ಬಿಬಿಎಂಪಿ ಮಾಜಿ ಸದಸ್ಯನಿಂದ ಬಿಡಿಎ ಸ್ವತ್ತು ಕಬಳಿಕೆ ಆರೋಪ

encroachment
encroachment
Published on

ಪ್ರಮುಖ ಮುಖ್ಯಾಂಶಗಳು

  • ಮಾರುಕಟ್ಟೆಯಲ್ಲಿ 75 ಕೋಟಿಗೂ ಹೆಚ್ಚು ಮೌಲ್ಯದ ಜಾಗ
  • ಬೆಂಗಳೂರಿನ ಜಾಗೃತ ಮತದಾರರ ವೇದಿಕೆಯಿಂದ ದೂರು ಸಲ್ಲಿಕೆ
ಬೆಂಗಳೂರು: ಜೆ.ಪಿ. ನಗರ 1ನೇ ಹಂತದ ಎಲ್‌ಐಸಿ ಕಾಲೋನಿ ಮತ್ತು ಐಟಿಐ ಬಡಾವಣೆಗೆ ಹೊಂದಿಕೊಂಡಿರುವ ಜಾಗದಲ್ಲಿ ಬಿಡಿಎಗೆ ಸೇರಿದ 12 ನಿವೇಶನಗಳನ್ನು ಬಿಬಿಎಂಪಿಯ ಮಾಜಿ ಸದಸ್ಯರೊಬ್ಬರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಕೆ ಮಾಡಿದ್ದಾರೆಂದು ಜಾಗೃತ ಮತದಾರರ ವೇದಿಕೆಯು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕು ಉತ್ತರಹಳ್ಳಿ ಹೋಬಳಿಯ ಮಾರೇನಹಳ್ಳಿ ಗ್ರಾಮಕ್ಕೆ ಸೇರಿದ ಸ್ವತ್ತು ದಶಕಗಳ ಹಿಂದೆಯೇ ಬಿಡಿಎ ಭೂಸ್ವಾಧೀನ ಮಾಡಿಕೊಂಡು ಲೇಔಟ್ ನಿರ್ಮಿಸಿತ್ತು. ಈ ಲೇಔಟ್‌ಗೆ ಸೇರಿದ ಕೆಲಸ ಸೈಟ್‌ಗಳು ಈಗಲೂ ಹಾಗೆಯೇ ಉಳಿದಿವೆ. ಇದನ್ನು ಗಮನಿಸಿ ಕಬಳಿಕೆದಾರರು ಇತ್ತೀಚಿಗೆ ಶೆಡ್‌ಗಳನ್ನು ನಿರ್ಮಿಸಿ ಆ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿ ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸಿ ಕಾನೂಕು ಕ್ರಮ ಕೈಗೊಳ್ಳುವಂತೆ ವೇದಿಕೆಯ ಕಾರ್ಯದರ್ಶಿ ಬಿ. ಗಣೇಶ್ ಸಿಂಗ್ ದೂರಿನ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹಾಲಿ ಜಾಗವು 28 ಸಾವಿರ ಚದರ ಅಡಿಗಳಿಗೂ ಹೆಚ್ಚು ವಿಸ್ತೀರ್ಣದ 12 ಸೈಟ್‌ಗಳು ಅಂದಾಜು 75 ಕೋಟಿ ರೂ.ಗೂ ಹೆಚ್ಚಿರುತ್ತದೆ. ಈ ಸೈಟ್‌ಗಳು ಹಂಚಿಕೆ ಆಗಿದ್ದರೂ, ಕೆಲವೊಂದರಲ್ಲಿ ಈವರೆಗೂ ಕಟ್ಟಡ ನಿರ್ಮಿಸದ ಕಾರಣ ಅವುಗಳನ್ನು ಕಬಳಿಕೆ ಮಾಡಲಾಗಿದೆ. ನೈಜ ಮಾಲೀಕರಿಗೆ ಹಂಚಿಕೆ ಮಾಡಿರುವ ಪತ್ರಗಳನ್ನು ಪರಾಮರ್ಶಿಸಿದರೆ ನಿವೇಶನಗಳ ನೈಜತೆ ಕಂಡುಬರಲಿದೆ. ಕಬಳಿಕೆ ಮಾಡಲೆಂದೇ ಅನಧಿಕೃತವಾಗಿ ನಿರ್ಮಿಸಿರುವ ಶೆಡ್‌ಗಳನ್ನು ತೆರವು ಮಾಡುವಂತೆಯೂ ಅವರು ಆಗ್ರಹಿಸಿದ್ದಾರೆ.

ಅಧಿಕಾರಿಗಳ ಷಾಮೀಲು ಆರೋಪ:

ಬಿಡಿಎ ನಿವೇಶನಗಳನ್ನು ಕಬಳಿಕೆ ಮಾಡಲು ಖಾಸಗಿ ವ್ಯಕ್ತಿಗಳು ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಜತೆಗೆ ಆ ಜಾಗದಲ್ಲಿ ಅನಧಿಕೃತವಾಗಿ ಶೆಡ್‌ಗಳನ್ನು ನಿರ್ಮಿಸಿದ್ದರೂ, ಪ್ರಾಧಿಕಾರದ ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ಪ್ರಭಾವೀ ಸರ್ಕಾರಿ ನೆಲಗಳ್ಳರೊಂದಿಗೆ ಷಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಅವರು ಬಿಡಿಎಅನ್ನು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net