತ್ತದೆ. ಇದನ್ನು ಬಳಸಲು ಸಾಧ್ಯವಿಲ್ಲವೆಂದಲ್ಲ. ತೀರಾ ಸಂಕೀರ್ಣಕ್ಕೆ ಹೋಗುವ ಬದಲು ಸಹಜ ಪದಗಳನ್ನು ಬಳಸುವ ಪ್ರತಿಜ್ಞೆ ಮಾಡೋಣ. ಪರಭಾಷಿಕರೊಂದಿಗೆ ಕನ್ನಡದಲ್ಲಿಯೇ ಮಾತನಾಡಿದಾಗ ಕನ್ನಡ ಸಹಜವಾಗಿಯೇ ಉಳಿಯಲಿದೆ ಎಂದರು.

ಮೆರುಗು ತಂದ ಕಲಾ ತಂಡಗಳ ಮೆರವಣಿಗೆ

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಕಾಲೇಜಿನ ಆವರಣದಲ್ಲಿ ಕಲಾತಂಡಗಳ ಮೆರವಣಿಗೆಯನ್ನು ಅದ್ಧೂರಿ ಮತ್ತು ಅರ್ಥಪೂರ್ಣವಾಗಿ ನಡೆಸಲಾಯಿತು. ಪೂರ್ಣಕುಂಭದೊಂದಿಗೆ ಮೆರವಣಿಗೆ ಸಾಗಿತು. ಈ ಮೂಲಕ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಕನ್ನಡದ ಸಂಸ್ಕೃತಿ, ಕಲೆಯನ್ನು ಪರಿಚಯಿಸುವ ಕೆಲಸ ಮಾಡಲಾಯಿತು.
ಡೊಳ್ಳು ಕುಣಿತ, ವೀರಗಾಸೆ, ಹುಲಿ ವೇಷಧಾರಿಗಳು ತಮ್ಮ ಕಲೆಯನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸಾಂಪ್ರದಾಯಿಕ ಧಿರಿಸಿನಲ್ಲಿ ಮಿಂಚಿದರು. ವಿದ್ಯಾರ್ಥಿಗಳು ಪಂಜೆ ಮತ್ತು ಅಂಗಿ, ವಿದ್ಯಾರ್ಥಿನಿಯರು ಸೀರೆ ಉಟ್ಟು ೆಟೋಗೆ ಪೋಸ್ ಕೊಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಇನ್ನು ಕೆಂಪು ಮತ್ತು ಹಳದಿಯ ಕನ್ನಡ ಬಾವುಟ ಹಿಡಿದು ವಿದ್ಯಾರ್ಥಿಗಳು ಮೆರವಣಿಗೆ ಕನ್ನಡ ಹಬ್ಬವನ್ನು ಆನಂದಿಸಿದರು.
"

ಇತರೆ ಹಬ್ಬಗಳಿಗಿಂತ ಕನ್ನಡ ಹಬ್ಬವನ್ನು ಒಂದು ಪಟ್ಟು ಹೆಚ್ಚಾಗಿಯೇ ಆಚರಿಸಲಾಗುತ್ತದೆ. ಈ ಮೂಲಕ ವಿದ್ಯಾರ್ಥಿಗಳ ಕೌಶಲ, ಕಲೆ ಮತ್ತು ಸಂಸ್ಕೃತಿ ಅನಾವರಣಕ್ಕೆ ವೇದಿಕೆ ಕಲ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net