ಬಳಸಿದ ಅಡುಗೆ ಎಣ್ಣೆ ಮೇಲ್ವಿಚಾರಣೆಗೆ ಆ್ಯಪ್

* ಗುಣಪಟ್ಟ ಪರಿಶೀಲನೆಗೆ ಟಿಪಿಸಿ ಮೀಟರ್* ಆರೋಗ್ಯ ಸಚಿವ ಯು.ಟಿ.ಖಾದರ್ ಮಾಹಿತಿ
ಆರೋಗ್ಯ ಸಚಿವ ಯು.ಟಿ. ಖಾದರ್
ಆರೋಗ್ಯ ಸಚಿವ ಯು.ಟಿ. ಖಾದರ್
Published on: 

ಬೆಂಗಳೂರು: ಬಳಸಿದ ಅಡುಗೆ ಎಣ್ಣೆಯ ಮೇಲ್ವಿಚಾರಣೆಗಾಗಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತಾ ವಿಭಾಗವು ಆ್ಯಪ್ ಅಳವಡಿಸಿಕೊಳ್ಳಲು ಮುಂದಾಗಿದ್ದು, 3 ತಿಂಗಳಲ್ಲಿ ಜಾರಿಗೊಳಿಸಲು ಸಿದ್ಧತೆ ನಡೆಸಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿ, ಅಡುಗೆ ಎಣ್ಣೆ ಮರುಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಹಾಗಾಗಿ ಅದರ ಸೂಕ್ತ ನಿರ್ವಹಣೆಗೆ ‘ಟ್ರೇಸಬಿಲಿಟಿ ಆ್ಯಪ್’ ಸಿದ್ಧಪಡಿಸಲಾಗುತ್ತಿದೆ. ವಿಶೇಷವಾಗಿ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ದೊಡ್ಡ ಪ್ರಮಾಣದಲ್ಲಿ ಖರೀದಿಸುವ ಅಡುಗೆ ಎಣ್ಣೆಯ ಬಳಕೆ ಮೇಲೆ ನಿಗಾ ಇಡುವುದು ಆ್ಯಪ್‌ನ ಉದ್ದೇಶವಾಗಿದೆ. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಅನುಷ್ಠಾನ ಮಾಡಲಾಗುವುದು.

ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ ಬಳಸಿದ ಅಡುಗೆ ಎಣ್ಣೆಗೆ ಸಂಬಂಧಿಸಿದಂತೆ ನಿಯಮ ಸರಳೀಕರಣ ಮಾಡಿದರೆ, ವೈಮಾನಿಕ ಬಳಕೆಗೆ ರಫ್ತು ಮಾಡಬಹುದು ಎಂದರು.

ದತ್ತಾಂಶ ಸಂಗ್ರಹಣೆ:

ಬಳಸಿದ ಎಣ್ಣೆ ಸಣ್ಣ ಹೋಟೆಲ್‌ಗಳಿಗೆ ಹೋಗದಂತೆ ನೋಡಿಕೊಳ್ಳಲು ನೂತನ ವ್ಯವಸ್ಥೆ ಸಹಕಾರಿಯಾಗಲಿದೆ. ಈ ವ್ಯವಸ್ಥೆಯಡಿ ಅಡುಗೆ ಎಣ್ಣೆ ಖರೀದಿ ಪ್ರಮಾಣ ಮತ್ತು ಬಳಸಿದ ಎಣ್ಣೆಯ ವಿತರಣೆಗೆ ಸಂಬಂಧಿಸಿದ ದತ್ತಾಂಶವನ್ನು ಸಂಗ್ರಹಿಸಲಾಗುತ್ತದೆ ಎಂದರು.

ಮರುಬಳಕೆ ಎಣ್ಣೆ ಮೇಲೆ ನಿಗಾ:

ಅಡುಗೆ ಎಣ್ಣೆ ಉತ್ಪಾದನೆ ಘಟಕಗಳಿಂದ ಹೋಲ್‌ಸೇಲ್ ಆಗಿ ಖರೀದಿಸುವವರು ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಹೋಟೆಲ್ ಹಾಗೂ ಆಹಾರ ಉತ್ಪನ್ನಗಳ ತಯಾರಿಕಾ ಘಟಕಗಳು ವಾರಕ್ಕೆ ಅಂದಾಜು 200 ಲೀ.ಎಣ್ಣೆ ಬಳಸಿದರೆ, ಅದರಲ್ಲಿ ಸುಮಾರು 45 ಲೀ.ನಷ್ಟು ಕರಿದ ಎಣ್ಣೆ ಸಂಗ್ರಹವಾಗುತ್ತದೆ. ಇದನ್ನು ಮಾರಾಟ ಮಾಡಿದ ಹಾಗೂ ಖರೀದಿಸಿದ ವಿವರಗಳನ್ನು ಆ್ಯಪ್‌ನಲ್ಲಿ ಉಲ್ಲೇಖಿಸಬೇಕಾಗುತ್ತದೆ ಎಂದು ತಿಳಿಸಿದರು.

91 ಲಕ್ಷ ಲೀ. ಸಂಗ್ರಹ:

2022ರಿಂದ ಈವರೆಗೆ 91,02,794 ಲೀಟರ್ ಬಳಸಿದ ಅಡುಗೆ ಎಣ್ಣೆಯನ್ನು ಸಂಗ್ರಹಿಸಲಾಗಿದೆ. ಈ ಬಗೆಯ ಎಣ್ಣೆಯ ಗುಣಮಟ್ಟ ಪರಿಶೀಲನೆಗಾಗಿ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಟೋಟಲ್ ಪೋಲಾರ್ ಕಂಪೌಂಡ್ಸ್ (ಟಿಪಿಸಿ) ಮೀಟರ್‌ಗಳನ್ನು ಒದಗಿಸಲಾಗಿದೆ. ಇದರಲ್ಲಿ ಟಿಪಿಸಿ ಪ್ರಮಾಣ 25 ಮೀರಬಾರದು ಎಂದ ಸಚಿವರು, ರಾಜ್ಯದ ಆಹಾರ ಉದ್ದಿಮೆದಾರರು ತಮ್ಮಲ್ಲಿ ಬಳಕೆಯಾದ ಅಡುಗೆ ಎಣ್ಣೆಯನ್ನು ಎಫ್‌ಎಸ್‌ಎಸ್‌ಎಐ ಮಾನ್ಯತೆ ಪಡೆದ ಏಜೆನ್ಸಿಗಳ ಮೂಲಕವೇ ಕಡ್ಡಾಯವಾಗಿ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.

ಜನೌಷಧ ಕೇಂದ್ರಗಳು ಬ್ರ್ಯಾಂಡೆಡ್ ಔಷಧಗಳನ್ನು ಮಾರಾಟ ಮಾಡುವಂತಿಲ್ಲ. ನಿಯಮ ಉಲ್ಲಂಘನೆ, ಔಷಧಗಳ ಗುಣಮಟ್ಟದಲ್ಲಿ ಲೋಪ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹಲವು ಕೇಂದ್ರಗಳು ಬೇರೆ ಔಷಧಗಳನ್ನು ಮಾರಾಟ ಮಾಡಿರುವುದು ಪರಿಶೀಲನೆ ವೇಳೆ ಗಮನಕ್ಕೆ ಬಂದಿದೆ. ಯು.ಟಿ. ಖಾದರ್, ಆರೋಗ್ಯ ಸಚಿವ