ಮಕ್ಕಳ ಆಸಕ್ತಿ, ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು ಸಲಹೆ

childrens-talents
childrens-talents
Published on

ಪ್ರಮುಖ ಮುಖ್ಯಾಂಶಗಳು

  • ಪಾಲಕರಿಗೆ ಕೆಎಲ್‌ಇ ಗೌರವ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಕರೆ
  • ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಮಾಜಿ ಸಂಸದ

ಬೆಂಗಳೂರು: ಪಾಲಕರು ತಮ್ಮ ಆಶಯದಂತೆ ಮಕ್ಕಳನ್ನು ಬೆಳೆಸುವ ಬದಲು, ಮಕ್ಕಳಲ್ಲಿರುವ ಆಸಕ್ತಿ ಹಾಗೂ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಇದರಿಂದ ಭವಿಷ್ಯದಲ್ಲಿ ಮಕ್ಕಳು ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಕೆಎಲ್‌ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅಭಿಪ್ರಾಯಪಟ್ಟರು.

ನಗರದ ನಿಜಲಿಂಗಪ್ಪ ಕಾಲೇಜು ಆವರಣದಲ್ಲಿ ಕೆಎಲ್‌ಇ ಸಂಸ್ಥೆಯ ಬೆಂಗಳೂರಿನಲ್ಲಿರುವ ವಿವಿಧ ವಿದ್ಯಾಲಯಗಳ ವತಿಯಿಂದ ಶನಿವಾರ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಪ್ರಸ್ತುತ ಆರೋಗ್ಯ ಕಾಳಜಿಗೆ ಬೇಕಾದ ಹಲವು ಅಂಶಗಳು ಕಲುಷಿತಗೊಳ್ಳುತ್ತಿದೆ. ಇದನ್ನು ಗ್ರಹಿಸಿ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ಹಾಗೂ ಉತ್ತಮ ಆರೋಗ್ಯವನ್ನು ಒದಗಿಸುವ ಮೂಲಕ ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಬೇಕು. ಅಲ್ಲದೆ ಇಂದಿನ ಯುವಕರು ತಮ್ಮ ಜೀವನಶೈಲಿಯಿಂದ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಜೀವನಶೈಲಿ ಸರಿಯಾಗಿದ್ದರೆ ಅನೇಕ ಸಂದರ್ಭಗಳಲ್ಲಿ ಆಸ್ಪತ್ರೆಯ ಅವಶ್ಯಕತೆಯನ್ನೇ ತಪ್ಪಿಸಬಹುದು. ಇದನ್ನು ಮನಗಂಡು ಕೆಎಲ್‌ಇ ಸಂಸ್ಥೆ ಶಿಕ್ಷಣದ ಜತೆಗೆ ಆರೋಗ್ಯಕ್ಕೂ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಅವರು ವಿವರಿಸಿದರು.
ಇದೇ ವೇಳೆ ವಿದ್ಯಾರ್ಥಿಗಳಿಂದ ರಾಷ್ಟ್ರಭಕ್ತಿ ಗೀತೆಗಳ ಗಾಯನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಮಲ್ಲಿಕಾರ್ಜುನಯ್ಯ ಸೇರಿ ಬೆಂಗಳೂರಿನಲ್ಲಿರುವ ಕೆಎಲ್‌ಇಯ ವಿವಿಧ ವಿದ್ಯಾಲಯಗಳ ಪ್ರಾಂಶುಪಾಲರು, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

ಸ್ವಾತಂತ್ರ್ಯ ಹೋರಾಟಕ್ಕೆ ಉ.ಕ. ಜನರ ಕೊಡುಗೆ:

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಉತ್ತರ ಕರ್ನಾಟಕದ ಮಂದಿ ಹೆಚ್ಚು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಆ ಭಾಗದ ಪ್ರತಿಯೊಂದು ಮನೆಯಲ್ಲಿಯೂ ಸ್ವಾತಂತ್ರ್ಯ ಹೋರಾಟಗಾರರಿದ್ದರು. ಇಂದಿಗೂ ಭಾರತೀಯ ಸೇನೆಯಲ್ಲಿ ಉತ್ತರ ಕರ್ನಾಟಕದವರ ಪಾಲು ಬಹಳಷ್ಟಿದೆ. ಬೆಳಗಾವಿಯು ಕರ್ನಾಟಕದಲ್ಲಿಯೇ ಉಳಿಯುವಲ್ಲಿ ಕೆಎಲ್‌ಇ ಸಂಸ್ಥೆಯೂ ಕಾರಣವಾಗಿದೆ. ನನಗೆ ಪದ್ಮಶ್ರೀ ಸೇರಿ ಇತರ ಪ್ರಶಸ್ತಿ ದೊರೆತಿದ್ದರೂ, ಅದು ಕೆಎಲ್‌ಇ ಕುಟುಂಬಕ್ಕೆ ಸಂದ ಗೌರವವಾಗಿದೆ. ಅಂತಹ ಎಲ್ಲ ಗೌರವಗಳನ್ನು ಕೆಎಲ್‌ಇ ಬಳಗಕ್ಕೆ ಹಾಗೂ ಸಂಸ್ಥೆಯನ್ನು ಕಟ್ಟಿಬೆಳೆಸಿದ ಸಪ್ತರ್ಷಿಗಳಿಗೆ ಅರ್ಪಿಸುತ್ತೇನೆ ಎಂದು ಡಾ. ಪ್ರಭಾಕರ ಕೋರೆ ಹೇಳಿದರು.


ರಾಜಧಾನಿಯಲ್ಲಿ ಮೊದಲ ಬಾರಿಗೆ ಧ್ವಜಾರೋಹಣ:

ಕೆಎಲ್‌ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಪ್ರಥಮ ಬಾರಿಗೆ ಬೆಂಗಳೂರಿನ ಕೆಎಲ್‌ಇ ವಿದ್ಯಾಲಯಗಳ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ರಾಷ್ಟ್ರಧ್ವಜವನ್ನು ಹಾರಿಸಿದರು. ಹಿಂದಿನ ವರ್ಷಗಳಲ್ಲಿ ಅವರು ಬೆಳಗಾವಿಯಲ್ಲಿನ ಸಂಸ್ಥೆಗಳಲ್ಲಿ ನಡೆಯುತ್ತಿದ್ದ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net