ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಉತ್ತರ ಪಾಲಿಕೆ ಆಯುಕ್ತ ಸುನೀಲ್ ಕುಮಾರ್
ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ 12 ಸಾವಿರ ಬೀದಿ ನಾಯಿಗಳಿಗೆ ಪ್ರಾಣಿ ಜನನ ನಿಯಂತ್ರಣ (ಎಬಿಸಿ) ಶಸ್ತ್ರಚಿಕಿತ್ಸೆ ಹಾಗೂ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಜತೆಗೆ ಮುಂದಿನ ಒಂದೂವರೆ ವರ್ಷದಲ್ಲಿ 30,000 ಬೀದಿ ನಾಯಿಗಳಿಗೆ ಎಬಿಸಿ ಕೈಗೊಳ್ಳುವ ಬಗ್ಗೆ ಗಮನ ಹರಿಸುವಂತೆ ಉತ್ತರ ಪಾಲಿಕೆ ಆಯುಕ್ತ ಪಿ.ಸುನೀಲ್ ಕುಮಾರ್ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಬೀದಿ ನಾಯಿಗಳ ನಿರ್ವಹಣೆ, ಪ್ರಾಣಿ ಜನನ ನಿಯಂತ್ರಣ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನ, ಬೀದಿ ನಾಯಿಗಳ ಆಶ್ರಯ ಕೇಂದ್ರಗಳ ಅಭಿವೃದ್ಧಿ ಹಾಗೂ ಸಾರ್ವಜನಿಕ ಸುರಕ್ಷತೆಗೆ ಸಂಬಂಧಿಸಿ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡು ಅವರು ಈ ನಿರ್ದೇಶನವನ್ನು ನೀಡಿದರು.
ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ಅಗತ್ಯ ಪ್ರಮಾಣದಲ್ಲಿ ಸಿಬ್ಬಂದಿ ಲಭ್ಯವಿರುವುದು ಅತ್ಯಂತ ಮುಖ್ಯವಾಗಿದ್ದು, ನಾಯಿ ಹಿಡಿಯುವ ಸಿಬ್ಬಂದಿಗಳ ಕೊರತೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ನಿಟ್ಟಿನಲ್ಲಿ ಅಗತ್ಯ ಮಾನವ ಸಂಪನ್ಮೂಲವನ್ನು ಹೆಚ್ಚಿಸಿ ಕಾರ್ಯಾಚರಣೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸುವಂತೆ ಸೇವಾ ಪೂರೈಕೆದಾರರಿಗೆ ಸೂಚಿಸಲಾಯಿತು.
ದಾಸರಹಳ್ಳಿಯಲ್ಲಿ ಹೊಸ ಶೆಲ್ಟರ್ ಸ್ಥಾಪನೆ:
ಪಾಲಿಕೆಯ ಬೀದಿ ನಾಯಿಗಳ ನಿರ್ವಹಣೆಯನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ದಾಸರಹಳ್ಳಿ ಎಬಿಸಿ ಕೇಂದ್ರದಲ್ಲಿ ಮತ್ತೊಂದು 500 ನಾಯಿಗಳ ಆಶ್ರಯ ಕೇಂದ್ರ ಆರಂಭಿಸುವ ಕುರಿತು ತೀರ್ಮಾನಿಸಲಾಯಿತು.
2025-26ನೇ ಸಾಲಿನಲ್ಲಿ ಉತ್ತರ ಪಾಲಿಕೆಯಲ್ಲಿ ಅಂದಾಜು 7,000 ಬೀದಿ ನಾಯಿಗಳಿಗೆ ಜನನ ನಿಯಂತ್ರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಯ 65,041 ನಾಯಿಗಳ ಪೈಕಿ ಶೇ.60 ನಾಯಿಗಳಿಗೆ ಎಬಿಸಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಕಂದಾಯ ವಿಭಾಗದ ಅಪರ ಆಯುಕ್ತೆ ಪಲ್ಲವಿ, ಜಂಟಿ ಆಯುಕ್ತ ಮೊಹಮ್ಮದ್ ನಯೀಮ್ ಮೊಮಿನ್ ಸೇರಿ ಕರ್ನಾಟಕ ಪ್ರಾಣಿ ಸಂರಕ್ಷಣಾ ಮಂಡಳಿ, ಪಶುಪಾಲನೆ ವಿಭಾಗದ ಅಧಿಕಾರಿಗಳು ಹಾಜರಿದ್ದರು.
ಮೈಕ್ರೋಚಿಪ್ ಅಳವಡಿಕೆ ಕುರಿತು ಚರ್ಚೆ:
ಮುಂದಿನ ದಿನಗಳಲ್ಲಿ ಎಬಿಸಿ ಶಸ್ತ್ರಚಿಕಿತ್ಸೆಯ ಬಳಿಕ ಅಂತಹ ನಾಯಿಗಳಿಗೆ ಮೈಕ್ರೋಚಿಪ್ ಅಳವಡಿಸುವ ವ್ಯವಸ್ಥೆ ಜಾರಿಗೊಳಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಮೈಕ್ರೋಚಿಪ್ ತಂತ್ರಜ್ಞಾನವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಆಧುನಿಕ ಕಸಾಯಿಖಾನೆಗಳ ಅಧ್ಯಯನ:
ಸಭೆಯಲ್ಲಿ ನಾಗರಿಕ ಕಸಾಯಿಖಾನೆಯ ನಿರ್ವಹಣೆ ಮತ್ತು ಆಧುನೀಕರಣ ಕುರಿತು ಚರ್ಚೆ ನಡೆಯಿತು. ದೇಶದ ಇತರ ಭಾಗಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಾದರಿ ಕಸಾಯಿಖಾನೆಗಳನ್ನು ಅಧ್ಯಯನ ಮಾಡಿ, ಉತ್ತಮ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಕುರಿತು ವರದಿ ಸಲ್ಲಿಸುವಂತೆ ನಿರ್ದೇಶಿಸಲಾಯಿತು.