ಆರೈಕೆಯ ಷರತ್ತಿಲ್ಲದ ದಾನಪತ್ರ ರದ್ದು ಸಾಧ್ಯವಿಲ್ಲ| high court

High court
High court
Published on

ಪ್ರಮುಖ ಮುಖ್ಯಾಂಶಗಳು

  • ಸೊಸೆಗೆ ಆಸ್ತಿ ಹಕ್ಕು ಹಿಂದಿರುಗಿಸಿದ ಹೈಕೋರ್ಟ್​
  • ಮಾವನ ಪರ ನ್ಯಾಯಮಂಡಳಿ ನೀಡಿದ್ದ ಆದೇಶ ವಜಾ
ಬೆಂಗಳೂರು: ಸೊಸೆಗೆ ಪ್ರೀತಿಯಿಂದ ಬರೆದುಕೊಟ್ಟ ಆಸ್ತಿಯ ದಾನಪತ್ರದಲ್ಲಿ ಅತ್ತೆ-ಮಾವನ ಆರೈಕೆಯ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂಬ ಷರತ್ತು ಇಲ್ಲದಿದ್ದರೆ, ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ ಅಡಿಯಲ್ಲಿ ಆ ದಾನಪತ್ರವನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್​ ಹೇಳಿದೆ.
ಸೊಸೆಗೆ ನೀಡಿದ್ದ ದಾನಪತ್ರವನ್ನು ಅಸಿಂಧುಗೊಳಿಸಿ ಆಸ್ತಿಯನ್ನು ಮಾವನಿಗೆ ಮರಳಿಸಿದ್ದ ಹಿರಿಯ ನಾಗರಿಕರ ಕಲ್ಯಾಣ ನ್ಯಾಯಮಂಡಳಿಯ ಆದೇಶ ರದ್ದುಗೊಳಿಸಿರುವ ನ್ಯಾಯಮೂರ್ತಿ ಸೂರಜ್​ ಗೋವಿಂದರಾಜ್​ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆಯ ಸೆಕ್ಷನ್​ 23ರ ಅಡಿಯಲ್ಲಿ ಆಸ್ತಿ ವರ್ಗಾವಣೆಗಳನ್ನು ರದ್ದುಪಡಿಸಬೇಕಾದರೆ, ಆ ದಾನಪತ್ರದಲ್ಲಿ ಹಿರಿಯ ನಾಗರಿಕರಿಗೆ ಮೂಲಸೌಕರ್ಯ ಮತ್ತು ಇತರ ಅಗತ್ಯಗಳನ್ನು ಪೂರೈಸುವ ಕಡ್ಡಾಯ ಷರತ್ತು ಇರಬೇಕು. ಆದರೆ, ಈ ಪ್ರಕರಣದಲ್ಲಿ ಅಂತಹ ಷರತ್ತುಗಳಿಲ್ಲದೆ ಸ್ವಯಂಪ್ರೇರಿತರಾಗಿ ಆಸ್ತಿಯನ್ನು ಸೊಸೆಗೆ ನೀಡಲಾಗಿದೆ.
ಆದ್ದರಿಂದ, ನಂತರ ಉದ್ಭವಿಸಿದ ಕೌಟುಂಬಿಕ ಸಮಸ್ಯೆಗಳ ಕಾರಣ ದಾನಪತ್ರವನ್ನು ರದ್ದುಪಡಿಸಲು ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆಯನ್ನು ಬಳಸಲು ಅವಕಾಶವಿಲ್ಲ. ಕಾಯ್ದೆ ಅಡಿಯಲ್ಲಿ ಬರುವ ಮಕ್ಕಳು ಅಥವಾ ಮಕ್ಕಳಿಲ್ಲದಿರುವ ಹಿರಿಯ ನಾಗರಿಕರ ಸಂಬಂಧಿಕರ ವ್ಯಾಪ್ತಿಗೆ ಸೊಸೆಯು ಬರುವುದಿಲ್ಲ. ಪಾಲಕರನ್ನು ನೋಡಿಕೊಳ್ಳುವ ಪ್ರಾಥಮಿಕ ಜವಾಬ್ದಾರಿಯು ಮಕ್ಕಳ ಮೇಲಿರುತ್ತದೆಯೇ ಹೊರತು ಸೊಸೆಯ ಮೇಲಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಸೊಸೆ ಹೆಸರಿಗೆ ವರ್ಗಾವಣೆ ಏಕೆ?:

ಬೆಂಗಳೂರಿನ ಬ್ಯಾಟರಾಯನಪುರದ ವ್ಯಕ್ತಿಯೊಬ್ಬರು 10 ವಸತಿ ಘಟಕಗಳನ್ನು ಹೊಂದಿರುವ ಆಸ್ತಿಯನ್ನು ತಮ್ಮ ಸೊಸೆ ಮತ್ತು ಮೊಮ್ಮಗನ ಹೆಸರಿಗೆ 2020ರ ಅಕ್ಟೋಬರ್​ನಲ್ಲಿ ದಾನಪತ್ರದ ಮೂಲಕ ನೋಂದಾಯಿಸಿದ್ದರು. ಅವರ ಮಗ ಕುಟುಂಬವನ್ನು ಸರಿಯಾಗಿ ನೋಟಿಕೊಳ್ಳದ ಹಿನ್ನಲೆಯಲ್ಲಿ, ಸೊಸೆ ಮತ್ತು ಮೊಮ್ಮಗನ ಭವಿಷ್ಯದ ರಕ್ಷಣೆಗಾಗಿ ಈ ಆಸ್ತಿಯನ್ನು ನೀಡಿದ್ದರು. ಆದರೆ, ನಂತರದ ದಿನಗಳಲ್ಲಿ ಕೌಟುಂಬಿಕ ಕಲಹ ಉಂಟಾಗಿ ಸೊಸೆಯು ಮನೆಯಿಂದ ಹೊರಬಂದಿದ್ದರು. 2022ರಲ್ಲಿ ಹಿರಿಯ ನಾಗರಿಕರ ಕಲ್ಯಾಣ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದ ಮಾವ, ಸೊಸೆಯು ತಮಗೆ ಮೂಲಸೌಕರ್ಯಗಳನ್ನು ಪೂರೈಸದ ಹಿನ್ನಲೆಯಲ್ಲಿ ದಾನಪತ್ರವನ್ನು ರದ್ದುಪಡಿಸಬೇಕು ಎಂದು ಕೋರಿದ್ದರು. ಮನವಿಯನ್ನು ನ್ಯಾಯಮಂಡಳಿ ಪುರಸ್ಕರಿಸಿತ್ತು. ಈ ಆದೇಶ ರದ್ದುಕೋರಿ ಸೊಸೆ ಹೈಕೋರ್ಟ್​ ಮೆಟ್ಟಿಲೇರಿದ್ದರು. 

ಬಾಲ್ಯವಿವಾಹ ತನಿಖೆಗೆ ಆದೇಶ 

ಅರ್ಜಿದಾರರಿಗೆ (ಸೊಸೆ) ತಮ್ಮ 15ನೇ ವಯಸ್ಸಿನಲ್ಲಿ 2010ರ ಜೂನ್​ನಲ್ಲಿ ಸೋದರ ಮಾವನ ಮಗನ ಜತೆ ವಿವಾಹವಾಗಿತ್ತು. ಅರ್ಜಿದಾರರು ಮದುವೆಯಾಗುವಾಗ ಅಪ್ರಾಪ್ತೆಯಾಗಿದ್ದರು ಎಂಬ ಈ ಅಂಶವನ್ನು ವಿಚಾರಣೆ ವೇಳೆ ಗಮನಿಸಿದ ನ್ಯಾಯಪೀಠ, ಇದನ್ನು ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಉಲ್ಲಂನೆ ಎಂದು ಪರಿಗಣಿಸಿದೆ. ಸಂಬಂಧಿಸಿದ ಜಿಲ್ಲಾಧಿಕಾರಿಗಳು ಈ ಕುರಿತು ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದೆ.

ವಯಸ್ಸಿನ ಬಗ್ಗೆ ಸ್ಪಷ್ಟನೆ

ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆಯ ಸೆಕ್ಷನ್​ 23ರ ಅಡಿಯಲ್ಲಿ ಅರ್ಜಿ ಸಲ್ಲಿಸುವಾಗ 60 ವರ್ಷ ಪೂರೈಸಿರಬೇಕು ಅಥವಾ ನ್ಯಾಯಮಂಡಳಿ ಅಥವಾ ನ್ಯಾಯಾಲಯಗಳು ಪ್ರಕರಣಗಳನ್ನು ವಿಚಾರಣೆಗೆ ಪರಿಗಣಿಸುವ, ಆದೇಶ ನೀಡುವ ಹಂತದೊಳಗೆ 60 ವರ್ಷ ಪೂರೈಸಿದರೆ ಸಾಕು ಎಂದು ನ್ಯಾಯಾಲಯ ತಿಳಿಸಿದೆ. ಪಾಲಕರು ಮತ್ತು ಹಿರಿಯ ನಾಗರಿಕರ ವ್ಯಾಖ್ಯಾನದಲ್ಲಿ ವ್ಯತ್ಯಾಸವಿದೆ ಎಂದು ಸ್ಪಷ್ಟಪಡಿಸಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net